ಗಾಂಧಿ ನಿನಗೇ ನೀನೇ ಸಾಟಿ

3 years ago

#Gandhi #freedommoment #politics #ksnagaraj

1948, ಜನವರಿ 30ರಂದು ಮಹಾತ್ಮಗಾಂಧಿರವರು ಹತ್ಯೆಯ ನಂತರ ಅವರ ಮಕ್ಕಳಾದ ಹರಿಲಾಲ, ಮಣಿಲಾಲ, ರಾಮದಾಸ, ದೇವದಾಸ ಇವರಿಗೆ ಬಿಟ್ಟು ಹೋದ ಆಸ್ತಿ ಇವರ ಕನ್ನಡಕ, ಚಪ್ಪಲಿ, ಗಡಿಯಾರ, ಕೋಲು, ಒಂದು ಬಟ್ಟಲು ಮಾತ್ರವೇ ಆಗಿತ್ತೆ ಹೊರತು ಮಕ್ಕಳಿಗಾಗಿ ಸ್ತಿರಾಸ್ತಿಗಳ ಬಿಟ್ಟು ಹೋಗಲಿಲ್ಲ. ಬ್ಯಾಂಕಿನ ಖಾತೆಯಲ್ಲಿ ಕೋಟಿ ಕೋಟಿ ಹಣವನ್ನು ಇಟ್ಟು ಹೋಗಲಿಲ್ಲ. ಗಾಂಧಿಯ ಹೆಸರು ಹೇಳುವ ಮಂದಿ ಇಂದು ಮಕ್ಕಳಿಗಾಗಿ ಬಿಟ್ಟು ಹೋಗುತ್ತಿದ್ದಾರೆ. ಸಂಸ್ಕಾರದ ಬದಲಿಗೆ ಸಂಪತ್ತನ್ನು ಬ್ಯಾಂಕುಗಳಲ್ಲಿ ಇಟ್ಟು ಹೋಗುತ್ತಿದ್ದಾರೆ. ಬೆಳ್ಳಿ, ಬಂಗಾರ, ಕೋಟಿ ಕೋಟಿ ಹಣವನ್ನು ಎಲ್ಲಿಯ ಗಾಂಧಿ, ಗಾಂಧಿಯ ಹೆಸರೇಳುವ ಮಂದಿಯೆಲ್ಲಿ.

ಮಹಾತ್ಮಗಾಂಧಿ 1908, ಜನವರಿ 10ರಿಂದ, 6ನೇ ಮೇ, 1944ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದಯ ನೀತಿಯ ವಿರುದ್ಧ ಮತ್ತು ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಒಟ್ಟಾರೆಯಾಗಿ 2338 ದಿನಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿರುತ್ತಾರೆ. ದಕ್ಷಿಣ ಆಫ್ರಿಕಾವನ್ನು ಬಿಟ್ಟು ಭಾರತಕ್ಕೆ ಬರುವ ಸಂದರ್ಭದಲ್ಲಿ ಅಲ್ಲಿ ತಮ್ಮ ವಕೀಲಿ ವೃತ್ತಿಯಿಂದ ಸಂಪಾದಿಸಿದ ಹಣ, ವಿವಿಧ ಸಂದರ್ಭಗಳಲ್ಲಿ ನೀಡಿದ ಹಣ, ಕೊಡುಗೆಗಳು ಎಲ್ಲವನ್ನು ಮಾರಾಟ ಮಾಡಿ ಟ್ರಸ್ಟ್ ಒಂದನ್ನು ಸ್ಥಾಪಿಸಿ ಬರಿಗೈಲಿ ಬರುತ್ತಾರೆ. ಜೊತೆಗೆ ತಮ್ಮ ಹೆಂಡತಿಯ ಮೈಮೇಲಿದ್ದ ಇಷ್ಟಪಟ್ಟು ಧರಿಸಿದ್ದ ಉಡುಗೊರೆಯಾಗಿ ಬಂದಿದ್ದ ಒಡವೆಗಳನ್ನು ಕಸ್ತೂರಿಬಾರವರಿಂದ ಹಿಂತೆಗೆದುಕೊಳ್ಳುತ್ತಾರೆ.

