ಬೆಂಗಳೂರು: ತಾವು ಯಾರಿಗೂ ಹೆದರುವುದಿಲ್ಲ, ಸಲಾಂ ಹೊಡೆಯುವುದಿಲ್ಲ. ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಹೈಕಮಾಂಡ್ ತಮ್ಮ ಬೇಡಿಕೆ ಈಡೇರಿಸಬೇಕು. ಅಲ್ಲಿಯವರೆಗೆ ಶಾಸಕಾಂಗ ಸಭೆಗೆ ಹಾಜರಾಗುವುದಿಲ್ಲ ಎಂದು ಬಿಜೆಪಿ ಶಾಸಕ, ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಸೆಡ್ಡು ಹೊಡೆದಿದ್ದಾರೆ.
ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ದಿನದಿಂದ ನೆನೆಗುದಿಗೆ ಬಿದ್ದಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ನಂತರ ಸಿಡಿದೆದಿದ್ದಿರುವ ಬಸನಗೌಡ ಪಾಟೀಲ ಯತ್ನಾಳ ಈ ಮೂಲಕ ಹೈಕಮಾಂಡ್ ವಿರುದ್ಧ ಸಮರ ಸಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಬಿಜೆಪಿ ಶಾಸಕಾಂಗ ಸಭೆಗೆ ಬರುವುದಿಲ್ಲ. ಬಹಳಷ್ಟು ಅನುಕೂಲ ಇದ್ದವರಿಗೆ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕನನ್ನು ಮಾಡುತ್ತಾರೆ. ರಾಜ್ಯದ ಜನರ ದೃಷ್ಟಿಯಲ್ಲಿ ನಾನು ಎಲ್ಲ ರೀತಿಯ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಗಲು ಸಮರ್ಥನಾಗಿದ್ದೇನೆ ಎಂದು ಹಕ್ಕು ಮಂಡಿಸಿದರು.
ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲೇಬೇಕು. ಅದಕ್ಕೆ ನಾನು ಯಾರ ಮುಲಾಜಿಗೂ ಹೆದರುವುದಿಲ್ಲ. ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಲಾಗಿದೆ. ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಬದಲಾಗುವವರೆಗೂ ನಾನು ಶಾಸಕಾಂಗ ಸಭೆಗೆ ಹೋಗುವುದಿಲ್ಲ ಎಂದು ತಮ್ಮ ನಿಲುವನ್ನು ಖಚಿತವಾಗಿ ಹೇಳಿದರು.
ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚೆ ಆಗಲಿ. ದಕ್ಷಿಣ ಕರ್ನಾಟಕಕ್ಕೆ ನ್ಯಾಯ ಕೊಟ್ಟರು. ಆ ಭಾಗದ ನಾಯಕರಿಗೆ ನಾವು ಗುಲಾಮರಲ್ಲ. ನಾವೇನು ಉತ್ತರ ಕರ್ನಾಟಕದವರು ಗಂಟೆ ಹೊಡಿಬೇಕಾ? ನಮಗೆ ನ್ಯಾಯ ಸಿಗುವವರೆಗೂ ಯಾವುದೇ ಹೋರಾಟಕ್ಕೂ ನಾನು ಸಿದ್ಧ. ಯಾವ ಸ್ಥಾನವನ್ನು ತ್ಯಾಗವನ್ನು ಬೇಕಾದರೂ ಮಾಡುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಇದಕ್ಕೆ ಅವಕಾಶ ನೀಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿ, ನಾನೇ ಚರ್ಚೆಯನ್ನು ಮೊದಲು ಆರಂಭಿಸುತ್ತೇನೆ. ಸುಮ್ಮನೆ ತೌಡು ಕುಟ್ಟುವುದರಲ್ಲಿ ಅರ್ಥವಿಲ್ಲ. ಕಲಾಪದಲ್ಲಿ ಗುಣಮಟ್ಟದ ಚರ್ಚೆಯಾಗಿ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಕುಟುಂಬ ರಾಜಕಾರಣ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ರಾಜಕಾರಣದಲ್ಲಿ ನಾವೇ ಇರಬೇಕೆಂದು ಪ್ರತಿಪಾದಿಸುವವರಿಗೆ ಮತದಾರರು ಫಲಿತಾಂಶದ ಮೂಲಕ ಸಂದೇಶ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಕುಟುಂಬ ರಾಜಕಾರಣ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ ಎಂದರು.
ಹಿಂದುತ್ವ ಮತ್ತು ಅಭಿವೃದ್ಧಿ ಪರ ಇರುವವರಿಗೆ ಮತದಾರರು ಕೈ ಹಿಡಿಯಲಿದ್ದಾರೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ. ದೇಶದಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ, ಅಭಿವೃದ್ಧಿ ಪರವಾದ ಕೆಲಸಕ್ಕೆ ಮತದಾರ ಜೈ ಎಂದಿದ್ದಾನೆ. ಪ್ರತಿಪಕ್ಷಗಳ ತಂತ್ರ, ಕುತಂತ್ರ ನಡೆದಿಲ್ಲ. ಹಿಂದುತ್ವ ಮತ್ತು ಅಭಿವೃದ್ಧಿ ದೇಶದಲ್ಲಿ ಉಳಿಯಲಿದೆ ಎಂದರು.



