ಬೆಂಗಳೂರು: ಚಂದ್ರಯಾನ ಯಶಸ್ವಿ ಪ್ರಯೋಗ ನಡೆಸಿರುವ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ ವೇಳೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಯಾರಾದರೂ ಪ್ರಭಾವಿಗಳು ಅವರನ್ನು ಸ್ವಾಗತಿಸಬೇಕು. ಆದರೆ ಈ ಬಾರಿ ಇಂತಹ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಪ್ರಧಾನಿ ಆಗಮಿಸಿದ ವೇಳೆ ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿ ಅವರನ್ನು ಸ್ವಾಗತಿಸಿಲ್ಲ ಎಂದು ಬಿಜೆಪಿ ನಾಯಕರು ಆಧಾರರಹಿತವಾಗಿ ಆಪಾದಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿರುವ ನಾಯಕರು ಪ್ರಧಾನಿ ಅವರನ್ನು ಸ್ವಾಗತಿಸುವ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮನದ ವೇಳೆ ಅವರನ್ನು ಸ್ವಾಗತಿಸಲು ಅಥವಾ ಭೇಟಿ ಮಾಡಲು ಮುಖ್ಯಮಂತ್ರಿಯಾದಿಯಾಗಿ ಯಾರೂ ಬರಬಾರದು ಎಂದು ಪ್ರಧಾನಮಂತ್ರಿ ಕಚೇರಿಯಿಂದಲೇ ಅಧಿಕೃತವಾದ ಅಧಿಸೂಚನೆ ಇತ್ತು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೇರೆ ರಾಜ್ಯದವರಂತಲ್ಲ. ಪ್ರಧಾನಮಂತ್ರಿ ವೈಯಕ್ತಿಕ ವಿಚಾರ ಅಲ್ಲ, ಅವರು ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವವರು. ಅವರಿಗೆ ಶಿಷ್ಟಾಚಾರದ ಪ್ರಕಾರ ಹೇಗೆ ಗೌರವಿಸಬೇಕೆಂಬುದು ನಮಗೆ ಬಿಜೆಪಿಯವರಿಗಿಂತ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.
ರಾಜಕೀಯ ಪ್ರಜ್ಞೆ, ಶಿಷ್ಟಾಚಾರ, ಸಮಯಪ್ರಜ್ಞೆಗಳ ಬಗ್ಗೆ ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಿಲ್ಲ. ಮಾಜಿ ಸಚಿವ ಆರ್.ಅಶೋಕ್ ಅವರ ಹೇಳಿಕೆಗಳು ಅವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತವೆ ಎಂದು ತಿರುಗೇಟು ನೀಡಿದರು.
ನಮ್ಮ ಸರ್ಕಾರ ರಚನೆಯಾದ ಬಳಿಕ ಪ್ರಧಾನಮಂತ್ರಿಯವರು ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆ ಐತಿಹಾಸಿಕವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಆಗಮನದ ವೇಳೆ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿಯವರು ಸಿದ್ಧವಾಗಿದ್ದರು. ಆದರೆ ಪ್ರಧಾನಮಂತ್ರಿಯವರ ಕಚೇರಿಯಿಂದ ಅನಧಿಕೃತವಾಗಿ ಸಂದೇಶ ರವಾನೆಯಾಗಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಯಾರೂ ಕೂಡ ಪ್ರಧಾನಿಯವರನ್ನು ಬರಮಾಡಿಕೊಳ್ಳಲು ವಿಮಾನನಿಲ್ದಾಣಕ್ಕೆ ಬರುವುದು ಬೇಡ ಎಂದು ಸೂಚನೆ ನೀಡಲಾಗಿತ್ತು ಎಂದು ಹೇಳಿದರು.
ಈ ಬಗ್ಗೆ ಅಧಿಕೃತವಾದ ಲಿಖಿತ ಮಾಹಿತಿ ನೀಡುವಂತೆ ನಾವು ಮನವಿ ಮಾಡಿದ್ದೆವು. ಅವರು ರಾಜ್ಯಪಾಲರ ಮುಖಾಂತರ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತವಾಗಿಯೇ ಯಾರೂ ಬರುವುದು ಬೇಡ ಎಂಬ ಸೂಚನೆ ನೀಡಿ ಸಂದೇಶ ಕಳುಹಿಸಿದ್ದಾರೆ. ಈ ಕುರಿತ ಅಧಿಕೃತ ಮಾಹಿತಿ ತಮ್ಮ ಬಳಿ ಇದೆ ಎಂದು ಸ್ಪಷ್ಟಪಡಿಸಿದರು.



