ಸಂವಿಧಾನದ ಪೀಠಿಕೆ: ಭವಿಷ್ಯದ ಜೀವನ ವಿಧಾನದ ಕನ್ನಡಿ

3 years ago

#Preamble #Constitution #mirror #future #wayoflife #rahamthtarikere

ಭಾರತದ ಸಂವಿಧಾನವು ಒಂದು ಪುಟ್ಟ ಪೀಠಿಕೆಯಿಂದ ಆರಂಭವಾಗುತ್ತದೆ. ಇದು ನಮ್ಮ ಪ್ರಾಚೀನ ಕಾವ್ಯಗಳ ನಾಂದೀ ಪದ್ಯದಂತಿದೆ. ಮೊದಲು ಪದ್ಯವು ಇಡೀ ಕಾವ್ಯದ ಆಶಯವನ್ನು ಹೇಳುತ್ತದೆ- ಹನಿ ಇಡೀ ಹೊಳೆಯ ಬಗ್ಗೆ ಹೇಳುವಂತೆ. ಈ ಪೀಠಿಕೆಯು ಸಂವಿಧಾನದ ಆಶಯವನ್ನು ಮಾತ್ರವಲ್ಲದೆ, ರೂಪುಗೊಳ್ಳಬೇಕಾದ ಭಾರತದ ಪರಿಕಲ್ಪನೆಯನ್ನೇ ಮುಂದಿಡುತ್ತದೆ. ಎಂತಲೇ ಇದನ್ನು ಬಾಬಾಸಾಹೇಬರು `ಭಾರತದ ಭವಿಷ್ಯದ ಜೀವನ ವಿಧಾನದ ಕನ್ನಡಿ’ ಎಂದು ಬಣ್ಣಿಸಿದರು. ಪೀಠಿಕಾ ಪುಟವನ್ನು ಶಾಂತಿನಿಕೇತನದ ಕಲಾವಿದ ರಾಮಮನೋಹರ್ ಸಿನ್ಹಾ ಅವರು ನಂದಾಲಾಲ್ ಬೋಸರ ಮಾರ್ಗದರ್ಶನದಲ್ಲಿ ತಮ್ಮ ಚಿತ್ರಕಲೆಯ ಮೂಲಕ ಸಿಂಗರಿಸಿದರು. ಈ ಮೂಲಕ ಅಂಬೇಡ್ಕರರ ಬೌದ್ಧಿಕ ಪ್ರಖರತೆ ಮತ್ತು ದಾರ್ಶನಿಕತೆಗೆ, ಧಾರ್ಮಿಕ ರಾಷ್ಟ್ರವಾದದ ವಿಮರ್ಶಕರಾಗಿದ್ದ ಟಾಗೂರರ ಶಾಂತಿನಿಕೇತನದ ಅಂಶವೂ ಮಿಳಿತವಾಯಿತು. ಸಂವಿಧಾನ ಸಭೆಯು ಪೀಠಿಕೆಯನ್ನು ನವೆಂಬರ್ 26, 1949ರಲ್ಲಿ ಅಳವಡಿಸಿತು; ಜನವರಿ 26ರಂದು  ಇದು ಜಾರಿಯಾಯಿತು. ಈ ಘಟನೆಗೀಗ 70 ವರ್ಷ.

