ದಾವಣಗೆರೆ: ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ದಾವಣಗೆರೆ ನಗರದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯಾವಸ್ಥೆ & ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ಕುರಿತು ವಿವಿಧ ಅಂಗಡಿ, ಹೋಟೆಲ್, ಗ್ಯಾರೇಜ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಶನಿವಾರ ಭೇಟಿ ನೀಡಿ ಅಧಿಕಾರಿಗಳು ಬಾಲ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ತಪಾಸಣೆ ನಡೆಸಿದರು.
ಈ ವೇಳೆ ನಡೆದ ತಪಾಸಣೆಯಲ್ಲಿ ಒಬ್ಬ ಬಾಲ ಕಾರ್ಮಿಕ ಅಪಾಯಕಾರಿ ಉದ್ದಿಮೆಯಲ್ಲಿ ಪತ್ತೆಯಾಗಿದ್ದು, ಪತ್ತೆಯಾದ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಅಧಿಕಾರಿಗಳು ಮಾಲೀಕರಿಗೆ ಕರಪತ್ರ & ಸ್ಟಿಕ್ಕರ್ಸ್ ನೀಡಿ ಜಾಗೃತಿ ಮೂಡಿಸಿದರು. ಕಾರ್ಮಿಕ ನಿರೀಕ್ಷ ರಾಜಶೇಖರ ಹಿರೇಮಠ್, ರಾಜಪ್ಪ.ಟಿ, ನಾಗೇಶ್ ಹಾಗೂ ಯೋಜನಾ ನಿರ್ದೇಶಕ ಪ್ರಸನ್ನ ಇ.ಎನ್ ಮೊದಲಾದವರು ಹಾಜರಿದ್ದರು.




