ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜಕೀಯಪ್ರೇರಿತ ನಿರ್ಧಾರ ಕೈಗೊಳ್ಳುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ನೀತಿಯಲ್ಲಿ ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕ. ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇಲ್ಲ. ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದರು.
ಹಳೆಯ ನೀತಿಯಲ್ಲಿ ಇದ್ದ ನ್ಯೂನತೆಗಳನ್ನು ಹೋಗಲಾಡಿಸಿ 34 ವರ್ಷಗಳ ಬಳಿಕ ಹೊಸ ನೀತಿ ತರಲಾಗಿದೆ. ಸಮಾನತೆ, ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇದಕ್ಕಾಗಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ. ತಯಾರಿ, ಅಧ್ಯಯನ, ಚರ್ಚೆ ಇಲ್ಲದೆ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೊನೆಗೊಳಿಸುತ್ತೇವೆ ಎನ್ನುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೊಂದು ಬೇಜವಾಬ್ದಾರಿ ಸರಕಾರ. ಯಶಸ್ವಿಯಾಗಿ ಅನುಷ್ಠಾನ ಆಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾಗಪುರ ಶಿಕ್ಷಣ, ಉತ್ತರ ಭಾರತದ ಶಿಕ್ಷಣ ನೀತಿ ಎಂದು ಟೀಕಿಸುತ್ತಿದೆ. ಇವರ ಸಮಿತಿಯಲ್ಲಿ ಇರುವವರು ಯಾರು? ಅಧ್ಯಕ್ಷರು ಯಾವ ಊರಿನವರು? ಶಿವಮೊಗ್ಗದವರೇ, ಮೈಸೂರಿನವರೇ? ಬೆಂಗಳೂರಿನವರೇ? ರಾಜ್ಯ ಸಮಿತಿಯಲ್ಲಿ ಇಲ್ಲಿನವರು ಎಷ್ಟು ಜನ? ಹೊರ ರಾಜ್ಯದವರು ಎಷ್ಟು ಜನ ಎಂದರು.
ರಾಜ್ಯ ಶಿಕ್ಷಣ ನೀತಿಯ ಕಚೇರಿ ಎಲ್ಲಿದೆ? ಸಲಹೆ ಕೊಡಲು ಇಮೇಲ್ ಇದೆಯೇ? ಗೊತ್ತಿಲ್ಲ. ವಿನಾಕಾರಣ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧವಾಗಿ ಹೊರಟಿದ್ದಾರೆ. ಕೇರಳ ಯುಜಿಸಿ ಹೇಳಿದಂತೆ ನಡೆಯುವುದಾಗಿ ಹೇಳಿದೆ. ಇಲ್ಲಿನದು ಹುಡುಗಾಟಿಕೆಯ ಕ್ರಮ. ಶಿಕ್ಷಣ ರಾಜ್ಯದಡಿ ಬರುತ್ತದೆ ಎನ್ನುತ್ತಾರೆ. ರಾಜಕಾರಣಿಗಳ ಸಂಸ್ಥೆಗಳಲ್ಲಿ ಎಸ್ಇಪಿ ಇರುತ್ತದೆಯೇ? ಗುಣಮಟ್ಟ ಹೆಚ್ಚಳಕ್ಕೆ ಈ ಸರಕಾರದಿಂದ ಏನು ಪ್ರಯತ್ನ ಆಗಿದೆ ಎಂದರು.
