ಸರ್ಕಾರ ಪೊಲೀಸರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ನಿಮ್ಮೊಂದಿಗೆ ಇದೆ: ಪ್ರಿಯಾಂಕ್ ಖರ್ಗೆ

3 years ago

#Government #always #you #solve #police #problems #PriyankKharge

ಕಲಬುರಗಿ: ಪೊಲೀಸರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕರ್ತವ್ಯ ನಿರ್ವಹಣೆಯಲ್ಲಿ ಕೆಲ ಪೊಲೀಸರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ‌. ಒಂದೆಡೆ ಕರ್ತವ್ಯ, ಮತ್ತೊಂದೆಡೆ ವಿಐಪಿಗಳ ಭದ್ರತೆಯ ನಡುವೆಯೂ ಕೆಲಸ ಮಾಡಬೇಕಾಗುತ್ತದೆ. ಸರ್ಕಾರ ನಿಮ್ಮ ಸಮಸ್ಯೆಗಳ  ಪರಿಹಾರಕ್ಕಾಗಿ ಸದಾ ನಿಮ್ಮೊಂದಿಗೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜನಸ್ನೇಹಿ ಪೊಲೀಸ್ ಅಭಿಯಾನ‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಬುರಗಿ ಪೊಲೀಸ್ ವ್ಯವಸ್ಥೆಯನ್ನು ಜನ ಸ್ನೇಹಿಯಾಗಿಸುವತ್ತ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ “ಜನಸ್ನೇಹಿ ಪೊಲೀಸ್ ಅಭಿಯಾನ” ಜಾರಿಗೊಳಿಸಲಾಗುತ್ತಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಜನಸಾಮಾನ್ಯರು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ತನೆ ಕುರಿತಂತೆ QR ಕೋಡ್ ಮೂಲಕ ದಾಖಲಿಸಬಹುದಾಗಿದೆ ಎಂದು ಹೇಳಿದರು.

ಈ ಕೋಡ್ ಅಳವಡಿಕೆ‌ ಹಿಂದೆ ನಿಮ್ಮ ಕರ್ತವ್ಯ ನಿರ್ವಹಣೆ‌‌ ಕಣ್ಗಾವಲು ಜೊತೆಗೆ ಜನಸಾಮಾನ್ಯರ ಹಿತಾಸಕ್ತಿ ಕೂಡಾ ಉದ್ದೇಶವಿದೆ. QR ಕೋಡ್ ಅನ್ನು ನಗರ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರು ಉಪಯೋಗಿಸುವ ದ್ವಾರಗಳ ಬಳಿ ಲಗತ್ತಿಸಲಾಗುವುದು. ಅಲ್ಲದೇ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಇಲಾಖೆ ವತಿಯಿಂದ ಲಗತ್ತಿಸಲಾಗುವುದು ಎಂದರು.

ಸಮಸ್ಯೆಗಳ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರೊಡನೆ ಜನಸ್ನೇಹಿಯಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಉದ್ದೇಶದಿಂದ “ಜನಸ್ನೇಹಿ ಪೊಲೀಸ್ ಅಭಿಯಾನ ” ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜನಸಾಮಾನ್ಯರೊಂದಿಗೆ ಪೊಲೀಸರು ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ‌ ಸಿಗುತ್ತದೆ. ಜನರ ನಡುವೆ ನಡೆಯುವ ಜಗಳ ಮನಸ್ತಾಪ ಮತ್ತು ಕೋಮುಗಲಭೆಯನ್ನು ತಡೆಯಲು ಗುಪ್ತಚರ ಇಲಾಖೆಗೆ ಇದು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗುವ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು.

ಈಗಾಗಲೇ ಬೆಂಗಳೂರಿನಲ್ಲಿ ಈ ತರಹದ ಕೋಡ್ ಅವಳವಡಿಕೆ ಮಾಡಲಾಗಿದೆ. ರಾಜಧಾನಿಯ ನಂತರ ಇದೇ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗುತ್ತಿದೆ. ಇದಕ್ಕೆ ಕಾರಣೀಕರ್ತರಾದ ಗೃಹ ಸಚಿವ ಡಾ‌ ಜಿ.‌ಪರಮೇಶ್ವರ ಹಾಗೂ ಡಿಜಿ ಅವರಿಗೆ ಧನ್ಯವಾದಗಳು ಎಂದರು.

ಇದೇ ತರಹದ QR ಕೋಡ್ ನ್ನು ನಮ್ಮ ಕಾರ್ಯಾಲಯದಲ್ಲಿ ಕೂಡಾ ಅಳವಡಿಸಲಾಗುತ್ತಿದೆ. ಅಲ್ಲಿ ಜನ ಸಾಮಾನ್ಯರು ನನ್ನ ವಿರುದ್ದವೂ ಕೂಡಾ ದೂರು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಈಶಾನ್ಯ ವಲಯ ಡಿಐಜಿ ಅನುಪಮ್ ಅಗರವಾಲ, ನಗರ ಪೊಲೀಸ್ ಆಯುಕ್ತ ಆರ್. ಚೇತನ, ಎಸ್ ಪಿ ಇಶಾಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರ ಕುಮಾರ ಮೀನಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply