ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ನಿಂದ ಜನತಾದಳದ ತಂತ್ರ

2 years ago

#JanataDal #strategy #Congress #win #LokSabha #elections

ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಬೀದರ್ ನಿಂದ ಈಶ್ವರ ಖಂಡ್ರೆ, ಬಾಗಲಕೋಟೆಯಿಂದ ಎಂ.ಬಿ.ಬೆಂಗಳೂರ, ಹಾವೇರಿಯಲ್ಲಿ ಎಚ್.ಕೆ.ಪಾಟೀಲ್, ದಾವಣಗೆರೆಗೆ ಎಸ್.ಎಸ್.ಮಲ್ಲಿಕಾರ್ಜುನ, ಚಾಮರಾಜನಗರದಿಂದ ಡಾ.ಎಚ್.ಸಿ.ಮಹಾದೇವಪ್ಪ, ಕೋಲಾರದಿಂದ ಡಾ.ಜಿ.ಪರಮೇಶ್ವರ್, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣಕ್ಕೆ ರಾಮಲಿಂಗಾರೆಡ್ಡಿ ಮತ್ತು ಬೆಂಗಳೂರು ಕೇಂದ್ರದಿಂದ ಜಮೀರ್ ಅಹಮದ್ ಖಾನ್ ಅವರನ್ನು ಕಣಕ್ಕಿಳಿಸಲು ಚಿಂತನೆ.

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತ್ಯಧಿಕ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು ಹೊಸ ತಂತ್ರ ರೂಪಿಸಿದ್ದಾರೆ.

ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು ಎಲ್ಲ ಕ್ಷೇತ್ರಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿ ವರದಿ ಪಡೆದಿದ್ದಾರೆ. ವರದಿಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪರ ಅಭಿಪ್ರಾಯ ಹೊಂದಿದ್ದರೂ ಅವುಗಳನ್ನು ಮತಗಳನ್ನಾಗಿ ಪರಿವರ್ತಿಸಿ ತಮ್ಮ ಪರ ಮಾರ್ಪಡಿಸಿಕೊಳ್ಳುವ ನಾಯಕರು ಸಿಕ್ಕಿಲ್ಲ. ಆದ್ದರಿಂದ 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಕಾಂಗ್ರೆಸ್ ಗೆ ಇದೆ.

ಹೈಕಮಾಂಡ್ ಆಂತರಿಕ ಸಮೀಕ್ಷೆ ನಡೆಸಿದ್ದು, ಅದರಲ್ಲೂ ಪ್ರಬಲ ಅಭ್ಯರ್ಥಿಗಳ ಕೊರತೆ ಎದ್ದು ಕಂಡಿದೆ. ಹೀಗಾಗಿ ವರಿಷ್ಠರು ಪ್ರಬಲ ಅಭ್ಯರ್ಥಿಗಳನ್ನು ಹುಡುಕುವಂತೆ ಸೂಚಿಸಿದ್ದಾರೆ. ಮೊನ್ನೆ ಬೆಂಗಳೂರಿಗೆ ಬಂದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, ಹೈಕಮಾಂಡ್ ಸೂಚಿಸಿರುವ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಪರ್ಯಾಯ ಕಾರ್ಯತಂತ್ರ ರೂಪಿಸುವಂತೆ ಸಲಹೆ ನೀಡಿದ್ದಾರೆ.

ಅದರ ಪ್ರಕಾರ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಳೀಯ ನಾಯಕರ ವರದಿ ಮತ್ತು ರಾಜ್ಯ ಕಾಂಗ್ರೆಸ್ ಚುನಾವಣಾ ನಿಪುಣ ಸುನಿಲ್ ಕುನುಗೋಳು ಅಭಿಪ್ರಾಯ ಆಲಿಸಿ ಪ್ರತ್ಯೇಕ ತಂತ್ರ ರೂಪಿಸಿದ್ದಾರೆ.

ಈ ಹಿಂದೆ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನ ಜನತಾದಳ ನೇತೃತ್ವದ ಸರ್ಕಾರ ಹೊಸದೊಂದು ತಂತ್ರ ರೂಪಿಸಿ ಯಶಸ್ವಿಯಾಗಿತ್ತು. ಇದೀಗ ಅದೇ ತಂತ್ರಕ್ಕೆ ಕಾಂಗ್ರೆಸ್ ತಂಡದವರು ಯೋಜನೆ ರೂಪಿಸುತ್ತಿದ್ದಾರೆ.