ಪೀಠಿಕೆ ಶುರುವಾಗುವುದು ಅಶೋಕಚಕ್ರದ ಮೂಲಕ. ಅಶೋಕ ಎಂದರೆ ಶೋಕರಾಹಿತ್ಯ. ನೆತ್ತರ ಕಾಳಗಕ್ಕೆ ಹೇಸಿ ಅಹಿಂಸೆಯನ್ನು ಮೌಲ್ಯವಾಗಿ ಒಪ್ಪಿಕೊಂಡ ಚಕ್ರವರ್ತಿಯೊಬ್ಬನ ಹೆಸರಲ್ಲಿರುವ ಈ ಚಿಹ್ನೆಗೆ ಬೌದ್ಧ ಹಿನ್ನೆಲೆಯಿದೆ. ಚಲನೆಯ ಸಂಕೇತವಾದ ಚಕ್ರದ ಶೋಧವು ಮಾನವ ನಾಗರಿಕತೆಯ ವಿಕಾಸದಲ್ಲಿ ಕ್ರಾಂತಿಕಾರಕ ಪಲ್ಲಟಗಳನ್ನು ತಂದಿತಷ್ಟೆ. ಬುದ್ಧನ ಧರ್ಮಚಕ್ರದ ಕಲ್ಪನೆಯಲ್ಲೂ ಲೋಕದ ಬಾಳು ನಿರಂತರ ಪರಿವರ್ತನಶೀಲವಾಗಿದೆ ಎಂಬ ತತ್ವವಿದೆ; ಬಾಳು- ವ್ಯಕ್ತಿಯದಾಗಿರಲಿ ನಾಡಿನದಾಗಿರಲಿ- ನಿಲ್ಲಬಾರದು. ನಿಂತು ಸ್ಥಾವರಗೊಂಡರೆ ಪತನವಾಗುತ್ತದೆ ಎಂಬ ದನಿಯಿದೆ. ಸಂಪ್ರದಾಯವಾದಿ ಸಮಾಜಗಳಲ್ಲಿ ಪರಿವರ್ತನಶೀಲ ತತ್ವಗಳಿಗೆ ಯಾವತ್ತೂ ಮಹತ್ವವಿರುತ್ತದೆ. ಸಂವಿಧಾನ ಪೀಠಿಕೆಯಲ್ಲಿ ಸಿಂಧೂ ನದಿಯ ಹಿನ್ನೆಲೆಯಲ್ಲಿ ಹುಟ್ಟಿದ `ಇಂಡಿಯಾ’ ಶಬ್ದವು ಮೂರು ಸಲ ಕಾಣಿಸುತ್ತದೆ. ಚಲಿಸುವ ಚಕ್ರವೂ ಹರಿವ ಹೊಳೆಯೂ ಹೇಳುವ ದಿಟವೊಂದೇ ಆಗಿದೆ: ಅದು ಚಲನಶೀಲತೆ.     

ಅಶೋಕಚಕ್ರದಡಿ `ಸತ್ಯಮೇವ ಜಯತೆ’ ಎಂಬ ಮಂಡೂಕೋಪನಿಷತ್ತಿನ ವಾಕ್ಯವಿದೆ. ಇದನ್ನು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮದನಮೋಹನ ಮಾಳವೀಯರು ರಾಷ್ಟ್ರೀಯ ಚಳುವಳಿಗೆ (1918) ಜೋಡಿಸಿದರು. ಬ್ರಿಟಿಶರ ಆಳಿಕೆಯನ್ನು ವಿರೋಧಿಸುತ್ತಿದ್ದ ಭಾರತೀಯರಿಗೆ `ಸತ್ಯ’ ಅರ್ಥಾತ್ ನ್ಯಾಯವು ನಮ್ಮ ಕಡೆಯಿದೆ; ಅಸತ್ಯದ ಸಂಕೇತವಾಗಿರುವ ಬ್ರಿಟಿಶರನ್ನು ಸೋಲಿಸಿ ನಾವೇ ಗೆಲ್ಲುತ್ತೇವೆ ಎಂದು ಭರವಸೆ ನೀಡುವುದು ಇದರ ಇರಾದೆಯಾಗಿತ್ತು. ಗಾಂಧಿಯವರು ಇದೇ ಶಬ್ದವಿಟ್ಟುಕೊಂಡು `ಸತ್ಯಾಗ್ರಹ’ ಪರಿಕಲ್ಪನೆ ರೂಪಿಸಿದರು; `ಸತ್ಯದೊಡನೆ ನನ್ನ ಪ್ರಯೋಗಗಳು’ ಆತ್ಮಕಥೆ ಬರೆದರು. ತಾರತಮ್ಯ ನಡಾವಳಿಯಿರುವ ಸಮಾಜಗಳಲ್ಲಿ ಸರ್ವಸಮ್ಮತ ಸತ್ಯವೆಂಬುದು ಇರುವುದಿಲ್ಲ. ಅದು ಸದಾ ಸಾಪೇಕ್ಷವಾಗಿರುತ್ತದೆ. ಇಂಥ ಸನ್ನಿವೇಶದಲ್ಲಿ ದುರ್ಬಲರ ದೃಷ್ಟಿಕೋನದಲ್ಲಿ ಕಂಡ `ಸತ್ಯ’ವೇ ಗೆಲ್ಲಬೇಕೇ ಹೊರತು, ಬಲಿಷ್ಠರ ಕಣ್ನೋಟದ ಸತ್ಯವಲ್ಲ. ಹೀಗೆ ಪೀಠಿಕಾ ಚಿಹ್ನೆ ಮತ್ತು ಧ್ಯೇಯವಾಕ್ಯಗಳು ಬೌದ್ಧ ಮತ್ತು ಉಪನಿಷತ್ ದರ್ಶನದ ಧಾರೆಗಳ ಸಂಗಮಗೊಳಿಸುತ್ತವೆ.  

ಪೀಠಿಕೆಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗವು ಬರುವ ದಿನಮಾನದಲ್ಲಿ ದೇಶವು ಏನಾಗಬೇಕೆಂದು ವ್ಯಾಖ್ಯಾನಿಸುತ್ತದೆ. “ಭಾರತದ ಜನತೆಯಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ  ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ” ಎಂಬ ಆಶಯವನ್ನದು ಮುಂದಿಡುತ್ತದೆ. ಈ ವಾಕ್ಯ ಶುರುವಾಗುವುದು `ವಿ'(ನಾವು) ಶಬ್ದದಿಂದ. ಈ ಬಹವಚನ ಸೂಚಕ ಶಬ್ದವು ದೇಶದ ಸಮಸ್ತ ಪ್ರಜೆಗಳನ್ನು ಅವರ ಜಾತಿ-ಧರ್ಮ, ಪ್ರದೇಶ-ಭಾಷೆ ಜನಾಂಗ-ಲಿಂಗಗಳನ್ನು ಪರಿಗಣಿಸದೆ ತಬ್ಬಿಕೊಳ್ಳುವ ತೆರೆದ ತೋಳಿನಂತಿದೆ. ಇದು ಹೊಮ್ಮಿಸುವ ಅರ್ಥವು ಪೀಠಿಕೆಯಲ್ಲಿ ಮುಂದೆ ಬರುವ `ಎಲ್ಲಾ ಪ್ರಜೆಗಳಿಗೆ’ `ಎಲ್ಲರಲ್ಲಿ ಸೋದರತೆ’ ಇತ್ಯಾದಿ ಪದಗುಚ್ಛಗಳಲ್ಲಿ ಮತ್ತೆಮತ್ತೆ ಮುಖದೋರುತ್ತದೆ.

ಪೀಠಿಕೆಯಲ್ಲಿ ದೇಶವನ್ನು “ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ  ಪ್ರಜಾಸತ್ತಾತ್ಮಕ ಗಣರಾಜ್ಯ”  ಎಂದು ಕರೆಯಲಾಗಿದೆ. (ಇವುಗಳಲ್ಲಿ ಎರಡು ಮತ್ತು ಮೂರನೆಯ ಪರಿಕಲ್ಪನೆಗಳು 1976ರಲ್ಲಿ 42ನೇ ತಿದ್ದುಪಡಿಯ ಮೂಲಕ ಸೇರ್ಪಡೆಗೊಂಡವು.) `ಸಾರ್ವಭೌಮ’ ಪರಿಕಲ್ಪನೆಯು ದೇಶವು ಸರ್ವಸ್ವತಂತ್ರವಾಗಿದ್ದು ಯಾರಿಗೂ ಅಡಿಯಾಳಲ್ಲ ಎಂಬರ್ಥವುಳ್ಳದ್ದು.  ಬ್ರಿಟಿಶರ ಗುಲಾಮಗಿರಿಯಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಈ ಪರಿಕಲ್ಪನೆಗೆ ಸ್ವಾತಂತ್ರ್ಯ ಹೋರಾಟದ ಗಾಢ ನೆನಪುಗಳಿವೆ. `ಸಮಾಜವಾದಿ’ ಪರಿಕಲ್ಪನೆಯು ಬಡತನ-ಸಿರಿತನದ ಅಂತರವಿರುವ ಮತ್ತು ಕೆಲವರಲ್ಲೇ ಸಂಪತ್ತಿನ ಸಂಗ್ರಹವಿರುವ ದೇಶದಲ್ಲಿ, ಸಮಾನ ಹಂಚಿಕೆಯ ಆಶಯವನ್ನು