ರೈತರ ಮಾರ್ಗದರ್ಶನಕ್ಕಾಗಿ ಏಕೀಕೃತ ರೈತ ಸಹಾಯವಾಣಿ

3 years ago

#Unified #Farmer #Helpline #Guidance #nchaluvarayaswamy

ಬೆಂಗಳೂರು: ಕೃಷಿ ಇಲಾಖೆಯಲ್ಲಿ ರೈತರ ಮಾಹಿತಿ, ಸಲಹೆ, ಮಾರ್ಗದರ್ಶನಕ್ಕಾಗಿ ಏಕೀಕೃತ ರೈತ ಸಹಾಯವಾಣಿ ಆರಂಭ ಮಾಡಲಾಗಿದ್ದು, ನೂತನ ರೈತ ಸಹಾಯವಾಣಿ 1800-425-3553 ಗೆ ಸಂಪರ್ಕ ಮಾಡಬಹುದು ಎಂದು ಕೃಷಿ ಸಚಿವ ಚಲುರಾಯಸ್ವಾಮಿ ಹೇಳಿದರು.

ರೈತರಿಗೆ ಮಳೆ ಮಾಹಿತಿ, ಕೃಷಿ ಚಟುವಟಿಕೆಗಳ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೃಷಿ ಇಲಾಖೆ ಆಯುಕ್ತಾಲಯದಲ್ಲಿ ಸ್ಥಾಪಿಸಿರುವ ಏಕೀಕೃತ ಸಹಾಯವಾಣಿ ಕರೆ ಕೇಂದ್ರ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕಲ್ಯಾಣಕ್ಕೆ ವಿತರಿಸುವ ಸವಲತ್ತು, ರೈತರ ಸಂಶಯ ಕುರಿತು ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಲು ಸಹಾಯವಾಣಿ ಆರಂಭಿಸಿದ್ದು, ಹಿಂದೆ ಬೇರೆ ಬೇರೆ ಯೋಜನೆಗಳಿಗೆ ನೀಡಿದ್ದ ಸಹಾಯವಾಣಿ ನಂಬರ್ ಸೇರಿಸಿ ಒಂದೇ ನಂಬರ್ ನೀಡಲು ತಿರ್ಮಾನ ಮಾಡಲಾಗಿದೆ ಎಂದರು.

ಮೌಲ್ಯ ವರ್ಧನೆಗೆ ಕ್ರಮ: ಕೃಷಿ ಇಲಾಖೆಯಲ್ಲಿ ರೈತರಿಗೆ ಮಾಹಿತಿ, ತಾಂತ್ರಿಕ ನೆರವಿನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೂ ಗಮನ ಹರಿಸಲಾಗಿದೆ. ಇಂದು ‘ಭೀಮಾ ಪಲ್ಸ್’ಬ್ರಾಂಡಿನ ತೊಗರಿ ಬೇಳೆಯನ್ನು ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮುಂದೆ ಇನ್ನಷ್ಟು ಉತ್ಪನ್ನಗಳ ಮೌಲ್ಯ ವರ್ಧನೆಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಕೃಷಿ ಚಟುವಟಿಕೆಗೆ ಉತ್ತೇಜನ: ಕೃಷಿ ಭಾಗ್ಯ ಯೋಜನೆಯಡಿ 100 ಕೋಟಿ ರೂ. ಕೃಷಿ ನವೋದ್ಯಮ ಯೋಜನೆಯಡಿ 10 ಕೋಟಿ, ಆಧುನಿಕ ಕಟಾವು ಯಂತ್ರಗಳ ಕೇಂದ್ರದ ಸ್ಥಾಪನೆಗೆ 50 ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗಿದೆ. ಅಲ್ಲದೆ 100 ಹೈಟೆಕ್ ಹಾರ್ವೆಸ್ಟರ್ ಹಬ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ಸಿರಿಧಾನ್ಯಗಳಿಗೆ ಪ್ರೋತ್ಸಾಹ: ಸಿರಿಧಾನ್ಯಗಳಿಗೂ ಪ್ರೋತ್ಸಾಹ ನೀಡುವ ರೈತ ಸಿರಿ ಯೋಜನೆ ಮುಂದುವರೆಸಲಾಗಿದೆ. ದೆಹಲಿಯಲ್ಲಿ ಸೆ.9ರಂದು ನಡೆಯುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೋಲಾರ ಮಾರ್ಗರೇಟ್, ಮಂಡ್ಯದ ರಾಣಿ ಚಂದ್ರಶೇಖರ್ ಎಂಬ ರೈತ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Leave a Reply