ಬೆಂಗಳೂರು: ಬೆಂಗಳೂರು ಸೇರಿ ಮೂರು ಜಿಲ್ಲೆಗಳಲ್ಲಿ ನಡೆದಿರುವ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಸಂಬಂಧ ಮತ್ತೊಬ್ಬ ನರ್ಸ್ ರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ ಉಷಾರಾಣಿ ಬಂಧಿತ ಆರೋಪಿ. ಈ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿದಂತಾಗಿದೆ.
ಆರೋಪಿ ಉಷಾರಾಣಿ ಪ್ರಕರಣದ ಪ್ರಮುಖ ಆರೋಪಿ ಡಾ.ಚಂದನ್ ಬಲ್ಲಾಳ್ ನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕ ಉಷಾರಾಣಿ ಕೆಲಸ ಬಿಟ್ಟು ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿಕೊಂಡಿದ್ದರು.
ಉಷಾರಾಣಿ ಪ್ರಕರಣದ ಮತ್ತೊಬ್ಬ ಆರೋಪಿ ಬ್ರೋಕರ್ ಪುಟ್ಟರಾಜು ಸಂಬಂಧಿ ಕೂಡಾ ಆಗಿರುವ ಮಾಹಿತಿ ಸಿಕ್ಕಿದೆ. ಮೂರು ದಿನಗಳ ಹಿಂದೆ ಬಂಧಿತ ನರ್ಸ್ ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉಷಾರಾಣಿಯನ್ನು ಬಂಧಿಸಿದ್ದಾರೆ.
ಬ್ರೋಕರ್ ಪುಟ್ಟರಾಜು ಆಣತಿ ಮೇರೆಗೆ ಆರೋಪಿ ಉಷಾರಾಣಿ ಗರ್ಭಪಾತ ಮಾಡುತ್ತಿದ್ದರು. ಗರ್ಭಪಾತಕ್ಕೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಬೈಯ್ಯಪ್ಪಹಳ್ಳಿ ಪೊಲೀಸರು ಬ್ರೋಕರ್ ಪುಟ್ಟರಾಜು ಅನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಎಲ್ಲ ವಿಚಾರಗಳು ಬೆಳಕಿಗೆ ಬಂದಿವೆ. ಇದೀಗ ಬ್ರೋಕರ್ ಪುಟ್ಟರಾಜು ಜಾಮೀನು ಪಡೆದಿದ್ದು, ಸಂಬಂಧಿ ಉಷಾರಾಣಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.
ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗ ಪತ್ತೆ ಮಾಡದೇ ಆರೋಗ್ಯ ಇಲಾಖೆ ನಿಯಮಾವಳಿ ಪ್ರಕಾರ ಗರ್ಭಪಾತ ಮಾಡುತ್ತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಮಾಲೀಕರನ್ನು ಬೈಯಪ್ಪನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಗರ್ಭಪಾತ ಕಾಯ್ದೆಯಲ್ಲಿರುವುದು ಏನು?: ಗರ್ಭಪಾತ ಕಾಯ್ದೆಯ ಪ್ರಕಾರ ಲಿಂಗ ಪತ್ತೆ ಮಾಡದೇ, ಪತಿ-ಪತ್ನಿ ಒಪ್ಪಿಗೆ ಬಳಿಕ ಮತ್ತು ಗರ್ಭಿಣಿಗೆ ತೀವ್ರ ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾತ್ರ ಸ್ಕ್ಯಾನಿಂಗ್ ಹಾಗೂ ವೈದ್ಯಕೀಯ ವರದಿ ಸಹಿತ ಗರ್ಭಪಾತ ಮಾಡಲು ಅವಕಾಶವಿದೆ. ಈ ಪ್ರಕ್ರಿಯೆ ಗರ್ಭಧರಿಸಿದ 24 ವಾರಗಳ ಒಳಗೆ ನಡೆಯಬೇಕು. ಬಳಿಕ ಸಂಬಂಧಿಸಿದ ಇಲಾಖೆಗೆ ಈ ಎಲ್ಲ ಮಾಹಿತಿ ಕೊಡಬೇಕು. ಇದರೊಂದಿಗೆ ನಡೆದ ಎಲ್ಲಾ ದಾಖಲೆಗಳನ್ನು ಎರಡು ವರ್ಷದವರೆಗೆ ಆಸ್ಪತ್ರೆಯಲ್ಲಿ ದಾಸ್ತಾನಿಡಬೇಕು.
ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಈ ನಿಯಮಗಳನ್ನು ಹೊಂದಿದೆ. ಇದನ್ನು ತಿಳಿದ ಉಷಾರಾಣಿ ಆಸ್ಪತ್ರೆ ಮಾಲೀಕ ಮತ್ತು ವೈದ್ಯರ ಗಮನಕ್ಕೂ ಬಾರದ ರೀತಿ, ನಕಲಿ ದಾಖಲೆ ಸೃಷ್ಟಿಸಿ ಗರ್ಭಪಾತ ಮಾಡುತ್ತಿದ್ದರು. ಬಳಿಕ ವೈದ್ಯರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಉಷಾರಾಣಿಯನ್ನು ಬಂಧಿಸಿದ್ದಾರೆ. ಇನ್ನು ಉಷಾರಾಣಿಗೆ ಈ ಜಾಲದ ನಂಟು ಸಿಕ್ಕಿದ್ದು ಹೇಗೆ? ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಷಾರಾಣಿ ನಕಲಿ ದಾಖಲೆ ಸೃಷ್ಟಿಸಿದ್ದು ಹೇಗೆ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