ಉಸುರುತ್ತದೆ. `ಧರ್ಮನಿರಪೇಕ್ಷ’ವು ಬಹುಧಾರ್ಮಿಕ ನಾಡಿನಲ್ಲಿ ಪ್ರಭುತ್ವದ ನಿಲುವೇನಾಗಿರಬೇಕು ಎಂದು ಸೂಚಿಸುತ್ತದೆ. ಸಹಸ್ರಾರು ವರ್ಷಗಳ ರಾಜರಾಳಿಕೆಯಿಂದಲೂ ಎರಡು ಶತಮಾನಗಳ ವಸಾಹತುಶಾಹಿ ಆಳ್ವಿಕೆಯಿಂದಲೂ ಮುಕ್ತವಾದ ದೇಶವೊಂದು, ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತೇನೆಂದು ಘೋಷಿಸುವುದು, ಚಾರಿತ್ರಿಕ ಮಹತ್ವದ ವಿದ್ಯಮಾನ. ಪ್ರಭುತ್ವದ ನಾಯಕತ್ವವು ವಂಶ ಪರಂಪರೆಯಿಂದ ಬಾರದೆ,  ಜನರಾಯ್ಕೆಯಿಂದ ಸಿದ್ಧವಾಗುವ ವ್ಯವಸ್ಥೆಯೇ ಗಣರಾಜ್ಯ. ಎಂತಲೇ ಸ್ವಾತಂತ್ರ್ಯ ಗಳಿಕೆಯ ಮೂರು ವರ್ಷಗಳ ಬಳಿಕ ಸ್ವಂತ ಸಂವಿಧಾನದ ಮೂಲಕ ಭಾರತ ಗಣರಾಜ್ಯವಾಯಿತು. 

ಪೀಠಿಕೆಯ ಎರಡನೇ ಭಾಗವು ಸಂವಿಧಾನದ ಹೃದಯವಾಗಿದ್ದು, ಮೊದಲ ಭಾಗದ ಆಶಯಗಳಿಗೆ ವಿವರಣೆ ಕೊಡುತ್ತದೆ; ಅದು “ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ; ವ್ಯಕ್ತಿಗೌರವ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಸೋದರತೆ  ಭಾವನೆಯನ್ನು  ಮೂಡಿಸುವುದಕ್ಕೆ” ಸಂವಿಧಾನವನ್ನು ರಚಿಸಲಾಗಿದೆ ಎಂದು ಘೋಷಿಸುತ್ತದೆ. ಇವು ದೇಹದ ಅಂಗಾಂಗಗಳು ಬಿಡಿಬಿಡಿಯಾಗಿದ್ದರೂ ದೇಹಾರೋಗ್ಯಕ್ಕೆ ಪರಸ್ಪರ ಕೂಡಿ ದುಡಿಯುವಂತಿವೆ. ಈ ಪರಿಕಲ್ಪನೆಗಳಲ್ಲಿ ಒಂದನ್ನು ಹೊರತುಪಡಿಸಿದರೂ ಉಳಿದವಕ್ಕೆ ಅರ್ಥವಿಲ್ಲ ಎಂದು ಅಂಬೇಡ್ಕರ್ ಹೇಳಿದರು. ಹೀಗಾಗಿಯೇ, ಇಲ್ಲಿರುವ `ನ್ಯಾಯ’ವು ಸಾಮಾಜಿಕ ಆರ್ಥಿಕ ರಾಜಕೀಯ ಸಂಗತಿಗಳಿಗೂ; `ಸ್ವಾತಂತ್ರ್ಯ’ವು ವಿಚಾರ ಅಭಿವ್ಯಕ್ತಿ ನಂಬಿಕೆ ಧರ್ಮ ಮತ್ತು ಉಪಾಸನೆಗೂ; `ಸಮಾನತೆ’ಯು ಸ್ಥಾನಮಾನ ಮತ್ತು ಅವಕಾಶಗಳಿಗೂ; ಸೋದರತೆಯು ಮಾನವ ಸಂಬಂಧಗಳಿಗೂ ಸಂಬಂಧಿಸಿದೆ.

