ಮನೋಚರಿತ್ರ: ಅಂತರಂಗದ ನಡಾವಳಿ

3 years ago

#Psychobiography #Inner #Process #yogeshmaster

ನಿನಗೇನಾಗಿದೆ? ನೀನು ಯಾಕೆ ಹೀಗಾಡುತ್ತಿದ್ದೀಯಾ? ಎಂದು ಕೇಳಿದಾಗ ಬಹಳಷ್ಟು ಜನರಿಗೆ ತಮಗೆ ಏನಾಗಿದೆ? ತಾವೇಕೆ ಹೀಗಾಡುತ್ತಿದ್ದೇವೆ ಎಂಬುದರ ಬಗ್ಗೆ ವಿವರಿಸಲು ಸರಿಯಾದ ಪದಗಳು ಅವರಿಗೆ ಸಿಗುವುದಿಲ್ಲ. ಏಕೆಂದರೆ ಅವರ ಪದ ಸಂಪತ್ತು ಅವರ ಭಾವನೆಗಳನ್ನು ವ್ಯಕ್ತಪಡಿಸಲು ಸಾಕಾಗುವಷ್ಟು ಅವರಿಗೆ ಇರುವುದಿಲ್ಲ.

ಮರೆಯಲೇ ಬಾರದ ಒಂದು ವಿಷಯವೆಂದರೆ, ಜಾಗೃತ ಚೇತನದ ಮನಸ್ಸು ಅರಿವನ್ನು ಗ್ರಹಿಸುವ ಪ್ರಕ್ರಿಯೆಗೂ, ಸುಪ್ತ ಚೇತನದ ಮನಸ್ಸು ಗ್ರಹಿಸುವ ಪ್ರಕ್ರಿಯೆಗೂ ವ್ಯತ್ಯಾಸವಿದೆ. ಹಾಗೂ ಅವರೆರಡೂ ಸ್ವತಂತ್ರವಾಗಿಯೂ ಕೆಲಸ ಮಾಡುತ್ತವೆ.

ಉದಾಹರಣೆಗೆ; ನೀವು ಇಷ್ಟಪಟ್ಟು ತೊಟ್ಟ ಬಟ್ಟೆಯನ್ನು ಚೆನ್ನಾಗಿಲ್ಲವೆಂದು ಯಾರಾದರೂ ಕಮೆಂಟ್ ಮಾಡಿದರು ಎಂದಿಟ್ಟುಕೊಳ್ಳಿ. ಹೊರಗೆ “ನೀವು ನೋ ಪ್ರಾಬ್ಲಮ್, ನನಗಿಷ್ಟ ಆಯಿತು” ಎಂದೋ, “ಅವರ್ಯಾರೋ ಕೊಡಿಸಿದರು. ನಾನು ಹಾಕಿಕೊಂಡೆ” ಎಂದೋ, “ಹೌದಾ, ಇನ್ನೊಂದು ಸಲ ಹಾಕಿಕೊಳ್ಳಲ್ಲ” ಎಂದೋ ಹೇಳಿ ಸುಮ್ಮನಾಗುತ್ತೀರಿ ಅಂತಿಟ್ಟುಕೊಳ್ಳಿ; ಸುಪ್ತ ಚೇತನದ ಮನಸ್ಸು ಮಾತ್ರ ಹಾಗಲ್ಲ, ಜಾಗೃತಿ ಚೇತನವು ಈ ವಿಷಯವನ್ನು ನಿರ್ವಹಿಸುವಾಗಲೇ ಅದೂ ಕೂಡಾ ಆ ವಿಷಯವನ್ನು ನಿರ್ವಹಿಸುತ್ತಿರುತ್ತದೆ. ಬಹುಶಃ ನಿರಾಶೆಯನ್ನು ಹೊಂದುವುದು, ಅವರ ಬಗ್ಗೆ ಕೋಪವನ್ನು ಹೊಂದುವುದು, ಇನ್ನೊಮ್ಮೆ ಅವರಿಗೆ ಹೇಗೆ ಪ್ರತಿಕ್ರಿಯೆ ಕೊಡಬೇಕೆಂದು ಆಲೋಚಿಸುವುದು, ತನ್ನ ಪ್ರಶಂಸಿಸಲಾಗದ ಅವರ ಬಗ್ಗೆ ಸೇಡಿನ ಭಾವವನ್ನು ಹೊಂದಬಹುದು. ಅದು ಕೇಡಿಯ ಕಡತಗಳಾಗಿ ಪೇರಿಸಲ್ಪಡಬಹುದು. ಅವೇನೇ ಆಗಿರಲಿ, ಅವು ಭಾವನೆಗಳ ಆಧಾರದಲ್ಲಿ ಆಗುವುದರಿಂದ ತಾರ್ಕಿಕವಾಗಿ ಪದಗಳಿಂದ ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗದೇ ಹೋಗಬಹುದು.

