ಪಿಂಚಣಿ ಯೋಜನೆಯ ಕಾನೂನುಗಳು ಸರಳವಾಗಿರಲಿ

2 years ago

#RevenueMinister #ksnagaraj #KrishnaByregowda #Keep #pension #scheme #rules #simple

ರಾಜ್ಯದಲ್ಲಿ ಹಿರಿಯ ನಾಗರಿಕರು ಸರ್ಕಾರದ ಪಿಂಚಣಿ ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಅವರು ಅವರ ರಕ್ತದ ಗುಂಪನ್ನು ತಿಳಿಸುವ ಪತ್ರವನ್ನು ಕೊಡಬೇಕೆಂದು ಆದೇಶವನ್ನು ಮಾಡಿದ್ದಾರೆ. ಈ ರಕ್ತದ ಗುಂಪಿನ ದೃಢೀಕರಣ ಪತ್ರವನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರೇ ಕೊಡಬೇಕೆಂದು ಷರತ್ತು ವಿಧಿಸಿದ್ದಾರೆ.

ಸರ್ಕಾರ ಕೊಡುವ 60 ವರ್ಷ ತುಂಬಿದವರಿಗೆ 800 ರೂಪಾಯಿಗಳು, 65 ವರ್ಷ ತುಂಬಿದವರಿಗೆ 1,200/-ಗಳ ಪಿಂಚಣಿ ಮೊತ್ತ ಪಡೆಯಲು ಹಿರಿಯ ನಾಗರಿಕರು ಸರ್ಕಾರಿ ವೈದ್ಯರ ರಕ್ತದ ಗುಂಪಿನ ದೃಢೀಕರಣ ಪತ್ರವನ್ನು ಪಡೆದುಕೊಳ್ಳಲು ಅಲೆದಾಡಬೇಕಾಗಿದೆ.

ಮಧ್ಯವರ್ತಿಗಳಿಗೆ ಇದಕ್ಕಾಗಿ ಒಂದಷ್ಟು ಹಣವನ್ನು ಕೊಡಬೇಕಾಗಿದೆ. ರಕ್ತದ ಗುಂಪು ದೃಢೀಕರಣ ಮಾಡಲು ಸಾಮಾನ್ಯ ಪ್ರಯೋಗಾಲಯದ ಅಥವಾ ಯಾವುದೇ ವೈದ್ಯರ ವರದಿ ಸಾಕಾಗಿರುತ್ತದೆ ಎಂಬ ಕಾನೂನನ್ನು ಮಾಡಿದರೆ ಅನುಕೂಲವಾಗುತ್ತದೆ.

ಇನ್ನು ಅಂಗವಿಕಲರು, ಬುದ್ಧಿಮಾಂಧ್ಯರು ಪಿಂಚಣಿ ಪಡೆದುಕೊಳ್ಳಲು ಅವರ ಬುದ್ಧಿಮಾಂದ್ಯತೆ ಮತ್ತು ಅಂಗವೈಕಲ್ಯತೆಯ ಪ್ರಮಾಣವನ್ನು ದೃಢೀಕರಣ ಮಾಡುವ ಪತ್ರಗಳನ್ನು ಪಡೆದುಕೊಳ್ಳಲು ಇರುವ ವ್ಯವಸ್ಥೆಯಂತೂ ಹೇಳತೀರದು. ಇಂತಹ ಮಕ್ಕಳನ್ನು ಹೆತ್ತ ಪೋಷಕರು ವೈದ್ಯರ ಪತ್ರಗಳಿಗಾಗಿ ಪರಿತಪಿಸುವ ಪಾಡು ಯಾರಿಗೂ ಬೇಡ.

ಇನ್ನು ಇದಕ್ಕಾಗಿ ಹಲವಾರು ಸಾವಿರ ರೂಪಾಯಿಗಳ ಲಂಚವನ್ನು ನೀಡಬೇಕಾಗಿದೆ. ಆದುದರಿಂದ ಕಂದಾಯ ಇಲಾಖೆಯ ಸಚಿವರು ವಿಶೇಷವಾಗಿ ಅಂಗವಿಕಲರು ಮತ್ತು ಬುದ್ಧಿಮಾಂದ್ಯರಿಗೆ ಉಪತಹಶೀಲ್ದಾ‌ರ್ ಕಛೇರಿಯಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಪಿಂಚಣಿ ಅದಾಲತ್‌ ಮಾಡಿ ಅಲ್ಲಿಗೆ ವೈದ್ಯರುಗಳನ್ನು ಬರುವಂತೆ ಮಾಡಿ ಆ ಕಛೇರಿಯಲ್ಲಿಯೇ ಅಗತ್ಯವಾದ ಪ್ರಮಾಣಪತ್ರವನ್ನು ಪರೀಕ್ಷೆ ಮಾಡಿ ನೀಡಿದರೆ ಅಲೆದಾಟವು ತಪ್ಪುತ್ತದೆ. ಲಂಚ ನೀಡುವುದು ತಪ್ಪುತ್ತದೆ.

ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟು ಕಣ್ಣಿಗೆ ಕಾಣುವ ಅಂಗವೈಕಲ್ಯತೆ ಮತ್ತು ಮೇಲ್ನೋಟಕ್ಕೆ ಕಾಣುವ ಬುದ್ಧಿಮಾಂಧ್ಯತೆಯ ಮಕ್ಕಳಿಗೆ ಉಪತಹಶೀಲ್ದಾರರೇ ತಮ್ಮ ವಿವೇಚನೆಯನ್ನು ಬಳಸಿ ಪಿಂಚಣಿ ನೀಡುವ ಅಧಿಕಾರವನ್ನು ನೀಡಿದರೆ ಒಳ್ಳೆಯದಾಗುತ್ತದೆ.

ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ನಾವು ರೂಪಿಸುವ ಕಾನೂನುಗಳು ಸರಳವಾಗಿರಬೇಕು ಹೊರತು ಕಬ್ಬಿಣದ ಕಡಲೆಯಾಗಬಾರದು.

– ಕೆ.ಎಸ್‌. ನಾಗರಾಜ್‌, ಬೆಂಗಳೂರು

Leave a Reply