ಅಧಿಕಾರದಲ್ಲಿದ್ದಾಗ ಮಾದಿಗ ಸಮುದಾಯಕ್ಕೆ ನೀವು ಅನ್ಯಾಯ ಮಾಡಿದ್ದೀರಿ?: ಕಾರಜೋಳ ವಿರುದ್ಧ ವಾಗ್ದಾಳಿ

2 years ago

ಚಿತ್ರದುರ್ಗ / ಬೆಂಗಳೂರು: ಮಾಜಿ ಸಚಿವ ಗೋವಿಂದ ಕಾರಜೋಳ ಚಿತ್ರದುರ್ಗದ ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಮಾದಿಗ ಮಹಾಸಭಾ ಸದಸ್ಯರು ಏಕಾಏಕಿ ನುಗ್ಗಿ ವಾಗ್ವಾದ ನಡೆಸುವ ಮೂಲಕ ಗೊಂದಲದ ವಾತಾವರಣ ಸೃಷ್ಟಿಗೆ ಕಾರಣರಾದರು.

ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್‌ ಠಾಣೆಯಲ್ಲಿ ಹತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯನ್ನು ಕಾಂಗ್ರೆಸ್ ಪ್ರೇರಿತ ದಾಳಿ ಎಂದು ಆರೋಪಿಸಿರುವ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ಬಂದ ಮಾದಿಗ ಮಹಾಸಭಾ ಸದಸ್ಯರು, ಬಿಜೆಪಿ ಅವಧಿಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಅಧಿಕಾರದಲ್ಲಿದ್ದಾಗ ಮಾದಿಗ ಸಮುದಾಯಕ್ಕೆ ನೀವು ಅನ್ಯಾಯ ಮಾಡಿದ್ದೀರಿ. ಸಮುದಾಯದ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಜನರ ಪ್ರಶ್ನೆ ಕೇಳಿ ಕೆರಳಿದ ಗೋವಿಂದ ಕಾರಜೋಳ, ಸಮುದಾಯದ ಬಗ್ಗೆ ಮಾತನಾಡಲು ಕಾಲಾವಕಾಶವಿದೆ. ಬಿಜೆಪಿ ಪತ್ರಿಕಾಗೋಷ್ಠಿಗೆ ನುಗ್ಗಿ ಗಲಾಟೆ ಮಾಡುವುದು ಸರಿಯಲ್ಲ ಹೊರಗೆ ನಡೆಯಿರಿ ಎಂದು ತಿರುಗೇಟು ನೀಡಿದರು.

ಆನಂತರ ಇದನ್ನು ಕಾಂಗ್ರೆಸ್‌ ಪ್ರೇರಿತ ಗೂಂಡಾಗಿರಿ ಎಂದು ಆರೋಪಿಸಿದ ಅವರು, ಗೊಂದಲ ಸೃಷ್ಟಿಸುವ ಯತ್ನ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಪಿ.ರಾಜೀವ್, ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ದಲಿತ ನಾಯಕ ಗೋವಿಂದ ಕಾರಜೋಳ ಅವರ ಮೇಲೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಗೂಂಡಾಗಳು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಹಲ್ಲೆ ನಡೆಸಲು ದುಷ್ಪ್ರೇರಣೆ ಮಾಡಿ, ಒಳಸಂಚನ್ನು ಮಾಡಿರುವುದರಲ್ಲಿ ಡಾ.ಎಚ್.ಸಿ.ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅವರ ಕೈವಾಡವಿದೆ  ಎಂದರು. 

ದಲಿತರಿಗೆ ಮೀಸಲಿಟ್ಟ ಹಣವನ್ನು ಈ ಸರಕಾರ ದುರ್ಬಳಕೆ ಮಾಡಿದೆ. ಇದು ದಲಿತ ಸಮುದಾಯಗಳಿಗೆ ಅರ್ಥವಾದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುವ ಭಯ ಕಾಂಗ್ರೆಸ್ಸಿನ ನಾಯಕರನ್ನು ಕಾಡುತ್ತಿದೆ. ದಲಿತರಿಗೆ ಈ ವಿಚಾರ ಗೊತ್ತಾಗಬಾರದು. ಯಾರೂ ಇದನ್ನು ತಿಳಿಸಬಾರದೆಂಬ ದುರುದ್ದೇಶದೊಂದಿಗೆ ಕಾಂಗ್ರೆಸ್ ಕಾರಜೋಳ ಅವರ ಮೇಲೆ ಹಲ್ಲೆಗೆ ಪ್ರೇರಣೆ ಕೊಟ್ಟಿದೆ. ಸಚಿವರ ತೆರೆಮರೆಯಲ್ಲಿನ ಪ್ರೇರಣೆ ಈ ಕೆಲಸಕ್ಕೆ ಅವಕಾಶ ಮಾಡಿದೆ ಎಂದರು.

Leave a Reply