ಮನುಷ್ಯನ ಸುತ್ತಮುತ್ತಲಿನ ಆಗುಹೋಗುಗಳಲ್ಲಿ ಪ್ರಚೋದನೆ ಮತ್ತು ಪ್ರತಿಕ್ರಿಯೆ ಇದ್ದೇ ಇರುತ್ತದೆ. ನೀವು ಜನರ ಸಹವಾಸವೇ ಬೇಡ ಅಂತ ಬೆಟ್ಟದ ತುದಿಯಲ್ಲಿ ಹೋಗಿ ಕುಳಿತಿರುತ್ತೀರಿ. ಅಲ್ಲಿ ಫೇಸ್ಬುಕ್ಕಿನಲ್ಲಿ ನಿಮ್ಮ ಕಮೆಂಟಿಗೆ ಇನ್ಯಾರೋ ಪ್ರತಿಕ್ರಿಯೆ ನೀಡುವರು. ಅದು ನಿಮಗೆ ಪ್ರಚೋದನೆ ನೀಡಿತು. ಥೋ, ಈ ನನ್ಮಕ್ಕಳಿಗೆ ಹೇಳಿ ಪ್ರಯೋಜನವಿಲ್ಲ ಎಂದು ಸುಮ್ಮನಾಗುತ್ತೀರಿ. ಅದು ಜಾಗೃತಿ ಚೇತನದ ಕೆಲಸ. ಆದರೆ ಅದರಿಂದ ಬೇಸರವೋ, ಜಿಗುಪ್ಸೆಯೋ, ಕೋಪವೋ; ಎಂತದ್ದೋ ಒಂದು ಆಯಿತಲ್ಲಾ, ಅದು ಭಾವನೆಯನ್ನು ಉಂಟು ಮಾಡುತ್ತದೆ. ಆ ಭಾವ ತರಂಗಗಳು ನಿಮ್ಮ ಸುಪ್ತಚೇತನದ ಮೇಲೆ ಪ್ರಭಾವವನ್ನು ಬೀರುತ್ತದೆ. ಕಡತಗಳಲ್ಲಿ ಸೇರುತ್ತವೆ.

ಯಾರ್ಯಾರು ಹೆಚ್ಚುಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಂಡಿರುತ್ತಾರೋ, ಪ್ರಚೋದನೆ ಮತ್ತು ಪ್ರತಿಕ್ರಿಯೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುತ್ತಾರೋ ಅವರಿಗೆ ಗಂಭೀರವಾದ ಮಾನಸಿಕ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.

ಒಟ್ಟಾರೆ ಹೊರಗಿನ ಮನಸ್ಸು ಅಂದರೆ ಜಾಗೃತಿ ಚೇತನ ಯಾವುದೇ ಹೊರಗಿನ ಪ್ರಚೋದನೆ – ಪ್ರತಿಕ್ರಿಯೆಗಳ ಬಗ್ಗೆ ಗಮನ ಕೊಡದೇ ಇರಲು ಯತ್ನಿಸಿದರೂ, ಅವುಗಳು ನೇರವಾಗಿ ಸುಪ್ತಚೇತನದೊಂದಿಗೆ ಸಂಪರ್ಕ ಸಾಧಿಸದೇ ಇರಲಾರದು. ಆ ಅಂತರಂಗವು ಪ್ರಚೋದನೆಗೆ ಪ್ರತಿಕ್ರಿಯೆ ಕೊಟ್ಟೇ ಕೊಡುತ್ತವೆ.

ಜಾಗೃತ ಮನಸ್ಸಿಗೆ ಹೋಲಿಸಿದರೆ ಸುಪ್ತಚೇತನವು ಬಹಳ ದೊಡ್ಡದು ಮತ್ತು ನಾವು ಕಲ್ಪಿಸಿಕೊಳ್ಳುವುದಕ್ಕಿಂದ ಮಿಗಿಲಾಗಿರುವ ಅತೀ ದೊಡ್ಡ ಉಗ್ರಾಣ.

