ನರೇಂದ್ರ ಮೋದಿಯವರ ಕ್ಯಾಶ್ ಲೆಸ್ ಎಕಾನಮಿಗೆ ಓಗೊಟ್ಟದ್ದು ಎಟಿಎಂಗಳು ಮಾತ್ರ

3 years ago

#ATM #supports #NarendraModi #cashless #economy #blackmoney #Corruption #economy #noteban #reality
ನವೆಂಬರ್ 8, 2016ರಂದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧಿಸಿ 7 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ನಡೆದ ಘಟನೆಗಳ ಹಿನ್ನೋಟ…

ಜನರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡಿದ ಬ್ಯಾಂಕ್ಗಳು

ನವೆಂಬರ್ 08, 2016ರಂದು ನೋಟು ನಿಷೇಧದ ನಂತರ ಬ್ಯಾಂಕ್ಗಳಲ್ಲಿನ ಹಣಕಾಸು ವಹಿವಾಟು ಇದ್ದಕ್ಕಿದ್ದಂತೆ ದೊಡ್ಡ ಸುದ್ದಿಯಾಯಿತು. ನಮ್ಮ ದುಡ್ಡನ್ನು ಖಾತೆಗೆ ಜಮಾ ಮಾಡಲು, ಹಣ ಹಿಂತೆಗೆದುಕೊಳ್ಳಲು ಕೂಡ ದುಬಾರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾದ ಅನಿವಾರ್ಯತೆಯನ್ನು ಮೋದಿ ಅವಧಿಯಲ್ಲಿ ಸೃಷ್ಟಿಸಲಾಯಿತು. ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಡಲಾಗದ ಗ್ರಾಹಕರ ಮೇಲೆ ಕೂಡ ಎಸ್ಬಿಐ ಕೆಂಗಣ್ಣು ಬೀರಿತು.

ಗ್ರಾಹಕರಿಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ವಿಷಯವನ್ನೂ ತಿಳಿಸದೇ ಬ್ಯಾಂಕ್ಗಳು ಗ್ರಾಹಕರನ್ನು ಸುಲಿಯುತ್ತವೆ. ಈ ಸುಲಿಗೆಯ ಯಾಗಕ್ಕೆ ಮೂರ್ಖರ ದಿನಕ್ಕಾಗಿ (01/04/2017) ಮುಹೂರ್ತವನ್ನು ಕೂಡ ನಿಗದಿಪಡಿಸಲಾಯಿತು. ಇಷ್ಟೆಲ್ಲ ಆದರೂ ಆರ್ಬಿಐ ಮೌನವಾಗಿ ಕುಳಿತಿತು. ಈ ಮೂಲಕ ಅದರ ಅಸ್ತಿತ್ವದ ಮೇಲೆ ಅನುಮಾನ ಕೂಡ ಮೂಡಿತು. ಏನಾದರೂ ಆಗಲಿ ಅಚ್ಚೇದಿನ್ ಬಂದವೇ ಎಂದು ಮಾತ್ರ ಯಾರೂ ಕೇಳಬಾರದು. ಕೇಳಿದರೆ ಪಾಕಿಸ್ತಾನಕ್ಕೆ ಒನ್ ವೇ ಟಿಕೆಟ್ ಕಳುಹಿಸಲಾಗುತ್ತದೆ.

ಹಣಕಾಸಿನ ವಹಿವಾಟಿಗೆ ದೊಡ್ಡ ಮೊತ್ತದ ಶುಲ್ಕವನ್ನು ಬ್ಯಾಂಕ್ಗಳು ವಿಧಿಸತೊಡಗಿದವು. ಇದಕ್ಕೆ ಮುನ್ನುಡಿ ಬರೆದದ್ದು ಎಚ್ಡಿಎಫ್ಸಿ. ಅನಂತರ ಎಸ್ಬಿಐ ಕೂಡ ಅನೇಕ ಹಂತಗಳಲ್ಲಿ ಶುಲ್ಕ ವಿಧಿಸಲು ಮುಂದಾಯಿತು. ಕೆಲವೇ ದಿನಗಳಲ್ಲಿ ಇದೇ ದಾರಿಯನ್ನು ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಕೂಡ ಹಿಡಿಯಬಹುದು.

