ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬೇಡ ಅನ್ನೋಕೆ ನೈಜ ಕಾರಣಗಳೇನು?
ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ,
ಮಾನ್ಯ ಗುರುಗಳೇ,
ವಿಷಯ: ಕರ್ನಾಟಕ ಸರ್ಕಾರ ನಡೆಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬೇಡ ಅನ್ನೋಕೆ ನೈಜ ಕಾರಣಗಳೇನು
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಸರ್ಕಾರ ಈ ಹಿಂದೆ ನಡೆಸಿರುವ ಜಾತಿ ಆಧಾರಿತ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯನ್ನು ಬಹಿರಂಗ ಪಡಿಸುವುದು ಬೇಡ ಎಂಬ ಹೇಳಿಕೆ ಜಾಹೀರಾಗಿವೆ. ಆದರೆ ಒಂದು ಜನಾಂಗ ಹಿಂದುಳಿದ ಅಥವಾ ಮುಂದುವರಿದ ಸ್ಥಾಯೀ ಸ್ವರೂಪ ತಿಳಿಯಬೇಕಾದರೆ ಒಂದು ನಿಖರವಾದ ದತ್ತಾಂಶ ಬೇಕಿದೆ.
1931ರ ಜನಗಣತಿ ತನಕ ನಮಗೆ ಪ್ರಾಂತ್ಯವಾರು ಜಾತಿ ಮತ್ತು ಧರ್ಮ ಆಧಾರದ ಅಂಕಿ ಅಂಶಗಳು ಲಭ್ಯವಾಗಿದೆ. ತಮಗೂ ತಿಳಿದಂತೆ ಮಿಲ್ಲರ್ ಆಯೋಗ ನಿಮ್ನ ವರ್ಗದವರೆಂದು ಗುರುತಿಸಲು ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ಇರುವಿಕೆಯನ್ನು ಮಾನದಂಡವಾಗಿ ಪ್ರಯೋಗ ಮಾಡಿ ಅನೇಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮೀಸಲಾತಿಯನ್ನು ಜಾರಿಗೆ ತರಲು ಕೋರಿದೆ. ಆವಾಗ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರು ಮೊದಲಿಗರು; ಲಿಂಗಾಯಿತರು ಎರಡನೆಯ ಪ್ರಬಲ ಕೋಮು.
ಒಂದುವೇಳೆ, 1871ರಿಂದ 1931ರ ತನಕ ಜಾತಿ ಆಧಾರಿತ ಜನಗಣತಿಯನ್ನು ಮಾಡದಿದ್ದರೆ ನಿಮ್ಮ ಸಮಾಜದ ಸಂಖ್ಯಾಬಲ ತಿಳಿಯಲು ಸಾಧ್ಯವಿತ್ತೆ.
1931ರ ಜನಗಣತಿ ಹೊರಹಾಕಿದ ಅಂಕಿ ಅಂಶಗಳು ಮೇಲ್ವರ್ಗದ ಜನರನ್ನು ನಿದ್ದೆಗೆಡಿಸಿತ್ತು. ಅದಕ್ಕೆ ಹೊಂಚುಹಾಕಿ ತರುವಾಯ ಸಮಗ್ರ ಜಾತಿ ಜನಗಣತಿ ನಡೆಯದಂತೆ ಮೇಲ್ವರ್ಗದ ಜನರು ಕೈಜೋಡಿಸಿದ್ದಾರೆ. ಬಹುಶಃ 1951ರಿಂದ ಕೇಂದ್ರ ಸರ್ಕಾರ ನಡೆಸುವ ಸಾಮಾನ್ಯ ಜನಗಣತಿಯಲ್ಲಿ ಜಾತಿ ಆಧಾರಿತ ಮಾಡಿದ್ದರೆ ನೀವೂ ಸಹ ಸಂತೃಪ್ತಿ ಪಡುತ್ತಿದ್ದಿರೇನೋ.
ನಿಮಗೂ ಗೊತ್ತು, ಕಾಕ ಕಾಳೇಕರ್ ಮತ್ತು ರಾಜ್ಯದ ನಾಗನಗೌಡರ್ ಆಯೋಗದಿಂದ ಚಿನ್ನಪ್ಪ ರೆಡ್ಡಿ ಆಯೋಗದ ತನಕ ಹಿಂದುಳಿದ ವರ್ಗಗಳ ಸಂಖ್ಯಾ ಬಲ ಅರಿಯಲು ಅವುಗಳು ಪ್ರಾತಿನಿಧಿಕ ಸಮೀಕ್ಷೆ ಮಾಡಿವೆ. ಬಹುಶಃ ಕೇಂದ್ರ ಸರ್ಕಾರ 1951ರಿಂದ ಎಲ್ಲಾ ಜಾತಿಗಳ ಸಮೀಕ್ಷೆ ಮಾಡಿದ್ದರೆ ಯಾವುದೆ ರಗಳೆ ಮಾಡುತ್ತಿರಲಿಲ್ಲ.