ಜಾಗೃತಿಚೇತನಕ್ಕೆ ಬಹಳಷ್ಟು ಮಿತಿಗಳಿವೆ. ಏಕೆಂದರೆ ಇದನ್ನು ಮನುಷ್ಯನೇ ಬುದ್ಧಿ ಪೂರ್ವಕವಾಗಿ ಅಭಿವೃದ್ಧಿಗೊಳಿಸಿರುವುದು. ಆದರೆ ಸುಪ್ತಚೇತನ ಇದೆಯಲ್ಲಾ, ಅದರ ಬೆಳವಣಿಗೆ ಅವನ ಹೊರಗಿನ ಅರಿವಿಗೆ ಸುಲಭವಾಗಿ ಎಟುಕದಿರದ್ದು. ಹಾಗಾಗಿ ಅದು ಎಷ್ಟು ಬೆಳೆದಿದೆ, ಯಾವ ಮಟ್ಟದಲ್ಲಿದೆ, ಅದರ ಸ್ವರೂಪವೀಗ ಹೇಗಿದೆ ಎಂಬ ವಿಷಯಗಳನ್ನೆಲ್ಲಾ ನಮ್ಮ ಜಾಗೃತ ಅರಿವಿಗೆ ಎಟುಕಿಸಿಕೊಳ್ಳಲಾಗದ್ದು.

ಜಗತ್ತಿನ ಎಲ್ಲಾ ವಿದ್ಯಮಾನಗಳಲ್ಲಿ ನೀವು ಕ್ರಿಯಾತ್ಮಕವಾಗಿ ಭಾಗವಹಿಸದೆ, ಬರಿದೇ ಜಡ ಪ್ರೇಕ್ಷಕನಾಗಿದ್ದರೂ ಕೂಡಾ ಸುಪ್ತಚೇತನದ ಕಡತಗಳಲ್ಲಿ ಏನು ಸೇರುತ್ತಿರಬೇಕೋ ಅದು ಸೇರುತ್ತಿರುತ್ತದೆ ಮತ್ತು ಅದರ ಪ್ರಭಾವವೂ ಕೂಡಾ ತನ್ನದೇ ಆದಂತಹ ರೀತಿಯಲ್ಲಿ ಆಗುತ್ತಿರುತ್ತದೆ.

ಜಾಗೃತ ಮನಸ್ಸು ಯಾವುದನ್ನಾದರೂ ಅಭಿವ್ಯಕ್ತಿಸಿದರೆ, ಅಥವಾ ಚಟುವಟಿಕೆಯಲ್ಲಿ ತೊಡಗಿದರೆ, ಸುಪ್ತಚೇತನವು ತನ್ನಲ್ಲಿರುವ ಕಡತಗಳ ಆಧಾರದಿಂದ ರೂಪಿಸಿರುವ ನಡಾವಳಿಯ ನಿರ್ದೇಶನಗಳನ್ನೇ ಅದು ಅನುಸರಿಸುತ್ತದೆ. ಮನುಷ್ಯನ ಸಂವೇದನೆಯ ಸೂಕ್ಷ್ಮತೆಗಳನ್ನೆಲ್ಲಾ ನಡವಳಿಕೆಗಳ ರೂಪದಲ್ಲಿ ವ್ಯಕ್ತಪಡಿಸುವ ಪ್ರಕ್ರಿಯೆಯ ಘಟಕವೇ ಸುಪ್ತಚೇತನ. ಅಂದರೆ ಅಂತರಂಗದ ನಡಾವಳಿಯನ್ನು ರೂಪಿಸುವುದು ಸುಪ್ತದ ಕೆಲಸವಾದರೆ, ಹೊರಗೆಡವುವುದು ಜಾಗೃತಿಯ ಕೆಲಸ.

ಇದರ ಅರ್ಥ ಜಾಗೃತಿಚೇತನವು ಪ್ರಜ್ಞಾಹೀನವಾಗಿ ಅಥವಾ ಅತಾರ್ಕಿಕವಾಗಿ ಸುಪ್ತಚೇತನ ಹೇಳುವುದನ್ನೆಲ್ಲಾ ಮಾಡುತ್ತಿರುತ್ತದೆ ಎಂದಲ್ಲ. ಆದರೆ, ಜಾಗೃತಿಯು ತನ್ನ ನಿರ್ಣಯಗಳನ್ನು ಕೈಗೊಳ್ಳುವಾಗ ಸುಪ್ತವನ್ನು ಆಧರಿಸುತ್ತದೆ, ಅದು ಕೊಡುವ ಮಾಹಿತಿಗಳನ್ನು ಅವಲಂಬಿಸುತ್ತದೆ.

