ಬೆಂಗಳೂರು: ಕಂದಾಯ ಇಲಾಖೆಯ ಎಲ್ಲಾ ಸೇವೆಗಳೂ ಒಂದೇ ಕಡೆ ಲಭ್ಯವಾಗುವ, ಆ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಕಂದಾಯ ಆಯುಕ್ತಾಲಯವನ್ನು ರಚಿಸಲಾಯಿತು. ಆಯುಕ್ತರಾಗಿ ಸುನೀಲ್ ಕುಮಾರ್ ಅವರು ಅತ್ಯುತ್ತಮವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಭರವಸೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕಂದಾಯ ಆಯುಕ್ತಾಲಯದ ಆಯುಕ್ತರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, “ಸರ್ಕಾರದ ಬೊಕ್ಕಸಕ್ಕೆ ನಷ್ಟವಿಲ್ಲದಂತೆ ಹೊಸ ಹುದ್ದೆಗಳನ್ನು ಸೃಷ್ಟಿಸದೆ, ಈಗಾಗಲೇ ಇದ್ದಂತಹ ಹುದ್ದೆಗಳನ್ನು ಒಟ್ಟುಗೂಡಿಸಿ ಕಂದಾಯ ಆಯುಕ್ತಾಲಯವನ್ನು ರಚಿಸಲಾಗಿದೆ. ಹೀಗಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸರ್ಕಾರದ ನೀತಿ ನಿರ್ಧಾರಗಳನ್ನು ಆಯುಕ್ತಾಲಯ ಸಂಪೂರ್ಣ ಕಾರ್ಯದಕ್ಷತೆಯಿಂದ ಅನುಷ್ಠಾನಗೊಳಿಸಬೇಕು. ಜನಪರ ಮನಸ್ಥಿತಿಯೊಂದಿಗೆ ಸೇವೆ ಸಲ್ಲಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಕಂದಾಯ ಆಯುಕ್ತಾಲಯದ ಎಲ್ಲಾ ನೌಕರರೂ ಭಾಗವಹಿಸಿದ್ದರು.




