ಗೋಕಾಕ್: ಕಳೆದ 30 ವರ್ಷಗಳಿಂದ ರಮೇಶ್ ಅವರಿಗೆ ರಾಜಕೀಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸಲಹೆ ನೀಡುತ್ತಾ ಬಂದಿದ್ದೇನೆ. ರಾಜಕಾರಣದಲ್ಲಿ ಇಂತಹ ಘಟನೆಗಳು ನಡೆಯಬಾರದು. ಇದು ಸಹೋದರರಿಗೆ ಅಷ್ಟೆ ಅಲ್ಲ. ಯಾರೊಂದಿಗೂ ಆಗಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿದ ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 30 ವರ್ಷಗಳಿಂದಲೂ ಸಹೋದರ ರಮೇಶ್ ಅವರಿಗೆ ರಾಜಕೀಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸಲಹೆ ನೀಡುತ್ತಾ ಬಂದಿದ್ದೇನೆ. ಅಧಿಕಾರ ಬರುತ್ತೆ, ಹೋಗುತ್ತೆ. ಸಾಮಾಜಿಕ ಜೀವನದಲ್ಲಿ ಜನ ಮುಖ್ಯ ಎಂದರು.
ರಾಜಕೀಯದಲ್ಲಿ ಬೆಳೆದಂತೆ ವಿರೋಧಿಗಳು ಹೆಚ್ಚುತ್ತಾರೆ. ಅದರ ಪರಿಜ್ಞಾನ ನಮಗೆ ಇರಬೇಕು. ನಮ್ಮ ಪ್ರತಿಯೊಂದು ನಿರ್ಧಾರ ಹಾಗೂ ಹೆಜ್ಜೆಗಳು ಅತ್ಯಂತ ಸೂಕ್ಷ್ಮವಾಗಿರಬೇಕು. ಸಹೋದರರಾಗಲಿ, ಆತ್ಮೀಯರಾಗಲಿ ಹಾಗೂ ತಾವು ನಂಬಿದವರೊಂದಿಗೆ ಸಮನ್ವಯತೆ ಸಾಧಿಸಬೇಕು. ಸಮನ್ವಯತೆ ಕೊರತೆಯಿಂದ ಕೆಲವೊಮ್ಮೆ ಹಿನ್ನಡೆಯಾಗುವುದು ಸಹಜ. ಅದೇನೇ ಆದರೂ ಈಗ ಅದು ಮುಗಿದುಹೋದ ಅಧ್ಯಾಯ. ಪ್ರಕರಣದ ಕುರಿತು ಪೊಲೀಸರು ತೀವ್ರ ತನಿಖೆ ನಡೆಸಿ ಇದರ ಹಿಂದಿನ ಸತ್ಯವನ್ನು ಭೇದಿಸಬೇಕು ಎಂದರು.
ಶಾಸಕರ ಬೆಂಬಲಿಗರು ಮಾಡುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೇ ಬೆಂಬಲಿಗರಾದರೂ ನೋವಾಗುವುದು ಸಹಜ. ಆದರೆ ಪ್ರತಿಭಟನೆಗಳು ಪ್ರತಿಭಟನೆಗಳಾಬೇಕೇ ವಿನಹ ವಿಕೃತ ರೂಪ ಪಡೆಯಬಾರದು. ಶಾಂತ ರೀತಿಯಿಂದ ತಮ್ಮ ಅಹವಾಲನ್ನು ಸಲ್ಲಿಸಬೇಕು ಎಂದರು.