ಮೂರನೆಯ ಭಾಗವು, ಮೇಲ್ಕಾಣಿಸಿದ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಲು ಮತ್ತು ನಾಡನ್ನು ಕಟ್ಟಲು ಮಾಡುವ ಸಂಕಲ್ಪದಿಂದ ಕೂಡಿದೆ: “ಸಂವಿಧಾನ ಸಭೆಯಲ್ಲಿ 1949ನೆಯ ಇಸವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ” ಎಂದದು ಪಣ ತೊಡುತ್ತದೆ. ಇಲ್ಲಿ `ಅರ್ಪಿಸಿಕೊಳ್ಳುವ’ `ಅಂಗೀಕರಿಸುವ’ `ವಿಧಿಸಿಕೊಳ್ಳುವ’ ಕ್ರಿಯಾರೂಪಗಳಿವೆ. ಮೌಲ್ಯಾದರ್ಶಗಳನ್ನು ರೂಪಿಸಿಕೊಂಡವರೇ ಅವನ್ನು ತಮಗೆ ಅರ್ಪಿಸಿಕೊಳ್ಳುವ ಮತ್ತು  ಸ್ವೀಕರಿಸುವ ಕಲ್ಪನೆಯೇ ವಿನೂತನ. ನುಡಿದಂತೆ ನಡೆಯುತ್ತೇವೆ ಎಂದು ಬದ್ಧತೆ ಪ್ರಕಟಿಸುವಿಕೆಯಿದು   

ಸಂವಿಧಾನವು, ಹೊಸತಾಗಿ ದೇಶ ಮತ್ತು ಸಮಾಜವನ್ನು ಕಟ್ಟಲೆಂದು ರೂಪಿತಗೊಂಡ, ಕಾನೂನಿನ ಜಟಿಲ ಪರಿಭಾಷೆಯಲ್ಲಿ ರಚಿತವಾದ ಹಲವಾರು ಅನುಚ್ಛೇದಗಳಿಂದ ತುಂಬಿದ ಒಂದು ಪಠ್ಯ. ಅದಕ್ಕೆ ಬರೆಯಲಾದ ಈ ಪೀಠಿಕೆಯು ಘನವಾದ ಮೌಲ್ಯಾದರ್ಶಗಳಿಂದ ಕೂಡಿದ ಬಾಗಿಲು. ಈ ಬಾಗಿಲ ಚೌಕಟ್ಟಿನಲ್ಲಿ ಪ್ರತಿಯೊಂದು ಶಬ್ದವನ್ನೂ ಎಚ್ಚರದಿಂದಲೂ ದೂರದೃಷ್ಟಿಯಿಂದಲೂ ಕೆತ್ತಲಾಗಿದೆ. ಇಲ್ಲಿರುವ `ನ್ಯಾಯ’ `ಸ್ವಾತಂತ್ರ್ಯ’ `ಸಮಾನತೆ’ ಇತ್ಯಾದಿ ಕಲ್ಪನೆಗಳ ಹಿಂದೆ ಫ್ರೆಂಚ್‍ಕ್ರಾಂತಿಯ ಪ್ರೇರಣೆ ಇದ್ದಂತಿದೆ; ಇಲ್ಲಿರುವ `ಧರ್ಮಾತೀತ’ ಪರಿಕಲ್ಪನೆ ಪಶ್ಚಿಮದಿಂದ ಬಂದಿರಬಹುದು. ಆದರೆ ಇವೆಲ್ಲವೂ ಭಾರತೀಯ ಪರಂಪರೆಯಲ್ಲಿ ಬೇರೊಂದು ರೂಪದಲ್ಲಿ ಇದ್ದೇ ಇದ್ದವು ಎನ್ನುವುದನ್ನು ಮರೆಯಲಾಗದು. `ಕವಿರಾಜಮಾರ್ಗ’ವು ಪ್ರಣಾಳಿಕೆ ರೂಪದಲ್ಲಿ  `ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮುಂ ಪರವಿಚಾರಮುಂ’ ಎಂದು ಮುಂದಿಡುತ್ತದೆ; ಹಲವು ಧರ್ಮದವರು ಸೋದರರಂತೆ ಬದುಕಬೇಕೆಂದು ಕಬೀರನಿಂದ ಹಿಡಿದು ಗಾಂಧಿತನಕ ಅನೇಕರು ಹೇಳಿದ್ದಾರೆ; `ಹಿಂದೂಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ `ಹಂ ಬುಲಬುಲೇ ಹೈ ಇಸಕೇ, ಏ ಗುಲಸಿತಾ ಹಮಾರ’ ಎಂದು ಕವಿಗಳು ಹಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ-ನಮ್ಮ ಪರಂಪರೆಯಲ್ಲಿದ್ದ ಮೌಲ್ಯಗಳನ್ನು ಪಶ್ಚಿಮದ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಹಕ್ಕುಪ್ರಜ್ಞೆ ಹಾಗೂ ಧರ್ಮಾತೀತತೆಗಳ ಜತೆ ಕಸಿಗೊಳಿಸಿ ಹೊಸ ಪರಿಕಲ್ಪನೆಗಳನ್ನಾಗಿ ಸೃಷ್ಟಿಸಲಾಯಿತು ಮತ್ತು ಪೀಠಿಕೆಯಲ್ಲಿ ಹಾಕಿ ಅಧಿಕೃತಗೊಳಿಸಲಾಯಿತು. ಇಲ್ಲಿರುವ ಆದರ್ಶಮೌಲ್ಯಗಳು, ಪಾಶ್ಚಿಮಾತ್ಯ ನಾಗರಿಕ ಸಮಾಜದ ಅದಿರನ್ನು ಭಾರತೀಯ ಪರಂಪರೆಯ ಕುಲುಮೆಯಲ್ಲಿ ಕರಗಿಸಿ ಅಚ್ಚುಹಾಕಿದ ನಾಣ್ಯಗಳು; ಗತದ ವಿವೇಕದಿಂದ ಮಾಡಿದ ಭವಿಷ್ಯದ ಹಾದಿಗಳು.  

ಪ್ರಶ್ನೆಯೆಂದರೆ, ಈ ಆಶಯಗಳು ಕಳೆದ ಎಪ್ಪತ್ತು ವರ್ಷಗಳಲ್ಲಿ ಎಷ್ಟರಮಟ್ಟಿಗೆ ನೆರವೇರಿದವು? ಇಲ್ಲವಾದರೆ ಇಂಥ ಉದ್ಘೋಷಣೆಯ ಪ್ರಸ್ತುತತೆ ಏನು? ದಿಟ, ಇಲ್ಲಿರುವ ಆಶಯಗಳು ಪೂರ್ಣ ಸಾಕಾರಗೊಂಡಿಲ್ಲ. ಧರ್ಮಾತೀತ ಗುಣವು ಕಳೆದ ಮೂರು ದಶಕಗಳಲ್ಲಿ ಹಿಂದೆಂದೂ ಇಲ್ಲದಷ್ಟು ಜಖಂಗೊಂಡಿದೆ; ಮಹಿಳೆಯರು, ದಲಿತರು, ಬುಡಕಟ್ಟಿನವರು, ಅಲೆಮಾರಿಗಳು, ಧಾರ್ಮಿಕ ಅಲ್ಪಸಂಖ್ಯಾತರು ಅಸಮಾನತೆ-ಶಂಕೆ-ಅಪಮಾನಗಳಿಂದ ಬಿಡುಗಡೆಯಾಗಿಲ್ಲ; ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಒಪ್ಪಿಕೊಂಡ ಬಳಿಕ ಸಂಪತ್ತೆಂಬುದು ಕೆಲವೇ ಉದ್ಯಮಿಗಳ ಕೈವಶವಾಗುತ್ತಿದೆ; ಧರ್ಮಗಳು ತಮ್ಮ ವಿಕಾರಗಳನ್ನು ಉತ್ಪತ್ತಿ ಮಾಡಿ ಬೀದಿಗಿಳಿಸಿವೆ; ದೇಶದ ನಾಲ್ಕನೇ ಸ್ಥಂಭವೆನಿಸಿದ ಮಾಧ್ಯಮಗಳು ಬಿಕರಿಗೊಂಡಿವೆ; ಅಭಿವ್ಯಕ್ತಿ ಸ್ವಾತಂತ್ರ್ಯ ಅರೆಜೀವವಾಗಿದೆ; ಕುವೆಂಪು ಹೇಳುವ ನಿರಂಕುಶಮತಿತ್ವವು ಧರ್ಮದ್ರೋಹ ದೇಶದ್ರೋಹವಾಗಿ, ಚಿಂತಕರ ಹತ್ಯೆಯಾಗುತ್ತಿದೆ; ಸಂವಿಧಾನದ ಹೆಸರಲ್ಲಿ ಅಧಿಕಾರ ಸ್ವೀಕರಿಸಿದವರೇ ಪೀಠಿಕೆಯ ಆಶಯಕ್ಕೆ ಸಲ್ಲದಂತೆ ಮಾತಾಡುತ್ತಿದ್ದಾರೆ, ವರ್ತಿಸುತ್ತಿದ್ದಾರೆ. ನಾವು ಒಂದು ದೇಶವಾಗಿ ಸಮಾಜವಾಗಿ ಮೌಲ್ಯಾದರ್ಶಗಳ ದೃಷ್ಟಿಯಿಂದ ವಿರುದ್ಧ ಹಾದಿಯಲ್ಲಿದ್ದೇವೆ ಎಂದೇ ಅನಿಸುತ್ತದೆ.
ಆದರೆ ಈ ಪೀಠಿಕೆಯ ಚೌಕಟ್ಟಿನಲ್ಲಿ ಅನೇಕ ಇಕ್ಕಟ್ಟುಗಳಲ್ಲೂ ನಾವು ಕಳೆದ ಮುಕ್ಕಾಲು ಶತಮಾನದಲ್ಲಿ ಸ್ವಾತಂತ್ರ್ಯ ನ್ಯಾಯ ಸಮಾನತೆಗಳನ್ನು ಅರೆಬರೆಯಾಗಿಯಾದರೂ ಅನುಭವಿಸಿರುವುದು ಸುಳ್ಳಲ್ಲ. ಯಾವುದೇ ಮೌಲ್ಯಾದರ್ಶಗಳು ತಾವು ಬದುಕುವ ಸಾಮಾಜಿಕ ಚಾರಿತ್ರಿಕ ಸನ್ನಿವೇಶದಲ್ಲಿ ಅರ್ಥವನ್ನು ಪಡೆಯುತ್ತವೆ. ಅವನ್ನು ಬರೆದು ಇರಿಸಿಕೊಳ್ಳುವುದು ದೊಡ್ಡ ವಿಚಾರವಲ್ಲ.  ಬದುಕುವುದು ಮುಖ್ಯ. ಈ ಅರ್ಥದಲ್ಲಿ ಸಂವಿಧಾನದ ಆದರ್ಶಗಳು ಇನ್ನೂ ಪೂರ್ಣವಾಗಿ ನಿಜಗೊಂಡಿಲ್ಲ. ಆದರ್ಶಗಳು ಇರುವುದು ಪೂರ್ಣಗೊಳಿಸಲು ಅಲ್ಲ. ಆ ದಿಸೆಯತ್ತ ನಿರಂತರ ಚಲಿಸಲು; ಚಲಿಸುತ್ತ ಆಗುವ ತಪ್ಪುಒಪ್ಪುಗಳಿಂದ ಪಾಠಕಲಿಯಲು. ಅವು ಸಾಕಾರಗೊಳ್ಳಲು ಶತಮಾನಗಳೇ ಬೇಕಾಗಬಹುದು. ಅದಕ್ಕಾಗಿ ಪ್ರಭುತ್ವವೂ ಸಮಾಜವೂ ಪ್ರಾಮಾಣಿಕವಾಗಿ ಸತತವಾಗಿ ಯತ್ನಿಸುತ್ತಲೇ ಇರಬೇಕು.