ಯಾರೋ ಒಬ್ಬ ಫೇಸ್ಬುಕ್ಕಿನಲ್ಲಿ ‘ತನ್ನ ಅನುಭವ’ ಎಂದು ಯಾವುದಾದರೊಂದನ್ನು ಹಾಕಿದಾಗ, ಇತರರು ಓದುವಾಗ ಇದು ನಿಜ ಎಂದು ಭಾವನಾತ್ಮಕವಾಗಿ ಓದುವುದು, ಇದು ಸುಳ್ಳು ಎಂದು ವಿಮರ್ಶೆ ಮಾಡುವುದು, ಇಲ್ಲಿ ಉತ್ಪ್ರೇಕ್ಷೆಯ ಅಂಶಗಳಿವೆ ಎಂದು ಗುರುತಿಸುವುದು, ಇದನ್ನು ಒಪ್ಪಬಾರದು ಎನ್ನುವುದು, ಇದು ಅನಗತ್ಯ ಎಂದು ಅದರ ವಿರುದ್ಧವಾಗಿ ಕಾರುವುದು; ಹೀಗೆ ಯಾವುದನ್ನೇ ಮಾಡಿದರೂ ಆಯಾ ವ್ಯಕ್ತಿಯ ಸುಪ್ತಚೇತನದಲ್ಲಿರುವ ಪ್ರೊಸೆಸ್ಸಿಂಗ್ ಸೆನ್ಸರಿ ಮಾಹಿತಿಗಳನ್ನೇ ಆಧರಿಸಿರುತ್ತದೆ. ಒಂದು ವೇಳೆ ಓದುವುದರಲ್ಲಿ ಗೊಂದಲವಾದರೆ ಜಾಗೃತಚೇತನ ಜಾಗೃತವಾಗಿ ತನ್ನ ತರ್ಕ, ವಿಚಾರ, ಗಮನ, ಅಧ್ಯಯನ, ಸಂಶೋಧನೆ; ಎಲ್ಲವನ್ನೂ ಪ್ರಾರಂಭಿಸುತ್ತದೆ. ಅವನ್ನು ಮಾಡಲೂ ಈ ಸುಪ್ತಚೇತನವು ಪ್ರಕ್ರಿಯೆಗೊಳಪಡಿಸಬೇಕು. ಒಟ್ಟಾರೆ ಗ್ರಹಿಕೆ ಮತ್ತು ಗಮನವನ್ನು ಸರಳವಾಗಿ ತೆರೆದುಕೊಳ್ಳಲು ಸಾಧ್ಯವಾಗುವಂತೆಯೇ, ಸಲಿಲವಾಗಿ ಅಂದರೆ ಫ್ಲೆಕ್ಸಿಬಲ್ ಆಗಿ ಇರುವಂತೆಯೇ ಪ್ರಾಥಮಿಕ ರೂಢಿ ಸುಪ್ತಚೇತನಕ್ಕಾಗಿದ್ದರೆ ಅಂತರಂಗದ ನಡಾವಳಿಯೇ ಹಾಗಿರುತ್ತದೆ.

ಯಾವಾಗಲೂ ಪಂಥಗಳ, ಸಿದ್ಧಾಂತಗಳ ಮತ್ತು ವಿಚಾರಗಳ ನಡುವೆ ಸಂಘರ್ಷವಾಗುವುದಲ್ಲ. ಅವನ್ನು ಒಪ್ಪಬಹುದು, ಬಿಡಬಹುದು, ಸಮ್ಮತಿಸಬಹುದು, ಸಮ್ಮತಿಸದಿರಬಹುದು, ಕೆಲವು ಅಂಶಗಳನ್ನು ನಿರಾಕರಿಸಿ, ಕೆಲವು ಅಂಶಗಳನ್ನು ಒಪ್ಪಬಹುದು, ಹೀಗೆ ಮಾಡುವ ಬದಲು ಹೀಗೇಕೆ ಮಾಡಬಾರದು ಎಂದು ಕೇಳಬಹುದು. ಯಾವುದಕ್ಕೂ ಬರಲಿಲ್ಲವೆಂದರೆ, ಪರಸ್ಪರ ಅಂತರವನ್ನು ಕಾದುಕೊಂಡು ಸುಮ್ಮನಾಗಬಹುದು. ಆದರೆ ನಿಂದನೆ, ಘರ್ಷಣೆ, ದೂಷಣೆಗಳಿಂದ ಸಂಘರ್ಷವೇಕಾಗುತ್ತದೆ?

ಜಡ್ಡುಗಟ್ಟಿದ, ಕಿಲುಬುಗಟ್ಟಿದ, ಜಡತನಕ್ಕೆ ಜೋತುಬಿದ್ದಿರುವ ಮನಸ್ಥಿತಿಗಳ ನಡುವೆಯೇ ಘರ್ಷಣೆಯುಂಟಾಗುವುದು. ಅಂತರಂಗದ ನಡಾವಳಿಗಳನ್ನು ರೂಪಿಸಿಕೊಳ್ಳುವುದರಲ್ಲಿ ಎಚ್ಚೆತ್ತುಕೊಂಡಲ್ಲಿ ಉಳಿದವೆಲ್ಲಾ ತಾವಾಗೇ ಸರಿ ಹೋಗುವವು.

  • ಯೋಗೇಶ್ ಮಾಸ್ಟರ್, ಹಿರಿಯ ರಂಗಕರ್ಮಿ

Leave a Reply