ವಂಟಮಾರಿ ಮಹಿಳೆ ಬೆತ್ತಲೆ ಪ್ರಕರಣ: ಕಠಿಣ ಕ್ರಮದ ಭರವಸೆ

2 years ago

ಬೆಳಗಾವಿ: ಬೆಳಗಾವಿ ಜಿಲ್ಲೆಯ ವಂಟಮಾರಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದ ಅಮಾನವೀಯ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡು ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ವೇದಿಕೆಯಾಯಿತು.

ಮಹಿಳೆ ಮೇಲೆ ನಡೆದ ದುರ್ವರ್ತನೆ ಬಗ್ಗೆ ವಿಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರು ಚರ್ಚೆಗೆ ಅವಕಾಶ ಕೋರಿದರು. ಈ ಕುರಿತು ಶೂನ್ಯ ವೇಳೆಯಲ್ಲಿ ಪ್ರಸ್ತಾಕ್ಕೆ ಅವಕಾಶ ನೀಡುವುದಾಗಿ ಸಭಾದ್ಯಕ್ಷ ಯು.ಟಿ.ಖಾದರ್ ಹೇಳಿದರು.

ನಂತರ ವಿಷಯದ ಕುರಿತು ಮಾಡಲಾದ ಪ್ರಸ್ತಾಪಕ್ಕೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಇತ್ತೀಚೆಗೆ ಪ್ರೀತಿಸಿ ವಿವಾಹವಾಗುವುದು ಹೆಚ್ಚಾಗಿದೆ. ಇದನ್ನು ಪೋಷಕರು ವಿರೋಧಿಸುತ್ತಿದ್ದು, ಜಗಳ ಗಲಾಟೆ ಉಂಟಾಗುತ್ತಿದೆ. ಇದೂ ಕೂಡ ಅಂತಹದೆ ಒಂದು ಪ್ರಕರಣ. ಆದರೆ ಇಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದರು.

ಗೃಹಸಚಿವನಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಹೆಣ್ಣು ಮಗಳನ್ನು ವಿವಸ್ತ್ರಗೊಳಿಸಿದ ಪ್ರಕರಣ ಖಂಡನೀಯ. ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಸಮಾಜದಲ್ಲಿ ಬದಲಾವಣೆ ಆಗದ ಹೊರತು ಈ ಮರ್ಯಾದೆ ಹತ್ಯೆಯನ್ನು ತಡೆಯುವುದು ಕಷ್ಟ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ಆರೋಪಿಗಳಿಗೆ ಯಾವುದೇ ರಕ್ಷಣೆ ಕೊಡುವುದಿಲ್ಲ. ಹುಡುಗನ ಮನೆಯವರಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. ಇತ್ತೀಚೆಗೆ ಪ್ರೀತಿ ಮಾಡಿ ಮದುವೆಯಾಗುವುದು ಹೆಚ್ಚಾಗಿದೆ. ಅದಕ್ಕೆ ಪೋಷಕರು ವಿರೋಧ ಮಾಡ್ತಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ರೀತಿ ನೋಡಿಕೊಳ್ಳುತ್ತೇವೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬೆಳಗಾವಿ‌ ಕಾಕತಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿ ಪರಾರಿಯಾಗಿದ್ದ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಪ್ರೀತಿಸಿ ಓಡಿಹೋಗಿರುವ ನವಜೋಡಿಗಳ ಹುಡುಕಾಟಕ್ಕೂ‌ ಪೊಲೀಸರು ಮುಂದಾಗಿದ್ದಾರೆ. ನವಜೋಡಿಗಳು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಅವರ ಹುಡುಕಾಟವೂ ನಡೆದಿದೆ ಎಂದರು.

Leave a Reply