ಬೆಂಗಳೂರು: ಮಾರುಕಟ್ಟೆಯ ಸ್ಥಿತಿಗತಿ, ಪಶು ಆಹಾರಗಳ ಬೆಲೆ ಇತ್ಯಾದಿಗಳನ್ನು ಗಮನಿಸಿ ಪ್ರತಿ ಆರು ತಿಂಗಳಿಗೊಮ್ಮೆ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆಗೆ ಅವಕಾಶ ನೀಡಬೇಕು ಎಂದು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಮನವಿ ಮಾಡಿವೆ.
ಪ್ರಸ್ತುತ ಇರುವ ಮಾರುಕಟ್ಟೆ ಸ್ಥಿತಿ ಆಧರಿಸಿ ಹಾಲು ಉತ್ಪಾದಕರ ನೆರವಿಗೆ ಕೆಎಂಎಫ್ ಧಾವಿಸಬೇಕಿದೆ. ಈ ನಿಟ್ಟಿನಲ್ಲಿ ಹಾಲು ಮಾರಾಟ ಧರ ಆರು ತಿಂಗಳಿಗೊಮ್ಮೆ ಗರಿಷ್ಠ ಶೇ. 5ರವರೆಗೆ ಹೆಚ್ಚಳಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಹಾಲಿನ ದರ ಹೆಚ್ಚಳದ ನಿರ್ಧಾರವನ್ನು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಹಂತದಲ್ಲೇ ಮಾಡಲು ಅನುಮತಿ ನೀಡಬೇಕು ಎಂದು ಪ್ರಸ್ತಾವದಲ್ಲಿ ಕೋರಲಾಗಿದೆ. ಕ್ಷೀರ ಭಾಗ್ಯ ಯೋಜನೆಗೆ ಕೆಎಂಎಫ್ ಪೂರೈಸುತ್ತಿರುವ ಹಾಲಿನಪುಡಿಯ ದರವನ್ನು ಪ್ರತಿ ಕೆ.ಜಿ.ಗೆ ಹೆಚ್ಚುವರಿಯಾಗಿ 400 ರೂಪಾಯಿ ಸರಕು ಮತ್ತು ಸೇವಾ ತೆರಿಗೆ ಎಂಬುದಾಗಿ ನಿಗದಿಪಡಿಸಬೇಕು ಎಂದು ಕೋರಿದೆ.
ಹಾಲು ಒಕ್ಕೂಟಗಳ ಪ್ರಸ್ತಾವನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಹಾಲಿನ ದರ ಏರಿಕೆ ಮಾಡುವಂತೆ ರೈತರು ಮತ್ತು ಹಾಲು ಒಕ್ಕೂಟಗಳಿಂದ ಒತ್ತಡವಿದೆ. ಆದರೆ, ಸದ್ಯಕ್ಕೆ ದರ ಹೆಚ್ಚಳ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೆಎಂಎಫ್ ನಂದಿನ ಹಾಲಿನ ದರವನ್ನು ಸೆಪ್ಟೆಂಬರ್ 1 ರಂದು ಪ್ರತಿ ಲೀಟರ್ ಗೆ 3 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. ಆದರೆ, ಅಮೂಲ್ 2022ರ ಮಾರ್ಚ್ ನಿಂದ 2023ರ ಫೆಬ್ರುವರಿಯವರೆಗೆ ಹತ್ತು ತಿಂಗಳ ಅವಧಿಯಲ್ಲಿ ಲೀಟರ್ ಗೆ 12 ರೂಪಾಯಿ ಹೆಚ್ಚಳ ಮಾಡಿದೆ ಎಂದರು.
ಉತ್ಪಾದನಾ ವೆಚ್ಚ ಹೆಚ್ಚಳದಿಂದ ಆಗುತ್ತಿರುವ ಹೊರೆ ಕುರಿತು ಹಾಲು ಉತ್ಪಾದಕರ ಒಕ್ಕೂಟಗಳು ಸಭೆಯಲ್ಲಿ ಅಹವಾಲು ಸಲ್ಲಿಸಿವೆ. ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 47 ರೂಪಾಯಿ ಇದೆ. ಇತರ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ ಹೆಚ್ಚಾಗಿದೆ ಎಂದು ತಿಳಿಸಿದರು.
ಮೆಕ್ಕೆಜೋಳ ಖರೀದಿ: ಬರ ಪರಿಸ್ಥಿತಿಯಿಂದ ತೊಂದರೆಗೊಳಗಾಗಿರುವ ರೈತರಿಗೆ ನೆರವಾಗಲು ಕರ್ನಾಟಕ ಹಾಲು ಮಹಾಮಂಡಳಿಯಿಂದ ರೈತರಿಂದ ನೆರವಾಗಿ ಮೆಕ್ಕೆಜೋಳ ಖರೀದಿ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಪ್ರತಿ ಕ್ವಿಂಟಾಲ್ ಮೆಕ್ಕೆಜೋಳವನ್ನು 2250 ರೂ.ಗಳ ದರದಲ್ಲಿ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.
ಮೆಕ್ಕೆಜೋಳ ಖರೀದಿಗೆ ರೈತರು ಸರ್ಕಾರದ ಕೃಷಿ ಇಲಾಖೆಯಡಿ ಬರುವ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಣಿಯಾಗಿರುವ ಸಂಸ್ಥೆಯೊಂದಿಗೆ ಹಾಲಿನ ಸಂಘಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಸರಬರಾಜು ಮಾಡಲು ನೋಂದಾಯಿಸಿಕೊಂಡು ಮೆಕ್ಕೆಜೋಳ ಪಡೆಯಬೇಕು. ಫ್ರೂಟ್ಸ್ ನೋಂದಣಿಗೆ ತೊಂದರೆಯಾಗಿದ್ದರೆ ಹತ್ತಿರದ ರೈತ ಸೇವಾ ಕೇಂದ್ರಗಳಿಗೆ ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ನೋಂದಣಿ ನಂತರ ನೋಂದಣಿ ದೃಢೀಕರಿಸಲು ರೈತರು ಮೆಕ್ಕೆಜೋಳವನ್ನು ಹಾಲು ಒಕ್ಕೂಟದ ಮೂಲಕ ಪಶು ಆಹಾರ ಘಟಕಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.