ಸಮಸ್ಯೆಯೆಂದರೆ, ಈ ಯತ್ನದ ಹಾದಿಯಲ್ಲಿರುವಾಗಲೇ, ಪ್ರಭುತ್ವಗಳು ಸಂವಿಧಾನದ ಆಶಯಗಳ ವಿರುದ್ಧವಾಗಿ ಹೊರಳಿಕೊಳ್ಳುತ್ತಿರುವುದು; ಸಂವಿಧಾನದ ಪೀಠಿಕೆಯಲ್ಲಿರುವ ಕೆಲವು ಪರಿಕಲ್ಪನೆಗಳು ನಮ್ಮ ಪರಂಪರೆಗೆ ಬಾಹಿರವೆಂದೂ ಅವನ್ನು ಕಿತ್ತುಹಾಕಬೇಕೆಂದೂ ಹೇಳುತ್ತಿರುವುದು. ಮತಧsರ್ಮಾಧಾರಿತ ರಾಷ್ಟ್ರಕ್ಕೆ ಬೇಕಾಗುವಂತೆ ಸಂವಿಧಾನವನ್ನು ಪುನರಾರೂಪಿಸಬೇಕು ಎಂದು ಹವಣಿಸುತ್ತಿರುವುದು. ಈ ದಿಸೆಯಲ್ಲಿ ಪೌರತ್ವ ಕುರಿತ ಹೊಸ ಕಾನೂನುಗಳು ಒಂದು ಹೆಜ್ಜೆಯಂತೆ ಕಾಣುತ್ತಿವೆ. ಇವು ಸಂವಿಧಾನದ ತಿರುಳನ್ನು  ತರ್ಕದ ಇನ್ನೊಂದು ತುದಿಗೆ ಒಯ್ಯಲು ನಿರ್ಧರಿಸಿವೆ. ಸುಪ್ರೀಂಕೋರ್ಟು ಕೇಶವಾನಂದ ಪ್ರಕರಣದಲ್ಲಿ (1973) ಯಾವುದೇ ಸಂವಿಧಾನದ ಅನುಚ್ಛೇದಗಳ ವಿಷಯದಲ್ಲಿ ಭಿನ್ನಮತ ಬಂದರೆ, ಅವನ್ನು ಪೀಠಿಕಾ ನುಡಿಗಳ ಆಧಾರದಲ್ಲಿ ಬಗೆಹರಿಸಿಕೊಳ್ಳಬೇಕೆಂದು ತೀರ್ಪಿತ್ತಿದೆ. ಹೀಗಾಗಿ ಈ ಪೀಠಿಕೆಯ ಈ ಮಾತುಗಳು ನೆನಪಾಗುತ್ತಿವೆ- ಹಾದಿತಪ್ಪಿದಾಗ ಕೈಮರ ನೆನಪಾಗುವಂತೆ; ಕಣ್ಣು ಮಂಜಾದಾಗ ಕನ್ನಡಕ ನೆನಪಾಗುವಂತೆ; ನಾವೆಯೊಂದು ಅಲೆಗಳಲ್ಲಿ ಬಿದ್ದು ಹೊಯ್ದಾಡುವಾಗ ಕಾಣುವ ದೂರದ ದೀಪಸ್ಥಂಭದಂತೆ.

ಪ್ರೊ.ರಹಮತ್ ತರೀಕೆರೆ, ಸಂಶೋಧಕರು

Leave a Reply