ಎಸ್ಬಿಐ ಇತ್ತೀಚೆಗೆ ರೂಪಿಸಿರುವ ಹೊಸ ನಿಯಮಗಳು ಗ್ರಾಹಕರು ಇನ್ನು ಮುಂದೆ ಬ್ಯಾಂಕ್ ಸುತ್ತ ಕೂಡ ಸುಳಿಯದೇ ಇರುವಂತೆ ಎಚ್ಚರಿಕೆ ನೀಡಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದಲ್ಲಿ ಭಾರಿ ದಂಡ ವಿಧಿಸುವುದು, ಉಳಿತಾಯ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಭಾರಿ ದಂಡ, ಪಿನ್ ನಂಬರ್ ಚೇಂಚ್, ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಶುಲ್ಕ ತೆರಬೇಕು. ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5,000 ರೂಪಾಯಿ, ನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 3,000 ರೂಪಾಯಿ, ಉಪನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 2,000 ರೂಪಾಯಿ, ಗ್ರಾಮೀಣ ಪ್ರದೇಶದ ಗ್ರಾಹಕರ ಖಾತೆಯಲ್ಲಿ 1,000 ರೂಪಾಯಿ ಇರಲೇಬೇಕು. ಇಲ್ಲದಿದ್ದಲ್ಲಿ ದಂಡ ಕಟ್ಟಿ ಎಂದು ಎಸ್ಬಿಐ ಫರ್ಮಾನು ಹೊರಡಿಸಿತು. 2017 ಏಪ್ರಿಲ್ 1ರಿಂದಲೇ ಎಸ್ಬಿಐನಿಂದ ಈ ಹೊಸ ನಿಮಯ ಜಾರಿಯಾಯಿತು.

ಗ್ರಾಹಕರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡುವ ಇನ್ನೊಂದು ನಿಯಮವನ್ನು ಕೂಡ ಎಸ್ಬಿಐ ರೂಪಿಸಿದೆ. ಅದರ ಪ್ರಕಾರ, ಮೆಟ್ರೋ ಸಿಟಿ ಗ್ರಾಹಕರ ಖಾತೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದ್ರೆ 50 ರೂ., ಶೇ. 50ರಿಂದ 70ರಷ್ಟು ಕಡಿಮೆಯಾದ್ರೆ 75 ರೂ., ಶೇ. 75ಕ್ಕಿಂತ ಕಡಿಮೆಯಾದ್ರೆ 100 ರೂ. ದಂಡ ವಿಧಿಸಲಾಗುತ್ತದೆ. ಇನ್ನು ಗ್ರಾಮೀಣ ಗ್ರಾಹಕರ ಖಾತೆಯಲ್ಲಿ ಶೇ. 50ಕ್ಕಿಂತ ಕಡಿಮೆಯಾದರೆ 20 ರೂಪಾಯಿ, ಶೇ. 50ರಿಂದ 75ರಷ್ಟು ಕಡಿಮೆಯಾದರೆ 30 ರೂ., ಶೇ. 75ರ ಮೇಲೆ ಕಡಿಮೆಯಾದರೆ 50 ರೂ. ದಂಡ ಕಟ್ಟಬೇಕಾಗುತ್ತದೆ. ಇದಲ್ಲದೇ ದಂಡದ ಜೊತೆಗೆ ಸೇವಾ ತೆರಿಗೆ ಕೂಡ ಕಟ್ಟಬೇಕಾಗುತ್ತದೆ.

ಮೊದಲು ಹಣಕಾಸು ವಹಿವಾಟಿನ ಮೇಲೆ ಶೇ. 0.50ರಷ್ಟು ದರ ವಿಧಿಸುವುದಾಗಿ ಹೇಳಲಾಗಿತ್ತು. ಕಡೆಗೆ ಪ್ರತಿ ತಿಂಗಳಲ್ಲಿ 4 ವಹಿವಾಟಿನ ನಂತರ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು ಎಂದು ಎಚ್ಡಿಎಫ್ಸಿ ಹೇಳಿತು. ಐಸಿಐಸಿಐ ಕೂಡ ಇದೇ ರೀತಿಯಲ್ಲಿ ಶೇ. 0.58 ಶುಲ್ಕವನ್ನು ವಿಧಿಸಿತು. ಕೆಲವು ವೇಳೆ ವಹಿವಾಟಿಗೆ ಉಚಿತ ಆಫರ್ ಕೂಡ ನೀಡುತ್ತಿತ್ತು.

ಇನ್ನು ಕೇಂದ್ರ ಸರ್ಕಾರದ ‘ಕ್ಯಾಶ್ಲೆಸ್ ಎಕಾನಮಿ’ಕರೆಗೆ ಓಗೊಟ್ಟಿರೋದಾಗಿ ಹೇಳಿದ್ದ ಕೆಲವು ಬ್ಯಾಂಕ್ಗಳು ಉಚಿತ ವಹಿವಾಟು ನೀಡೋದಾಗಿ ಘೋಷಿಸಿದ್ದವು. ಆದರೆ, ಎಚ್ಡಿಎಫ್ಸಿ, ಎಸ್ಬಿಐ ಬ್ಯಾಂಕ್ಗಳು ಮಾತ್ರ ಕ್ಯಾಶ್ಲೆಸ್ ಕರೆಯನ್ನು ಬಡ, ಕೂಲಿ, ಕಾರ್ಮಿಕ ವರ್ಗದವರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡುವ ಹುನ್ನಾರ ನಡೆಸಿದವು.