ತಮ್ಮ ಮಗ ಹರಿಲಾಲ ವಿದೇಶದಲ್ಲಿ ತಂದೆ ಶಿಕ್ಷಣವನ್ನು ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬದುಕಿರುವಷ್ಟು ದಿನವೂ ಗಾಂಧಿಯನ್ನು ವಿರೋಧಿಸುತ್ತಾ ಅವರ ವ್ಯಕ್ತಿತ್ವವನ್ನು ಹಾಳು ಮಾಡುವ ಸಲುವಾಗಿ ಅನೇಕ ರೀತಿಯ ಯೋಜನೆಗಳನ್ನು ರೂಪಿಸುತ್ತಾನೆ. ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಾನೆ. ಇದು ಗಾಂಧಿಯವರು ಬದುಕಿದ ದಾರಿ. ತಮ್ಮ ಆಶ್ರಮದಲ್ಲಿ ತಮ್ಮ ಹೆಂಡತಿ, ಅಗತ್ಯಕ್ಕಿಂತ ಹೆಚ್ಚಿನ ಸಕ್ಕರೆಯನ್ನು ಬಳಸಿದರು ಎಂಬ ಕಾರಣಕ್ಕೆ ಉಪವಾಸವನ್ನು ನಡೆಸುತ್ತಾರೆ. ದಾನಿಗಳ ಪಟ್ಟಿಯಲ್ಲಿನ ಎರಡು ರೂಪಾಯಿಗಳ ಲೆಕ್ಕ ಹೆಚ್ಚುಕಮ್ಮಿಯಾದಾಗ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ನಡೆಸುತ್ತಾರೆ. ತಮ್ಮ ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ 150 ರೂಪಾಯಿಗಳನ್ನು ಆಶ್ರಮದ ಲೆಕ್ಕದಲ್ಲಿ ಕೊಡಲು ನಿರಾಕರಿಸುತ್ತಾರೆ. ಇದು ಗಾಂಧಿಯವರ ಬದ್ಧತೆ.

1936ರಲ್ಲಿ ಟ್ರಾವಂಕೂರಿನ ದೇವಾಲಯಕ್ಕೆ ಹರಿಜನರಿಗೆ ಪ್ರವೇಶವನ್ನು ಕಲ್ಪಿಸಿಕೊಡುತ್ತಾರೆ. ತಮ್ಮ ಹೋರಾಟದ ಸಂದರ್ಭದಲ್ಲಿ ದೇವಾಲಯಗಳಿಗೆ ಕರೆದ ಮಂದಿಗೆ ಹರಿಜನರಿಗೆ ಪ್ರವೇಶವಿಲ್ಲದ ದೇವಾಲಯಗಳು ನನಗೆ ಬೇಡವೆಂದು ಅವರ ಆಹ್ವಾನವನ್ನು ತಿರಸ್ಕರಿಸುತ್ತಾರೆ.

1933ರಲ್ಲಿ ಹರಿಜನ್ ಸೇವಕ ಸಂಘವನ್ನು ಸ್ಥಾಪಿಸುತ್ತಾರೆ. ಹರಿಜನ್ ಪತ್ರಿಕೆಯನ್ನು ಸ್ಥಾಪಿಸುತ್ತಾರೆ. ತಮ್ಮ ಆಶ್ರಮಗಳಲ್ಲಿ ಹರಿಜನ ಕುಟುಂಬಗಳಿಗೆ ಎಲ್ಲಾ ರೀತಿಯ ಆದ್ಯತೆಗಳನ್ನು ನೀಡುತ್ತಾರೆ. ಇದು ಗಾಂಧೀಜಿಯವರು ಅಸ್ಪೃಶ್ಯರನ್ನು ಹರಿಜನರು ಎಂದು ಕರೆಯಲು ಇದ್ದಂತಹ ಅವರ ಮೇಲಿನ ಹೃದಯಾಂತರಳದ ಪ್ರೀತಿಯಾಗಿತ್ತು.

ವಿದೇಶದಲ್ಲಿ ಓದಿ ಉನ್ನತವಾದಂತಹ ವ್ಯಾಸಂಗ ಪಡೆದು ಭಾರತ ದೇಶದಲ್ಲಿ ಜನರ ಪರಿಸ್ಥಿತಿಯನ್ನು ಸೂಟು ಬೂಟು ದಧಿಕ್ಕರಿಸಿ ತುಂಡು ಬಟ್ಟೆಯನ್ನು ಧರಿಸಿ, ಬಡವರಲ್ಲಿ ಬಡವರಾದವರು ಗಾಂಧೀಜಿಯವರು. ಹೋರಾಟದ ಸಂದರ್ಭದಲ್ಲಿ ವ್ಯತ್ಯಾಸಗಳು ಆದಾಗ ಹಿಂಸಾಚಾರಗಳು ಸಂಭವಿಸಿದಾಗ ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ದೇಹವನ್ನು ದಂಡಿಸಿಕೊಂಡವರು ಗಾಂಧೀಜಿ. ಅವರು ನಡೆಸಿದಷ್ಟು ಉಪವಾಸದ ಸತ್ಯಾಗ್ರಹ ಬೇರೆ ಯಾವ ನಾಯಕರಿಂದಲೂ ನಡೆದಿರಲು ಸಾಧ್ಯವಿಲ್ಲ.

1944ರಲ್ಲಿ ಸುಭಾಷ್ ಚಂದ್ರಬೋಸ್‌ರವರು ಗಾಂಧಿಯವರಿಗೆ ರಾಷ್ಟ್ರಪಿತ ರವೀಂದ್ರನಾಥಠಾಗೂ‌ರವರು ಇವರನ್ನು ಮಹಾತ್ಮ ಎಂದು ಅನ್ವಯವಾಗುವಂತೆ ತಮ್ಮ ಬದುಕಿನಲ್ಲಿ ಒಂದಿಂಚು ಲೋಪಬರದಂತೆ ಎಂದು ಕರೆದರು. 

ಗೋಪಾಲಕೃಷ್ಣ ಗೋಖಲೆಯವರ ಕರೆಯ ಮೇರೆಗೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇವರು ನಡೆಸಿದ ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ ಚಳುವಳಿ ಇವುಗಳು ಭಾರತದ ಇತಿಹಾಸದಲ್ಲಿ ದೊಡ್ಡ ಬದಲಾವಣೆಯನ್ನೇ ಮಾಡಿತು. ಯಾರನ್ನು ದ್ವೇಷಿಸದೆ ಹಿಂಸೆಯಿಲ್ಲದೆ ರಕ್ತಪಾತ ನಡೆಸದೆ ಶತ್ರುವಿನ ಮನಸ್ಸನ್ನು ಗೆಲ್ಲುವುದರ ಮೂಲಕ ರಕ್ತರಹಿತವಾದ ಹೋರಾಟವನ್ನು ಮಾಡಿದ ಗಾಂಧಿಯವರ ಪ್ರತಿಮೆಗಳು ಸ್ಮಾರಕಗಳು ಪ್ರಪಂಚದ 148 ದೇಶಗಳಲ್ಲೂ ಇವೆ.

ಗಾಂಧಿ ಹತ್ಯೆಯಾದ ದಿನ ಪ್ರಥಮ ಬಾರಿಗೆ ಮುಂದೆಂದೂ ನಡೆಯದ ರೀತಿಯಲ್ಲಿ ವಿಶ್ವಸಂಸ್ಥೆಯ ಕಟ್ಟಡದ ಮೇಲಿನ ಎಲ್ಲಾ ದೇಶಗಳ ಬಾವುಟವನ್ನು ಇಳಿಸಿ ಗೌರವವನ್ನು ಅರ್ಪಿಸಿರುತ್ತಾರೆ. ಸರಳತೆ, ಪ್ರಾಮಾಣಿಕತೆ ಮತ್ತು ಶುದ್ಧವಾದಂತಹ ಬದುಕನ್ನು ನಡೆಸುವುದು ಹೇಗೆಂಬುದನ್ನು ಇವರ ಆತ್ಮಚರಿತ್ರೆಯಿಂದ ಅರಿಯಬೇಕು.

1947ರ ಆಗಸ್ಟ್ 15ರಂದು ದೆಹಲಿಯಲ್ಲಿ ಕೆಂಪು ಕೋಟೆಯ ಮೇಲೆ ಸ್ವಾತಂತ್ರೋತ್ಸವದ ಸಂಭ್ರಮ ನಡೆಯುತ್ತಿತ್ತು. ಆದರೆ ಗಾಂಧಿಯವರು ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಹಿನ್ನೆಲೆಯಲ್ಲಿ ಕಲ್ಕತ್ತಾದಲ್ಲಿ ನಡೆಯುತ್ತಿದ್ದ ಹಿಂಸಾಚಾರಕ್ಕೆ ನೊಂದು ಒಂದು ದಿನ ಪೂರ್ತಿ ಉಪವಾಸವನ್ನು ಮಾಡಿ ದೇವರ ಭಜನೆಯಲ್ಲಿ ತಲ್ಲೀನರಾಗಿದ್ದರು. ಪಶ್ಚಿಮ ಬಂಗಾಳದ ನೌಕಾಲಿಯಲ್ಲಿ ನಡೆದಂತಹ ಕೋಮುಸಂಘರ್ಷದ ಸಂದರ್ಭದಲ್ಲಿ ಬರಿಗಾಲಿನಲ್ಲಿ ಆ ಜನಗಳ ನಡುವೆ ನಡೆದಾಡಿ ಶಾಂತಿಯನ್ನು ಸ್ಥಾಪಿಸಿ ಇತಿಹಾಸವನ್ನು ನಿರ್ಮಿಸಿರುತ್ತಾರೆ.

