ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ಕುರಿತಂತೆ ಕೆಲ ಕಾಲ ಗೊಂದಲ ಸೃಷ್ಟಿಯಾಗಿ ನೋಂದಣಿ ಯೋಜನೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ವರ್ಗಾವಣೆಯಲ್ಲಿ ತಾಂತ್ರಿಕ ತೊಡಕು ಕಾಣಿಸಿಕೊಂಡ ಪರಿಣಾಮ ಹೊಸ ನೊಂದಣಿ ಸ್ಥಗಿತಗೊಂಡಿದೆ ಎಂಬ ಸಂದೇಶ ಹೊರಬಿದ್ದತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅದನ್ನು ಅಳಿಸಿ ಹಾಕಲಾಯಿತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ನೋಂದಣಿ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೃಹಲಕ್ಷ್ಮಿ ಯೋಜನೆ ಸ್ಥಗಿತ ಎಂಬ ಮಾಹಿತಿ ಪ್ರಕಟವಾದ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಕೆಲವರ ಅಚಾತುರ್ಯದಿಂದ ಈ ರೀತಿ ಆಗಿದ್ದು, ಇದು ನಿರಂತರವಾಗಿ ನಡೆಯುವ ಯೋಜನೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡಿದವರಿಗೆ ನೋಟೀಸ್ ಜಾರಿ ಮಾಡುತ್ತೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಈ ಕುರಿತು ಇಲಾಖೆಯ ಕಾರ್ಯದರ್ಶಿ, ನಿರ್ದೇಶಕರೊಂದಿಗೆ ಸಭೆ ನಡೆಸಿದ್ದು, ಸಂಬಂಧಿಸಿದವರ ಮೇಲೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಇದುವರೆಗೂ ಸುಮಾರು 63 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಯೋಜನೆಯ ಒಟ್ಟು 1.28 ಕೋಟಿ ಫಲಾನುಭವಿಗಳ ಪೈಕಿ 1.12 ಕೋಟಿ ಫಲಾನುಭವಿಗಳು ಇದುವರೆಗೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 63 ಲಕ್ಷ ಮಹಿಳೆಯರಿಗೆ ಇದುವರೆಗೂ ಹಣ ಸಂದಾಯವಾಗಿದೆ ಎಂದರು.
ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಬ್ಯಾಂಕ್‌ಗಳಲ್ಲಿ ಹಣ ಸಂದಾಯವಾಗುವುದು ತಡವಾಗಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗಲಿದೆ ಎಂದು ತಿಳಿಸಿದರು.




