ಮಕ್ಕಳ ಕೈನಲ್ಲೇ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ ಎಂದರೆ ಏನರ್ಥ?: ಆರ್.ಅಶೋಕ್

2 years ago

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ಥಿತ್ವದಲ್ಲಿ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

ಯಶವಂತಪುರ ವಿಧಾನಸಭೆ ಕ್ಷೇತ್ರದ ಅಂದ್ರಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದಲೇ ಶೌಚಾಲಯ ಶುಚಿಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದಷ್ಟೇ ಕೋಲಾರ ಜಿಲ್ಲೆ ಮಾಲೂರಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಮಕ್ಕಳ ಕೈಯಲ್ಲಿ ಶೌಚ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ನಡೆದು ಕೋಲಾಹಲವಾಗಿದೆ. ಆ ನೆನಪು ಮಾಸುವ ಮೊದಲೇ ವಿಧಾನಸೌಧದ ಕೂಗಳತೆ  ದೂರದಲ್ಲಿರುವ ರಾಜಧಾನಿಯಲ್ಲೇ ಮತ್ತದೇ ಘಟನೆ ಮರುಕಳಿಸಿದೆ. ಇದು ದುರದೃಷ್ಟಕರ ಸಂಗತಿ ಎಂದರು.

ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾನೂನಿನ ಅರಿವೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಲಾಖೆ ಮುಖ್ಯಸ್ಥರು ಸರಿ ಇದ್ದರೆ ಇಡೀ ಇಲಾಖೆಯ ವ್ಯವಸ್ಥೆ ಸರಿ ಇರುತ್ತದೆ. ಈಗಾಗಲೇ ಒಂದು ಘಟನೆ ನಡೆದಿರುವ ಬೆನ್ನಲ್ಲೇ ಮತ್ತೆ ಮಕ್ಕಳ ಕೈನಲ್ಲೇ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ ಎಂದರೆ ಏನರ್ಥ? ಈ ಸರಕಾರ ಜನತೆಯ ಪಾಲಿಗೆ ಸತ್ತಂತಿದೆ. ಆದ್ದರಿಂದಲೇ ಇಂಥ ಪ್ರಕರಣ ಮರುಕಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳು ಇದ್ದರೂ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮೇಲಿನ ಹಂತದಲ್ಲಿರುವ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುವ ಕೆಲಸ ಮಾಡುತ್ತಿದ್ದರೆ. ಇಂಥ ಅನಾಹುತಗಳು ಆಗುವುದಿಲ್ಲ ಎಂದರು.

ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುವ ಪರಿಪಾಟವನ್ನು ಇಲಾಖೆ ಸಚಿವರ  ಆದಿಯಾಗಿ ಎಲ್ಲ ಹಿರಿಯ  ಅಧಿಕಾರಿಗಳು ಪಾಲಿಸಬೇಕು ಆಗ ವ್ಯವಸ್ಥೆಯ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಸಾಧ್ಯವಿದೆ. ಸಚಿವರುಗಳೇ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತಿದ್ದರೆ ಪರಿಸ್ಥಿತಿ ಸುಧಾರಣೆ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.

ಇದಕ್ಕೂ ಮೊದಲು ಮಕ್ಕಳಿಂದ ಸ್ವಚ್ಛಗೊಳಿಸಲಾಗಿದೆ ಎಂಬ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮುಖ್ಯಶಿಕ್ಷಕಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಜತೆ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಮಕ್ಕಳ ಜತೆಗೂ ಸಂವಾದ ನಡೆಸಿದ ಪ್ರತಿಪಕ್ಷದ ನಾಯಕರು, ಘಟನೆಗೆ ಕಾರಣಗಳನ್ನು ಕೇಳಿ ತಿಳಿದುಕೊಂಡರು. ಶಾಲೆಗೆ ನೀಡುವ ಅನುದಾನದಲ್ಲಿ ಸ್ವಚ್ಛತೆಗೆ ಪ್ರತ್ಯೇಕ ಹಣ ನೀಡಿದ್ದರೂ ಮುಖ್ಯ ಶಿಕ್ಷಕರು ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂದು ಸ್ಥಳದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆರೋಪಿಸಿದ ಪ್ರಸಂಗವೂ ನಡೆಯಿತು.

ಶಾಲೆಯಲ್ಲಿ ನೀಡುವ ಚುಕ್ಕಿ ಕೊಟ್ಟು ಶೌಚಾಲಯ ಸ್ವಚ್ಛಗೊಳಿಸಲು ಮುಖ್ಯಶಿಕ್ಷಕರು ಸೂಚನೆ ನೀಡುತ್ತಾರೆ ಎಂದು ಮಕ್ಕಳು ತಿಳಿಸಿದರು. ಶಾಲೆಯಲ್ಲಿ ನೀರಿನ ಸಮಸ್ಯೆ ಕೂಡ ಇದೆ. ಹೊರಗಿನಿಂದ ತರಿಸಲಾಗುತ್ತದೆ. ಹಿಂದೆನಿಂದಲೂ ಮಕ್ಕಳ ಕೈನಲ್ಲೇ ಶೌಚಾಲಯವನ್ನು ಸ್ವಚ್ಛ ಮಾಡಿಸಲಾಗುತ್ತಿದ್ದು, ಅದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ ಎಂಬ ಅಂಶವನ್ನೂ ಮಕ್ಕಳು ಈ ವೇಳೆ ತಿಳಿಸಿದರು.

ಶಾಲೆಯ ಹೊರಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೋಷಕರು ಮತ್ತು ಸ್ಥಳೀಯ ಗ್ರಾಮಸ್ಥರ ಅಹವಾಲನ್ನೂ ಅಶೋಕ್ ಕೇಳಿದರು. ಭೇಟಿ ಸಂದರ್ಭದಲ್ಲಿ ಸ್ಥಳೀಯ ಶಾಸಕ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಇದ್ದರು.

Leave a Reply