ಭಯೋತ್ಪಾದನೆ ನಿಗ್ರಹಕ್ಕೆ ‌ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು  ಸೂಚಿಸಲಾಗಿದೆ: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹಿಸುವ ದೃಷ್ಟಿಯಿಂದ ‌ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಈ ಕುರಿತು ಭಯೋತ್ಪಾದನಾ ನಿಗ್ರಹ ದಳದ ಜೊತೆಗೆ ಸೇರಿ ಕೆಲಸ ಮಾಡಲು ನಿರ್ದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳು ಹಾಗೂ ಅದರಲ್ಲಿರುವ ಶಂಕಿತರ ಮೇಲೆ ನಿಗಾ ವಹಿಸಬೇಕು ಎಂದು ರಾಜ್ಯದ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ
ಶೀಥಲೀಕರಣದಲ್ಲಿರುವ ಪ್ರಕರಣಗಳಿಗೆ ಮರುಜೀವ ನೀಡಬೇಕು ಎಂದು ಸೂಚನೆ ನೀಡಿದ್ದೇನೆ. ಯಾರು ಸಕ್ರಿಯವಾಗಿದ್ದಾರೆ, ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದು ಕಾಲಕಾಲಕ್ಕೆ ಮಾಹಿತಿ ಇರಬೇಕು ಎಂದು ಹೇಳಿದರು.

ಶಂಕಿತ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ತನಿಖಾ ದಳ ರಾಜ್ಯದಿಂದ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಿದೆ. ಆದರೆ ಈ ಮೊದಲೇ ರಾಜ್ಯದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆತನ ಚಲನವಲನಗಳ ಮೇಲೂ ನಿಗಾ ವಹಿಸಲಾಗಿತ್ತು. ಎನ್‍ಐಎಗೆ ಮಾಹಿತಿ ತಡವಾಗಿ ಸಿಕ್ಕಿದೆ ಎಂದರು.

ಸಂಸತ್‍ನಲ್ಲಿನ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆಯಲ್ಲಿನ ಯುವಕನೊಬ್ಬನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಬಂಧಿತ ಆರೋಪಿ ಮನೋರಂಜನ್ ಜೊತೆ ಡಿಸೆಂಬರ್ 4 ವರೆಗೂ ಬಾಗಲಕೋಟೆ ಯುವಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹೀಗಾಗಿ ಸಂಸತ್ ಮೇಲಿನ ದಾಳಿ ಬಗ್ಗೆ ಯಾವುದಾದರೂ ಮಾಹಿತಿ ಹಂಚಿಕೊಂಡಿದ್ದನೇ ಎಂಬ ವಿವರ ಪಡೆದುಕೊಳ್ಳಲು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.

Leave a Reply