ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತರಾಗಿದ್ದಾರೆ. ಆದರೆ, ಇದೀಗ ಅವರ ಪತ್ನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಮೋಸದ ದೂರು ದಾಖಲಾಗಿದೆ. ದೂರಿನಲ್ಲಿ ಶಿಲ್ಪಾ ತಾಯಿ ಸುನಂದಾ ಶೆಟ್ಟಿ ಹೆಸರು ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಬಂಧನ ಭೀತಿಯಲ್ಲಿದ್ದಾರೆ. ಇಬ್ಬರಿಗೆ ಕೋಟ್ಯಂತರ ರೂ. ವಂಚನೆ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಸುನಂದಾ ಶೆಟ್ಟಿ ವಿಚಾರಣೆಗೆ ಹಾಜರಾಗಬೇಕಿದೆ.
ನಟನೆ ಜೊತೆಗೆ ಶಿಲ್ಪಾ ಶೆಟ್ಟಿ ಫಿಟ್ನೆಸ್ ಕೇಂದ್ರದ ಒಡತಿ. ಇವೋಸಿಸ್ ವೆಲ್ನೆಸ್ ಹೆಸರಿನ ಫಿಟ್ನೆಸ್ ಕೇಂದ್ರ ಅವರ ಒಡೆತನದಲ್ಲಿದೆ. ಇದಕ್ಕೆ ಶಿಲ್ಪಾ ಶೆಟ್ಟಿ ಮುಖ್ಯಸ್ಥೆಯಾಗಿದ್ದರೆ, ತಾಯಿ ಸುನಂದಾ ನಿರ್ದೇಶಕಿ.
ಇದರ ಶಾಖೆಗಳನ್ನು ಬೇರೆಡೆ ತೆರೆಯಲು ಯೋಜನೆ ರೂಪಿಸಿದ್ದರು. ಹೊಸ ಶಾಖೆ ಆರಂಭಿಸುವುದಾಗಿ ಭರವಸೆ ನೀಡಿ, ಇಬ್ಬರು ವ್ಯಕ್ತಿಗಳಿಂದ ಕೋಟ್ಯಂತರ ರೂ. ಹಣವನ್ನು ಪಡೆದು ಶಿಲ್ಪಾ ಶೆಟ್ಟಿ ಮತ್ತು ಸುನಂದಾ ಶೆಟ್ಟಿ ತಮಗೆ ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಈ ಕುರಿತು ಜೋಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ಎಂಬುವವರು ಲಖ್ನೋದ ಹಜರತ್ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಲು ಲಖ್ನೋ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ. ಒಂದು ವೇಳೆ ಶಿಲ್ಪಾ, ಸುನಂದಾಟ್ಟಿ ಮೋಸ ಮಾಡಿರುವುದಕ್ಕೆ ಪುರಾವೆಗಳು ಸಿಕ್ಕಲ್ಲಿ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ..
ಪತಿ ರಾಜ್ ಕುಂದ್ರಾ ನೀಲಿ ಚಿತ್ರಗಳ ಹಗರಣದಲ್ಲಿ ಬಂಧನಕ್ಕೆ ಒಳಗಾಗಿ ಶಿಲ್ಪಾ ಶೆಟ್ಟಿಗೆ ತೀವ್ರವಾದ ಮುಜುಗರ ಎದುರಾಗಿದೆ. ಪ್ರತಿಷ್ಠಿತ ಕಂಪನಿಗಳಿಗೆ ರಾಯಭಾರಿ ಆಗಿದ್ದ ಶಿಲ್ಪಾ, ಈ ಘಟನೆಯ ನಂತರ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದರು. ಇದೀಗ ಸ್ವತಃ ಅವರ ವಿರುದ್ಧವೇ ವಂಚನೆ ಪ್ರಕರಣ ದಾಖಲಾಗಿದೆ.