ಅಂದಿನ ಸಿಎಂ ಆಗಿದ್ದ ದೇವೇಗೌಡ ರಾಜ್ಯದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಿದ ತಂತ್ರಗಾರಿಕೆ ಪರಿಣಾಮದಿಂದ ಅವಿಭಜಿತ ಚಕ್ರ ಗುರುತಿನ ಜನತಾದಳ ರಾಜ್ಯದ ಇತಿಹಾಸದಲ್ಲೇ ಅತ್ಯಧಿಕ 16 ಕ್ಷೇತ್ರಗಳಲ್ಲಿ ಜಯ ದಾಖಲಿಸಿತ್ತು. ಇದು ಜನತಾದಳದ ಇತಿಹಾಸದಲ್ಲೇ ಅತಿ ಹೆಚ್ಚು ಕ್ಷೇತ್ರಗಳ ಗೆಲುವಾಗಿದೆ.

ಅಂದು ರೂಪಿಸಿದ್ದ ರಾಜಕೀಯ ರಣತಂತ್ರವನ್ನು ಅಧ್ಯಯನ ನಡೆಸಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ತಂಡ ವರದಿಯೊಂದನ್ನು ಸಿದ್ಧಪಡಿಸಿ ಅದನ್ನು ಹೈಕಮಾಂಡ್ ಗೆ ಸಲ್ಲಿಸಿದೆ. ಡಿಕೆಶಿ ಸಲ್ಲಿಸಿರುವ ವರದಿಯಲ್ಲಿ, ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕಾದರೆ, ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಗಳು ಚುನಾವಣೆಯ ಅಖಾಡಕ್ಕೆ ಧುಮುಕಬೇಕು. 1996ರಲ್ಲಿ ಇದೇ ತಂತ್ರ ರೂಪಿಸಲಾಗಿತ್ತು. ಅದನ್ನೇ ಈಗಲೂ ಮಾಡಬೇಕಿದೆ ಎಂದಿದ್ದಾರೆ.

ಕೆಪಿಸಿಸಿ ಮೂಲಗಳ ಪ್ರಕಾರ ಶಿವಕುಮಾರ್ ಹೈಕಮಾಂಡ್ ಗೆ ಸಲ್ಲಿಸಿರುವ ತಮ್ಮ ವರದಿಯಲ್ಲಿ ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಬೀದರ್ ನಿಂದ ಈಶ್ವರ ಖಂಡ್ರೆ, ಬಾಗಲಕೋಟೆಯಿಂದ ಎಂ.ಬಿ.ಬೆಂಗಳೂರ, ಹಾವೇರಿಯಲ್ಲಿ ಎಚ್.ಕೆ.ಪಾಟೀಲ್, ದಾವಣಗೆರೆಗೆ ಎಸ್.ಎಸ್.ಮಲ್ಲಿಕಾರ್ಜುನ, ಚಾಮರಾಜನಗರದಿಂದ ಡಾ.ಎಚ್.ಸಿ.ಮಹಾದೇವಪ್ಪ, ಕೋಲಾರದಿಂದ ಡಾ.ಜಿ.ಪರಮೇಶ್ವರ್, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ, ಬೆಂಗಳೂರು ದಕ್ಷಿಣಕ್ಕೆ ರಾಮಲಿಂಗಾರೆಡ್ಡಿ ಮತ್ತು ಬೆಂಗಳೂರು ಕೇಂದ್ರದಿಂದ ಜಮೀರ್ ಅಹಮದ್ ಖಾನ್ ಅವರನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಎಂದು ವರದಿ ಸಲ್ಲಿಕೆಯಾಗಿದೆ ಎನ್ನಲಾಗಿದೆ.

ಸುರ್ಜೇವಾಲಾ ಅವರೊಂದಿಗೆ ನಿಗಮ ಮಂಡಳಿ ನೇಮಕ ಕುರಿತು ಸಭೆ ನಡೆಸಿದ ನಂತರ ಶಿವಕುಮಾರ್ ಪ್ರತ್ಯೇಕವಾಗಿ ಈ ವಿಷಯದ ಕುರಿತಂತೆ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ಗೆ ತಮ್ಮ ವರದಿ ಕುರಿತು ಮನವರಿಕೆ ಮಾಡಿಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

Leave a Reply