ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಸಿದ್ಧಾಪುರದ ಅತೀಕ್ ಮಸೀದಿ ಮುಂಭಾಗದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಧ್ವಜಾರೋಹಣ ವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, 1947 ಆಗಸ್ಟ್ 15ರಂದು ಭಾರತವು ಬ್ರಿಟಿಷರ 200 ವರ್ಷಗಳ ಗುಲಾಮಗಿರಿಯಿಂದ ಎಲ್ಲಾ ಜಾತಿ ಮತಗಳ ತ್ಯಾಗ ಬಲಿದಾನ ಮತ್ತು ಹೋರಾಟದಿಂದ ಸ್ವತಂತ್ರವಾಯಿತು. ಇವತ್ತು ನಾವು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ಆದರೆ ಇವತ್ತು ದೇಶವು ಫ್ಯಾಸಿಸ್ಟ್ ಶಕ್ತಿಗಳ ಕೈಗೆ ಸಿಲುಕಿ ಅಂತದ್ದೇ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ ಎಂದರು.

ದೇಶದಲ್ಲಿ ದೇಶವಾಸಿಗಳಿಗೆ ವಾಕ್ ಸ್ವಾತಂತ್ರ್ಯ, ಆಹಾರದ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವಿಲ್ಲದೆ, ಸಾಮಾಜಿಕ ಮತ್ತು ಆರ್ಥಿಕವಾಗಿ ದೇಶ ದಿವಾಳಿಯಾಗಿದೆ. ಈ ಎಲ್ಲಾ ಪರಿಸ್ಥಿತಿಗಳಿಂದ ದೇಶವಾಸಿಗಳು ಭಯ ಮತ್ತು ಹಸಿವಿನಿಂದ ನಲುಗಿ ಹೋಗಿದ್ದಾರೆ. ದೇಶದಲ್ಲಿ ಇಂಥ ಪರಿಸ್ಥಿತಿ ನಿರ್ಮಾಣ ಮಾಡಿರುವ ಫ್ಯಾಸಿಸ್ಟ್ ಮನಸ್ಥಿತಿಯ ಬಿಜೆಪಿ ಮತ್ತು ಸಂಘ ಪರಿವಾರಗಳ ಸಂಕೋಲೆಯಿಂದ ದೇಶವನ್ನು ಬಿಡಿಸಲು ಎಲ್ಲಾ ಜಾತಿ ಮತ್ತು ಮತಗಳು ಒಗ್ಗೂಡಿ ಹೋರಾಟ ಮಾಡುವ ಮೂಲಕ ಫ್ಯಾಸಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಸಿದ್ದಾಪುರ ವಾರ್ಡಿನಲ್ಲಿ 100 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಹಿಡಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಹ ನಡೆಸಲಾಯಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀಲಸಂದ್ರ, ಪಾದರಾಯನಪುರ, ಬಾಪೂಜಿ ನಗರ, ಸಿದ್ದಾಪುರ, ಕೆ ಆರ್ ಮಾರುಕಟ್ಟೆ, ಜೆ ಜೆ ಆರ್ ನಗರ, ಬೇಗೂರು, ರಾಯಪುರಂ, ಕೆಂಗೇರಿ, ನಾಯಂಡಹಳ್ಳಿ, ಯಲಚೇನಹಳ್ಳಿ ಮತ್ತು ಜಯನಗರ ವಾರ್ಡ್ ಗಳಲ್ಲಿ ಸಹ ಅದ್ದೂರಿಯಾಗಿ ಈ ಬಾರಿಯ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿಲಾಯಿತು.





