ಬೆಂಗಳೂರು: ಜಯನಗರ, ಸಾರಕ್ಕಿ ಸಿಂಧೂರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಸೇವಕ್ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ 500 ಮಹಿಳೆಯರಿಗೆ ಬಾಗಿನ ವಿತರಣೆ ಮತ್ತು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಜನಜಾಗೃತಿ ಅಭಿಯಾನ ನಡೆಸಲಾಯಿತು.
ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗೆ ಸಹಕಾರ ನೀಡಿತು ಎಂದರು.
ಇಂದು ಸ್ವಸಹಾಯ ಗುಂಪಿನಿಂದ ಮಹಿಳೆಯರಿಗೆ ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸಲು ಸ್ವಸಹಾಯ ಸಂಘ ಸಹಕಾರಿಯಾಗಿದೆ ಎಂದರು.
ಬಾಗಿನ ನೀಡುವುದು ಶುಭಕರ ಸಂಕೇತ. ಮಹಿಳೆಯರಿಗೆ ಪ್ರಮುಖ ಹಬ್ಬಗಳಲ್ಲಿ ಸಂಪ್ರಾದಯದ ಪ್ರಕಾರ ಅರಿಶಿನ, ಕುಂಕುಮ, ಹಸಿರು ಗಾಜಿನ ಬಳೆ, ವಿವಿಧ ಶುಭಕರವಾದ ವಸ್ತುಗಳನ್ನು ಕೊಟ್ಟು, ಶುಭಾಶಯ ಕೋರುವುದು ವಿಶೇಷವಾಗಿದೆ ಎಂದರು.
ಜೆ.ಪಿ.ನಗರದಲ್ಲಿ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಒಂದೇ ಕುಟುಂಬದವರಂತೆ ಸಹಬಾಳ್ಮೆ ಮೂಲಕ ಬದುಕೋಣ ಎಂಬ ಸಂದೇಶ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊರೋನ ಸಾಂಕ್ರಮಿಕ ರೋಗ ಇನ್ನು ಮುಕ್ತವಾಗಿಲ್ಲ ಜನ ಜಾಗೃತಿಯಿಂದ ಗಣೇಶ ಹಬ್ಬವನ್ನು ಮನೆಯಲ್ಲಿ ಅಚರಣೆ ಮಾಡಿ. ಸಾಮೂಹಿಕ ಗಣೇಶ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ತರಬೇಕು ಎಂದರು.
ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯುತ್ತಾನೆ. ಈ ಬಾರಿ ಗಣೇಶ ಪ್ರತಿಷ್ಠಾಪನೆ ಮಾಡುವ ಮನೆಗಳಲ್ಲಿ ಬಣ್ಣದ ರಾಸಾಯನಿಕ ಗಣೇಶ ಮೂರ್ತಿಗಳು ಬೇಡ, ಅದರ ಬದಲು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತನ್ನಿ. ಮಣ್ಣಿನ ಗಣೇಶ ನೀರಿನಲ್ಲಿ ಕರಗಿದರೆ ಯಾವುದೇ ಹಾನಿಯಿಲ್ಲ, ಪರಿಸರವು ಉಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಯನಗರ ಶಾಸಕಿ ಸೌಮ್ಯರೆಡ್ಡಿ, ಕಾಂಗ್ರೆಸ್ ಮುಖಂಡ ಅರುಣ್ ಕುಮಾರ್, ಸೇವಕ್ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷೆ ಮಂಜುಳ ಅರುಣ್ ಕುಮಾರ್, ನಟಿ ರಾಧ ಮತ್ತು ಡಾ.ಗೀತಾ ಮೊದಲಾದವರು ಭಾಗವಹಿಸಿದ್ದರು.




