ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ತಹಬಂದಿಗೆ ಬಂದಿದ್ದ ನೈತಿಕ ಪೊಲೀಸ್ ಗಿರಿ ಮತ್ತೊಮ್ಮೆ ದೊಡ್ಡದಾಗಿ ಸದ್ದು ಮಾಡತೊಡಗಿದೆ. ಇತ್ತೀಚೆಗೆ ಬೆಳಗಾವಿ ಮತ್ತು ಹಾವೇರಿಯಲ್ಲಿ ನೈತಿಕ ಪೊಲೀಸ್ ಹೆಸರಲ್ಲಿ ನಡೆದ ದುಷ್ಕ್ರತ್ಯಗಳ ವಿರುದ್ಧ ರಾಜ್ಯ ಸರ್ಕಾರ ನಿರ್ಣಾಯಕ ನಿರ್ಧಾರ ಕೈಗೊಂಡಿದೆ.
ನೈತಿಕ ಪೊಲೀಸ್ಗಿ ರಿ ವಿಷಯವಾಗಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನೈತಿಕ ಪೊಲೀಸ್ ಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಕಾರ್ಯತಂತ್ರ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಆಯೋಜಿಸಿರುವ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತೀಯ ಗೂಂಡಾಗಿರಿ ಎಲ್ಲೇ ನಡೆದರೂ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದರು.
ನೈತಿಕ ಪೊಲೀಸ್ ಗಿರಿ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಪೊಲೀಸರಿಗೆ ಉನ್ನತಮಟ್ಟದ ಸೂಚನೆ ನೀಡಿದ್ದೇವೆ. ಎಲ್ಲೇ ಆಗಲೀ, ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇರಬಾರದು. ಇಂತಹದ್ದನ್ನೆಲ್ಲಾ ಮಟ್ಟ ಹಾಕಬೇಕೆನ್ನುವುದು ಸರ್ಕಾರದ ನಿಲುವಾಗಿದೆ ಎಂದರು.
ಅಯೋಧ್ಯೆಯಲ್ಲಿನ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನೀಡಲಾದ ಆಹ್ವಾನವನ್ನು ಕಾಂಗ್ರೆಸ್ ಹೈಕಮಾಂಡ್ ಗೌರವಯುತವಾಗಿ ತಿರಸ್ಕರಿಸಿದೆ. ಈ ನಿಲುವಿಗೆ ನಾವೆಲ್ಲಾ ಬದ್ಧರಾಗಿದ್ದೇವೆ. ಪಕ್ಷ ಹೇಳಿದಂತೆ ಕೇಳುವುದು ನಮ್ಮ ಕರ್ತವ್ಯ. ಸಂದರ್ಭ ಬಂದರೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯವನ್ನು ಹೈಕಮಾಂಡ್ಗೆೇ ತಿಳಿಸುತ್ತೇನೆ. ಸದ್ಯಕ್ಕೆ ಪಕ್ಷ ಹೇಳಿದಂತೆ ಪಾಲನೆ ಮಾಡುತ್ತೇವೆ. ನಾವ್ಯಾರೂ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದರು.