ಗಾಂಧೀಜಿಯವರ ವಿಚಾರದಲ್ಲಿ ಅನೇಕರು ಅನೇಕ ರೀತಿಯ ಟೀಕೆಗಳನ್ನು ಮಾಡಬಹುದು. ಆದರೆ ಅವರಷ್ಟು ಬದ್ಧತೆಯ ಶುದ್ಧತೆಯ ಪರಿಪೂರ್ಣತೆಯ ಬದುಕನ್ನು ಬೇರೊಬ್ಬರು ನಡೆಸಿದ ಉದಾಹರಣೆಗಳಿಲ್ಲ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಯಲ್ಲಿ ಅಸ್ಪಶ್ಯತೆಯ ವಿರುದ್ಧ ಹೋರಾಟವನ್ನು ನಡೆಸಿದರು. ವೈಯಕ್ತಿಕ ಬದುಕಿನ ಶುದ್ಧತೆಯ ವಿಚಾರಗಳನ್ನು ಪ್ರಸ್ತಾಪ ಮಾಡಿದರು. ದೇಶದ ಜನರ ಬದುಕಿಗೆ ಬೇಕಾದ ಆರ್ಥಿಕ ನೀತಿಗಳನ್ನು ರೂಪಿಸಿದರು. ಗ್ರಾಮೀಣಾಭಿವೃದ್ಧಿಯ ಕನಸು ಕಂಡರು, ಹೋರಾಟದ ಜೊತೆ ಜೊತೆಗೆ ರಚನಾತ್ಮಕ ಕಾರ್ಯಗಳನ್ನು ನಡೆಸಿದರು.

ಅಂದು ಟಿ.ವಿ. ಇರಲಿಲ್ಲ. ಮೊಬೈಲ್‌ಗಳು ಇರಲಿಲ್ಲ, ಮಾಹಿತಿ ತಂತ್ರಜ್ಞಾನದ ಜಾಲತಾಣಗಳು ಇರಲಿಲ್ಲ. ಇಷ್ಟೊಂದು ಪತ್ರಿಕೆಗಳು ಇರಲಿಲ್ಲ. ಆದರೂ ಗಾಂಧಿ ನೀಡುವ ಒಂದು ಕರೆಗೆ ಇಡೀ ದೇಶದಾದ್ಯಂತ ಮನೆ ಮನೆಯಲ್ಲಿ, ಹಳ್ಳಿ ಹಳ್ಳಿಯಲ್ಲಿ ಹೋರಾಟದ ವಿಚಾರ ಪ್ರಚಾರವಾಗುತ್ತಿತ್ತು. ಗಾಂಧಿಯ ಸಂದೇಶವನ್ನು ಹೊತ್ತು ಸಾಗುವ ಕೋಟಿ ಕೋಟಿ ಭಾರತೀಯರು ಇದ್ದರು. ಇದು ಗಾಂಧೀಜಿಯವರಿಗೆ ಇದ್ದ ಆಕರ್ಷಣೆಯ ವಿಶೇಷತೆ.

ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸಂವಿಧಾನವು ರಚನೆಯಾಗಿ ಅದರಡಿಯಲ್ಲಿ ದೇಶವೂ ನಡೆಯುತ್ತಿದೆ. ಆದರೆ ಗಾಂಧಿಯವರು ಪ್ರಸ್ತಾಪಿಸಿದ ವೈಯಕ್ತಿಕ ಶುದ್ಧತೆಯ ಬದುಕು ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ, ಸರಳತೆ, ಸತ್ಯ, ಅಹಿಂಸೆ ಇವೆಲ್ಲವೂ ಇನ್ನೂ ವೇದಿಕೆಗಳ ಮೇಲಿನ ಮಾತುಗಳಾಗಿದೆ.

ಹೆಲಿಕ್ಯಾಪ್ಟರ್‌ಗಳಲ್ಲಿನ ಸುತ್ತಾಟ, ದುಬಾರಿ ಕಾರುಗಳು ಸಂಚಾರ, ರಕ್ಷಣೆಗಾಗಿ ನೂರಾರು ಮಂದಿಯ ನಿಯೋಜನೆ, ವಾಸಿಸಲು ಅರಮನೆಯನ್ನು ನಾಚಿಸುವ ಭಂಗಲೆಗಳು ನಾವು ಕಾಣುತ್ತಿರುವ ವ್ಯವಸ್ಥೆಗಳು ಆದರೂ ಇನ್ನೂ ಮರೆತಿಲ್ಲ ದೇಶ ಗಾಂಧಿ ಜಯಂತಿ ಎಂದು ಗಾಂಧಿಯ ಪುಣ್ಯ ಸ್ಮರಣೆ ಎಂದು ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವುದು, ಸಮಾಧಿಗೆ ನಮಿಸುವುದು.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply