ಬೆಂಗಳೂರು: ಮುಖ್ಯಮಂತ್ರಿಗಳ ಸಲಹೆಗಾರ ಹುದ್ದೆ ರಾಜಕೀಯ ಗಂಜಿ ಕೇಂದ್ರಗಳಾಗಿವೆ ಎಂದು ವ್ಯಂಗ್ಯವಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹದಿನಾಲ್ಕು ಬಾರಿ ದಾಖಲೆಯ ಆಯವ್ಯಯ ಮಂಡಿಸಿರುವ ಮುಖ್ಯಮಂತ್ರಿ ತಮಗೆ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿರುವುದಕ್ಕೆ ಏನನ್ನಬೇಕು ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಭವಿ ಆರ್ಥಿಕ ತಜ್ಞರನ್ನು ಸಲಹೆಗಾರರನ್ನಾಗಿ ಮಾಡಿಕೊಂಡಿದ್ದರೆ ಅಭಿನಂದಿಸಬಹುದಿತ್ತು. ಆದರೆ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಅಲ್ಲದೆ ಆಡಳಿತ ಸುಧಾರಣಾ ಆಯೋಗಕ್ಕೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರನ್ನು ನೇಮಕ ಮಾಡಿಕೊಂಡಿದ್ದಾರೆ. ಇವು ಗಂಜಿ ಕೇಂದ್ರಗಳೇ ಎಂದರು.
ಈ ಹಿಂದೆ ಹಾರನಹಳ್ಳಿ ರಾಮಸ್ವಾಮಿ ಅವರು, ಇತ್ತೀಚೆಗೆ ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರು ಆಡಳಿತ ಸುಧಾರಣಾ ಆಯೋಗದ ವರದಿಯನ್ನು ನೀಡಿದ್ದಾರೆ. ಅವುಗಳ ಅನುಷ್ಠಾನ ಎಷ್ಟರಮಟ್ಟಿಗೆ ಆಗಿದೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ನೇತೃತ್ವದ ಸದನದ ಸಮಿತಿ ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ನೀಡಿದ ವರದಿ ಅನುಷ್ಠಾನ ಏಕೆ ಆಗಲಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ ವರದಿ ಸ್ವೀಕರಿಸಲಿಲ್ಲ ಎಂದು ಆರೋಪಿಸಿರುವ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದಿದೆ. ಇನ್ನೂ ಏಕೆ ವರದಿ ಸ್ವೀಕರಿಸಿಲ್ಲ ಎಂದರು.
ರಾಜ್ಯದಲ್ಲಿ ತೀವ್ರ ಸ್ವರೂಪದ ಬರವಿದ್ದರೂ ರೈತರಿಗೆ ನೀಡಿದ್ದ 2000 ಪರಿಹಾರ ಧನವನ್ನು ಇನ್ನು ನೀಡಿಲ್ಲ. ನೀಡಲು ಶಕ್ತಿಯೂ ಇಲ್ಲ. ಆದರೂ ನುಡಿದಂತೆ ನಡೆದಿದ್ದೇವೆ ಎಂದು ನಿತ್ಯ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದಿನ ಸರ್ಕಾರದ ಕೋವಿಡ್ ಅವಧಿಯಲ್ಲಿ 40 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿರುವುದನ್ನು ನಂಬಲಾಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಈ ವಿಚಾರದ ಸತ್ಯಾಸತ್ಯತೆಯನ್ನು ಹೊರಗೆ ತರಲು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಬಳಿ ಅಂಕಿಅಂಶಗಳಿವೆ, ಕೋವಿಡ್ ಅವಧಿಯಲ್ಲಿ ಎಷ್ಟು ಹಣ ಬಿಡುಗಡೆಯಾಯ್ತು ಎಂಬುದನ್ನು ಹೇಳಬೇಕಲ್ಲವೇ? ಅದನ್ನು ಬಿಟ್ಟು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುವುದಾದರೆ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರು ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದೇವೆ ಎಂದು ಹೇಳಿದ್ದರಲ್ಲವೇ, ಆ ವಿಚಾರವನ್ನು ನಾವು ಬಳಸಿಕೊಳ್ಳುತ್ತೇವೆ ಎಂದರು.
ಹಿಂದಿನ ಸರ್ಕಾರದಲ್ಲಿ ಲೋಪದೋಷಗಳು ನಡೆದಿಲ್ಲ ಎಂದಲ್ಲ. ಆದರೆ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು ಆ ಪಕ್ಷಕ್ಕೆ ಸೇರಿದ ವಿಚಾರವಾಗಿದ್ದು, ನಾವು ಮೂಗು ತೂರಿಸುವುದಿಲ್ಲ ಎಂದರು. ಪಾರದರ್ಶಕವಾಗಿರುವ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಯತ್ನಾಳ್ ಅವರ ಹೇಳಿಕೆಯನ್ನು ಬಳಸಿಕೊಳ್ಳುತ್ತಿದೆ ಎಂದರು.




