ಮದ್ಯದ ಅಮಲಿನಲ್ಲಿ 1500 ರೂ.ಗೆ ಒಬ್ಬನ ಕೊಲೆ

2 years ago

#Murder #alcohol

ಬೆಂಗಳೂರು: ಮದ್ಯದ ಅಮಲಿನಲ್ಲಿ 1500 ರೂ. ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಸಿಂಗಸಂದ್ರದಲ್ಲಿ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಸಿಂಗಸಂದ್ರದ ಗೋಪಾಲ್ ಎಂದು ಗುರುತಿಸಲಾಗಿದೆ.

ಬಾರ್ ಒಂದರಲ್ಲಿ ಸ್ನೇಹಿತರಾದ ಗೋಪಾಲ್, ಕರೇಗೌಡ ಮತ್ತು ಶಶಿ ಸೇರಿ ಮದ್ಯ ಸೇವಿಸುತ್ತಿದ್ದರು. ಕಂಠ ಪೂರ್ತಿ ಕುಡಿದ ನಂತರ ಸ್ನೇಹಿತರಾದ ಪ್ರದೀಪ್ ಮತ್ತು ಗಿರೀಶ್ ಎಂಬ ಮತ್ತಿಬ್ಬರು ಜೊತೆಯಾಗಿದ್ದರು. ಎಲೆಕ್ಟ್ರಿಷಿಯನ್ ಕೆಲಸದ ಸಂಬಂಧ ಕರೇಗೌಡನಿಗೆ ಗಿರೀಶ್ 1,500 ರೂಪಾಯಿ ಕೊಡಬೇಕಾಗಿತ್ತು. ಬಾರ್ ನಲ್ಲಿದ್ದ ಕರೇಗೌಡ ಮದ್ಯದ ಅಮಲಿನಲ್ಲಿ ಗಿರೀಶ್ ಕಂಡ ಕೂಡಲೇ ಹಣ ಕೊಡಲು ಒತ್ತಾಯಿಸಿದ್ದಾನೆ.

ಈ ವೇಳೆ ಮಾತಿನ ಚಕಮಕಿ ನಡೆದು ಹಣ ಕೊಡುವುದಿಲ್ಲ ಅದೇನು ಮಾಡ್ಕೋತ್ತೀಯೋ ಮಾಡ್ಕೋ ಎಂದು ಗಿರೀಶ್ ಪ್ರತ್ಯುತ್ತರ ಕೊಟ್ಟಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಮಧ್ಯಪ್ರವೇಶಿಸಿದ ಸ್ನೇಹಿತ ಗೋಪಾಲ್, ಗಿರೀಶ್ ಗೆ ಹೊಡೆದು ಕರೇಗೌಡಗೆ ಹಣ ಕೊಡಿಸಿದ್ದ. ಈ ನಡುವೆ ಶಶಿ ತನ್ನ ಮನೆಗೆ ಹೋಗಿದ್ದ. ಇದಾದ ಬಳಿಕ ಶಶಿಗೆ ಫೋನ್ ಮಾಡಿದ ಗಿರೀಶ್ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾನೆ. ಈ ವಿಷಯವನ್ನು ಗಿರೀಶ್ ಗೆ ತಿಳಿಸಿದ್ದಾರೆ. ನಂತರ ಗೋಪಾಲ್, ಕರೇಗೌಡ, ಶಶಿಧರ್ ಮೂವರು ಗಿರೀಶ್ ಮನೆಗೆ ದಾಳಿ ಇಟ್ಟಿದ್ದಾರೆ.

ಮೂವರೂ ಗಿರೀಶ್ ಗೆ ಸರಿಯಾಗಿ ಮಾತನಾಡುವಂತೆ ಆತನ ಪತ್ನಿಗೆ ಹೇಳಿದ್ದರು. ಅದನ್ನು ಕೇಳಿಸಿಕೊಂಡ ಗಿರೀಶ್ ಅಡುಗೆ ಮನೆಯಿಂದ ಹೊರಬಂದು ಚಾಕುವಿನಿಂದ ಗೋಪಾಲ್ ಗೆ ಚುಚ್ಚಿ ಪರಾರಿಯಾಗಿದ್ದಾನೆ. ಕೂಡಲೇ ಅಲ್ಲಿದ್ದ ಸ್ನೇಹಿತರು ಗಾಯಗೊಂಡಿದ್ದ ಗಿರೀಶ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಗೋಪಾಲ್ ಚಿಕಿತ್ಸೆಗೆ ಸ್ಪಂದಿಸದೆ ಬಲಿಯಾಗಿದ್ದಾನೆ.

ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಿರೀಶ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Leave a Reply