ಕಾಂತರಾಜು ವರದಿಯನ್ನು ಮೂಲೆಗುಂಪು ಮಾಡುವುದು ಎಷ್ಟರ ಮಟ್ಟಿಗೆ ಸರಿ ಹೇಳಿ. ಅನೇಕ ದನಿಹೀನ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಒಂದು ಮಾನದಂಡ ಬೇಡವೆಂದರೆ ಹೇಗೆ. ವರದಿ ಬಹಿರಂಗ ಆಗುವ ಮುನ್ನ ನಿಮ್ಮ ಅಥವಾ ಬೇರೊಂದು ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಉದಾಹರಣೆಗೆ ಅನ್ನದ ರಾಶಿಯ ಮೇಲೆ ಹಸಿದವರೆಲ್ಲರೂ ಒಮ್ಮೆಗೆ ಬಿದ್ದರೆ ಯಾರಿಗೂ ಹಸಿವು ನೀಗಲಾಗದು. ಅದನ್ನು ಪಂಕ್ತಿಭೇದವಿಲ್ಲದೆ ಸಮಾನವಾಗಿ ಹಂಚಿಕೊಂಡರೆ ಎಲ್ಲರೂ ಹಸಿವಿನಿಂದ ಮುಕ್ತರಾಗಲು ಸಾಧ್ಯವಿದೆ. ಇದೆ ರೀತಿ ಸರ್ಕಾರದ ಫಲಗಳನ್ನು ಹಂಚಿಕೊಂಡರೆ ಬಹುಶಃ ಸಾಮಾಜಿಕ ಚಡಪಡಿಕೆ ಹಿಂಜರಿಕೆ ಆಗುತ್ತದೆ.
ಒಂದುವೇಳೆ ವ್ಯಕ್ತಿಯೊಬ್ಬ ವಾರಾನುಗಟ್ಟಲೆ ಜ್ವರದಿಂದ ಬಳಲುತ್ತಿದ್ದಾರೆ, ಅವರನ್ನು ಪರೀಕ್ಷೆಗೆ ಒಳಪಡಿಸಲು ವೈದ್ಯರು ಮುಂದಾದಾಗ ಬೇಡವೆಂದರೆ ವೈದ್ಯರು ಅವರಿಗೆ ಔಷಧೋಪಚಾರ ಮಾಡುವುದೋದರೂ ಹೇಗೆ. ಇದೇ ಮಾದರಿಯಲ್ಲಿ ಜಾತಿ ವರ್ತುಲದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಮೂಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಲು ಇರುವ ಮಾರ್ಗವಾದರೂ ಏನಿದೆ ಹೇಳಿ ಸ್ವಾಮ್ಗಳೆ.
ವರದಿ ಬಹಿರಂಗ ಆಗಲಿ, ಅದರಲ್ಲಿ ಇರಬಹುದಾದ ಓರೆ ಕೋರೆಗಳನ್ನು ಸರಿಪಡಿಸಲು ಚರ್ಚೆ ಮಾಡಬಹುದು. ಟೀಕೆಟಿಪ್ಪಣಿಗಳು ಮೂಡಿದಾಗ ಒಂದು ಒಪ್ಪಿಗೆ ಮಾರ್ಗಸೂಚಿ ಸಿಗುತ್ತದೆ. ವರದಿ ಸ್ವೀಕಾರ ಬೇಡ ಅನ್ನುವುದು ಸಾಮಾಜಿಕ ನ್ಯಾಯ ನೀಡಿಕೆ ಬೇಡವೆಂದಂತಾಗುತ್ತದೆ. ನೀವು ಮುಕ್ತ ಮನಸ್ಸಿನಿಂದ ಪ್ರತಿ ಸಮುದಾಯದ ನೋವುಗಳಿಗೆ ಸ್ಪಂದಿಸುವ ಮೂಲಕ ಹೊಸದೊಂದು ಸಾಮಾಜಿಕ ಕ್ರಾಂತಿಗೆ ಮುಂದಡಿ ಇಡಬೇಕು. ಆವಾಗ ನೀವೊಂದು ಆಶ್ರಯ ನೀಡುವ ವನದಂತೆ ಕಾಣುತ್ತೀರಿ.
ಇಂತು ನಿಮ್ಮವ
– ದಾಸನೂರು ಕೂಸಣ್ಣ, ಸಮುದಾಯ ಚಿಂತಕರು