30 ಸಾವಿರ ಕೋಟಿಯನ್ನು ಪದವಿ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಗುಣಮಟ್ಟ ಹೆಚ್ಚಳ ಆಗಿದೆಯೇ? ಪ್ರಸ್ತುತ ವಿಚಾರಗಳನ್ನು ಮಾತನಾಡಿಲ್ಲ. ಅಜ್ಞಾನಿ, ಅವೈಜ್ಞಾನಿಕವಾಗಿ ಭಾಷಣ ಮಾಡುತ್ತಿದ್ದಾರೆ. ವಿಶ್ವದರ್ಜೆಯ ಶಿಕ್ಷಣ ಕೊಡಲು ಒಂದೇ ಒಂದು ಸರಕಾರಿ ಸಂಸ್ಥೆ ಇದೆಯೇ? 21ನೇ ಶತಮಾನ ಜ್ಞಾನದ ಶತಮಾನ. ಸರಸ್ವತಿ ಎಲ್ಲಿದೆಯೋ ಲಕ್ಷ್ಮಿ ಅಲ್ಲಿರುತ್ತಾಳೆ. ಬಡತನ, ತಾರತಮ್ಯ ಇಲ್ಲದೆ ಉತ್ತಮ ಕನಸು ನನಸಾಗಿಸಲು ಗುಣಮಟ್ಟದ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ ಅನಿವಾರ್ಯ. ಕೌಶಲ್ಯತೆ, ಗುಣಮಟ್ಟದ ಶಿಕ್ಷಣ ಜೊತೆಗೂಡಿ ಇದನ್ನು ಮಾಡಿದ್ದೇವೆ ಎಂದರು.
ಶಿಕ್ಷಣ ನೀತಿಯನ್ನು ಕೇಂದ್ರದ ಕಾನೂನಿನಡಿ ತರಲಾಗಿದೆ. ಕನ್ಕರೆಂಟ್ ಲಿಸ್ಟ್ನಡಿ ಅದನ್ನು ತರಲಾಗಿದೆ. ಸಮನ್ವಯದಿಂದ ಇದನ್ನು ತರಲಾಗುತ್ತದೆ. ಯುಜಿಸಿ ಮಾನ್ಯತೆ ಇಲ್ಲದೆ ಪದವಿ ಕೊಡಲು ಅಸಾಧ್ಯ. ಕುಲಪತಿ, ಉಪನ್ಯಾಸಕರನ್ನು ಯುಜಿಸಿ ನಿಯಮದಡಿ ನೇಮಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರದ 1968ರಲ್ಲಿ ಪ್ರಥಮ ರಾಷ್ಟ್ರೀಯ ಶಿಕ್ಷಣ ನೀತಿ ಘೋಷಿಸಿ ಅನುಷ್ಠಾನಕ್ಕೆ ಬಂದಿತ್ತು.ಇದಾದ 34 ವರ್ಷಗಳ ನಂತರ 1986ರಲ್ಲಿ ಎರಡನೇ ಮತ್ತು 2020ರಲ್ಲಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ಘೋಷಿಸಲಾಗಿದೆ. 2021ರಿಂದ ರಾಜ್ಯದಲ್ಲಿ ಅನುಷ್ಠಾನವಾಗಿದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಸರಕಾರ ಬದಲಾದೊಡನೆ ರಾಜ್ಯ ಶಿಕ್ಷಣ ನೀತಿ ತರಲು ಕಾಂಗ್ರೆಸ್ ಮುಂದಾಗಿದೆ. ಇದು ಪೂರ್ವಾಗ್ರಹಪೀಡಿತ ಕ್ರಮ. ಇದರಿಂದ ಶಿಕ್ಷಣ ಕ್ಷೇತ್ರ ಮತ್ತು ಮಕ್ಕಳಿಗೆ ಪ್ರಯೋಜನ ಆಗುವುದಿಲ್ಲ ಎಂದರು.
ಶಿಕ್ಷಣ ವ್ಯವಸ್ಥೆ ವಿಷಯದಲ್ಲಿ ಚೆಲ್ಲಾಟ ಮಾಡದಿರಿ. ಶಿಕ್ಷಣದ ವ್ಯವಸ್ಥೆ ಬದಲಾವಣೆ ಕ್ರಮ ಖಂಡಿಸುತ್ತೇವೆ. ಸರಕಾರದ ನಿರ್ಧಾರ ಖಂಡಿಸಿ ಕೋಟಿ ಸಹಿ ಸಂಗ್ರಹ ಈಗಾಗಲೇ ಪ್ರಾರಂಭವಾಗಿದೆ ಎಂದರು.