ಎಚ್ಡಿಎಫ್ಸಿ ಪ್ರತಿ ವಹಿವಾಟಿಗೆ 150 ಶುಲ್ಕ ವಿಧಿಸುತ್ತದೆ. ಕೆಲವು ಬ್ಯಾಂಕ್ಗಳು 50, ಇನ್ನು ಕೆಲವು 1,000ಕ್ಕೆ 5 ರೂ. ಶುಲ್ಕ ವಸೂಲಿ ಮಾಡಿದವು. ಒಂದೊಂದು ಬ್ಯಾಂಕ್ಗಳು ಒಂದೇ ವಹಿವಾಟಿಗೆ ತಮ್ಮ ಮನಸಿಗೆ ತೋರಿದಷ್ಟು ಶುಲ್ಕವನ್ನು ವಿಧಿಸೋದು ಯಾವ ಸೀಮೆಯ ನ್ಯಾಯ? ಹೀಗೆ ಮನಸೋ ಇಚ್ಚೆ ಗ್ರಾಹರಕರನ್ನು ಬ್ಯಾಂಕ್ಗಳು ಲೂಟಿ ಮಾಡಿದವು. ಆದರೆ, ಆರ್ಬಿಐ ಮಾತ್ರ ಏನೊಂದನ್ನೂ ನೋಡದೆ, ಕೇಳದೆ ಸುಮ್ಮನೆ ಕುಳಿತುಬಿಟ್ಟಿತ್ತು.

ಆಕ್ಸಿಸ್ ಬ್ಯಾಂಕ್ ಬೇರೆ ಶಾಖೆಯ ಖಾತೆಗಳ ವಹಿವಾಟಿಗೆ ಶುಲ್ಕ ವಿಧಿಸಿತು. ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಆದರೆ, ಬ್ಯಾಂಕ್ಗಳು ಮಾತ್ರ ಡಿಜಿಟಲ್ ನೆಟ್ವರ್ಕ್ ಇದ್ದರೂ, ಕಳ್ಳದಾರಿಯಲ್ಲಿ ಗ್ರಾಹಕರಿಂದ ಹಣ ಸುಲಿದವು.

ಇವೆಲ್ಲಕ್ಕಿಂತ ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪಾರದರ್ಶಕ ವಹಿವಾಟಿಗಾಗಿ ಎಲ್ಲೆಡೆ ಬಿಲ್ ನೀಡುವುದನ್ನು ಕಡ್ಡಾಯಗೊಳಿಸಿ ಕಾನೂನನ್ನೂ ರೂಪಿಸಲಾಗಿದೆ. ಆದರೆ, ದೇಶದ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್ಗಳೇ ಇದುವರೆಗೆ ಬಿಲ್ ನೀಡಿ, ಹಣ ಪಡೆಯುವ ಕ್ರಮವನ್ನು ಪಾಲಿಸಿಲ್ಲ. ಎಸ್ಬಿಐ ರೂಪಿಸಿರುವ ಹೊಸ ನಿಮಯಗಳು ಜಾರಿಯಾಗಿ, ನಿಮ್ಮ ಖಾತೆಯನ್ನು ರಾಜಾರೋಷವಾಗಿ ದೋಚುವ ಕೆಲಸ ಇನ್ನಷ್ಟು ಜೋರಾಗಿಯೇ ನಡೆಸಿತು. ಶೇಕಡಾವಾರು ಆಧಾರದಲ್ಲಿ ಶುಲ್ಕ, ಹೆಚ್ಚುವರಿ ವಹಿವಾಟಿಗೆ ಶುಲ್ಕ, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಿದ್ದರಿಂದ ಬಡವರ, ಮಧ್ಯಮವರ್ಗದವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿ ವೇತನ ಆಧರಿಸಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ, ವೃದ್ಧಾಪ್ಯ ವೇತನ ಪಡೆಯುತ್ತಿರುವ ಹಿರಿಯ ನಾಗರಿಕರ ದುಡ್ಡಿಗೆ ಕತ್ತರಿ ಬಿತ್ತು.

ಗ್ರಾಹಕರಿಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಕನಿಷ್ಠ ವಿಷಯವನ್ನೂ ತಿಳಿಸದೇ ಬ್ಯಾಂಕ್ಗಳು ಗ್ರಾಹಕರನ್ನು ಸುಲಿದವು. ಈ ಸುಲಿಗೆಯ ಯಾಗಕ್ಕೆ ಮೂರ್ಖರ ದಿನಕ್ಕಾಗಿ ಮುಹೂರ್ತವನ್ನು ಕೂಡ ನಿಗದಿಪಡಿಸಲಾಯಿತು. ಈ ಮೂಲಕ ಎಲ್ಲ ಬ್ಯಾಂಕ್ ಖಾತೆದಾರರನ್ನು ಮೂರ್ಖರನ್ನಾಗಿಸಲಾಯಿತು. ಈ ಮೂಲಕ ಬ್ಯಾಂಕ್ಗಳತ್ತ ನಾಗರಿಕರು ಸುಳಿಯದಂತೆ ಮಾಡುವ ಹುನ್ನಾರವಿದೆಯೇ? ಎಂಬ ಪ್ರಶ್ನೆ ಮೂಡಿತು.

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply