ಕರ್ನಾಟಕ ಲೋಕಸೇವಾ ಆಯೋಗವೆಂಬ ಗೊಬ್ಬರದ ಗುಂಡಿಯ ಕುರಿತು

3 years ago

#Regarding #Manure #pit #called #KarnatakaPublicServiceCommission #kpcc

ಯಾವುದೇ ಒಂದು ಸರ್ಕಾರದ ಪ್ರಮುಖ ಸಾಧನೆ ಹಾಗೂ ಯಶಸ್ವಿ ಕಾರ್ಯಾಚರಣೆಗಳಲ್ಲಿ ಕಾರ್ಯಾಂಗದ ಪಾತ್ರ ಬಹಳ ಮುಖ್ಯವಾದುದು. ಆದರೆ, ಕಳೆದ ಒಂದು ದಶಕದಿಂದ ರಾಜ್ಯ ಸರ್ಕಾರದ ಬೌದ್ಧಿಕ ದಿವಾಳಿತನದಿಂದಾಗಿ ಬಹುತೇಕ ಇಲಾಖೆಯ ಹುದ್ದೆಗಳು ಖಾಲಿ ಬಿದ್ದಿವೆ. ಅಭಿವೃದ್ಧಿ ಚಟುವಟಿಕೆಗಳು ಕಾಲು ಮುರಿದುಕೊಂಡು ನಿಂತಲ್ಲೇ ನಿಂತಿವೆ.

ಜನಪ್ರತಿನಿಧಿಗಳೆಂಬ ಈ ಅಯೋಗ್ಯರ ಬೌದ್ಧಿಕ ಶಕ್ತಿ ಯಾವ ಹಂತ ತಲುಪಿದೆ ಎಂದರೆ, ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಮಾಡಲು ಹೊರಟಿದ್ದಾರೆ. ಈವರೆಗೆ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರನ್ನು ತುಂಬಲು ಸಾಧ್ಯವಾಗಿಲ್ಲ. ಎಲ್ಲರೂ  ಹದಿನೈದರಿಂದ  ಇಪ್ಪತ್ತೈದು ಸಾವಿರ ವೇತನಕ್ಕೆ ಗುತ್ತಿಗೆ ಮೇಲೆ ದುಡಿಯುವ ಕೂಲಿಯಾಳುಗಳಾಗಿದ್ದಾರೆ. ಇಂದು ಪ್ರಥಮ ದರ್ಜೆ ಕಾಲೇಜಿನಲ್ಲಿ  ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ನಿವೃತ್ತನಾದ ವ್ಯಕ್ತಿ ಪಡೆಯುತ್ತಿರುವ ನಿವೃತ್ತಿ ವೇತನ ಅಥವಾ ಪಿಂಚಣಿ ಹಣ 65 ಸಾವಿರದಿಂದ 75 ಸಾವಿರ ಇರುವಾಗ ಯೋಗ್ಯ ಅಭ್ಯರ್ಥಿಗಳಿಗೆ ಸರ್ಕಾರ ಯಾವ ಆಧಾರದ ಮೇಲೆ ಈ ಕನಿಷ್ಠ ವೇತನ ನೀಡುತ್ತಿದೆ?

ಆದರೆ ವಿ.ವಿ.ಗಳಲ್ಲಿ ಬದುಕಿಗೆ ಯಾವುದೇ ಭದ್ರತೆ ಇಲ್ಲದೆ  ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪ್ರಾಧ್ಯಾಪಕನ ವೇತನ ಮುವತ್ತರಿಂದ ನಲವತ್ತು ಸಾವಿರ ದಾಟುತ್ತಿಲ್ಲ. ಈ ಕುರಿತು ಯಾವುದೇ ವಿದ್ವಾಂಸಬೆಂಬ ವಿದೂಷಕ ಧ್ವನಿ ಎತ್ತಲು ಸಿದ್ಧನಿಲ್ಲ. ನಾಯಿಕೊಡೆ ಅಣಬೆಯಂತೆ ಜಿಲ್ಲೆಗೊಂದು ವಿ.ವಿ.ಗಳು ತಲೆ ಎತ್ತಿದ ಕಾರಣ ರಾಜ್ಯದ ಪ್ರಮುಖ ವಿ.ವಿ.ಗಳು ವಿದ್ಯಾರ್ಥಿಗಳ ಕೊರತೆಯಿಂದ ಹಾಗೂ ಆರ್ಥಿಕ ಬವಣೆಯಿಂದ ಬಳಲುತ್ತಿವೆ. ಯಾವ ವಿಭಾಗಗಳಲ್ಲಿಯೂ ನುರಿತ ಪ್ರತಿಭಾವಂತ ಪ್ರಾಧ್ಯಾಪಕರಿಲ್ಲ. ಕರ್ನಾಟಕದಲ್ಲಿ ಉನ್ನತ ಶಿಕ್ಷಣವೆಂಬುದು ತುಕ್ಕು ಹಿಡಿದ ಕಬ್ಬಿಣದಂತಾಗಿದೆ.

ಪ್ರಾಧ್ಯಾಪಕರನ್ನು ಮತ್ತು ಸರ್ಕಾರದ  ಅಧಿಕಾರಿಗಳನ್ನು ನೇಮಕ ಮಾಡುವ ಕರ್ನಾಟಕ ಲೋಕ ಸೇವಾ ಆಯೋಗವೆಂಬುದು ರಾಜ್ಯದ  ಅತ್ಯಂತ ಕೆಟ್ಟ ಸಂಸ್ಥೆಯಾಗಿ  ಮಲದ ಗುಂಡಿಯಂತಾಗಿದೆ. ಯೋಗ್ಯರನ್ನು ಮತ್ತು ಪ್ರತಿಭಾವಂತರನ್ನು ಆಯ್ಕೆ ಮಾಡಬೇಕಾದ ಈ ಸಂಸ್ಥೆಯು ಭ್ರಷ್ಟರು ಮತ್ತು ಜಾತಿವಾದಿಗಳಿಂದ ತುಂಬಿತುಳುಕುತ್ತಿದೆ.  ಆಯೋಗದ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಮೌಖಿಕ ಸಂದರ್ಶನ ಎದುರಿಸಿದ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಎಂಟರಿಂದ ಹತ್ತು ವರ್ಷ ಕಾಯಬೇಕು ಎಂದರೆ, ಅಭ್ಯರ್ಥಿಗಳ ಭವಿಷ್ಯ ಏನಾಗಬೇಕು? ಅವರ ವಯೋಮಿತಿ ಜಾರಿದರೆೆ ಇದಕ್ಕೆ ನೈತಿಕ ಹೊಣೆ ಹೊರುವರು ಯಾರು?

ರಾಜ್ಯದ ಅಭಿವೃದ್ಧಿಯಲ್ಲಿ ಶಿಕ್ಷಣ, ಆರೋಗ್ಯ ಅತ್ಯಂತ ಪ್ರಮುಖ ಪಾತ್ರವಹಿಸುವ ಅಂಶಗಳು. ಆದರೆ, ಈ ಬಗ್ಗೆ ಯಾವುದೇ ರಾಜಕೀಯ ನಾಯಕರಿಗೆ ಕಾಳಜಿಯಿಲ್ಲ. ಈ ವರ್ಷ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ 1900 ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಕಳೆದ ವಾರ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡದಲ್ಲಿ ಹೇಳಿದಾಗ ಆ ಕ್ಷಣಕ್ಕೆ ಈ ನೆಲದ ಬಡವರ ಮಕ್ಕಳ ಶಿಕ್ಷಣದ ಗತಿಯೇನು? ಎಂದು ಆತಂಕವಾಯಿತು.

ಇದು ಕೇವಲ ಶಿಕ್ಷಣ ವ್ಯವಸ್ಥೆಯ ಸಮಸ್ಯೆ ಮಾತ್ರವಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಲ್ಲದೆ ಆಸ್ಪತ್ರೆಗಳು ಶವಾಗಾರದ ರೂಪ ತಾಳಿವೆ. ಕರ್ನಾಟಕ ರಾಜ್ಯವೊಂದರಲ್ಲಿ ಅರವತ್ತಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ವರ್ಷವೊಂದಕ್ಕೆ ಹೊರಬೀಳುವ ಕನಿಷ್ಠ ಆರು ಸಾವಿರ ವೈದ್ಯರು ಎಲ್ಲಿ ಹೋಗುತ್ತಿದ್ದಾರೆ? ಈ ಬಗ್ಗೆ ಜನಪ್ರತಿನಿಧಿಗಳೆಂಬ ಮಹಾನ್ ಮೇಧಾವಿಗಳು ಎಂದಾದರೂ ಯೋಚಿಸಿದ್ದಾರಾ? ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದ ಶಾಸಕನೂ ಆಯಾ ಕ್ಷೇತ್ರದ ಮಿನಿ ಪಾಳೇಗಾರನಾಗಿದ್ದಾನೆ.

ಅವನು ಹೇಳಿದ ಅಧಿಕಾರಿಗಳು ಆತನ ಕ್ಷೇತ್ರದಲ್ಲಿ ಗುಲಾಮರಂತೆ ಕಾರ್ಯನಿರ್ವಹಿಸಬೇಕು. ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳು ಹುದ್ದೆಗೆ ರಾಜಿನಾಮೆ ನೀಡಿ ಇತರೆ ಖಾಸಗಿ ಉದ್ಯೋಗದತ್ತ ತೆರಳುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ನಿರುದ್ಯೋಗದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಎದೆಯುಬ್ಬಿಸಿ ಮಾತನಾಡುವ ರಾಜಕಾರಣಗಳಿಗೆ ರಾಜ್ಯದ ಸಮಸ್ಯೆಗಳ ಕುರಿತಾಗಿ ಅಥವಾ ಸರ್ಕಾರಿ ನೌಕರರ ವರ್ಗಾವಣೆಯ ಸಂಕಷ್ಟ ಕುರಿತಾಗಿ ಕನಿಷ್ಠ ಪ್ರಜ್ಞೆಯಿಲ್ಲ. ಈ ದಿನದ ಪ್ರಜಾವಾಣಿಯ ಪತ್ರಿಕೆಯ ವರದಿಯನ್ನು ನೋಡಿದರೆ, ಈ ಕರ್ನಾಟಕ ಲೋಕ ಸೇವಾ ಆಯೋಗವನ್ನು ಶಾಶ್ವತವಾಗಿ ಮುಚ್ಚುವುದು ಒಳಿತು ಎನಿಸುತ್ತದೆ.

ಕೇಂದ್ರ ಲೋಕಸೇವಾ ಆಯೋಗವು ಪ್ರತಿವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಆಯೋಜಿಸಿ, ಅತ್ಯಂತ ಪಾರದರ್ಶಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದನ್ನು ನೋಡಿ ನಮ್ಮ ಕರ್ನಾಟಕ ಸರ್ಕಾರ ಆ ಸಂಸ್ಥೆಯಿಂದ ಕಲಿಯುವುದು ಬಹಳಷ್ಟಿದೆ ಎಂದು ಅನಿಸತೊಡಗಿದೆ. ಸರ್ಕಾರದ ಹುದ್ದೆಯಲ್ಲಿದ್ದಾಗ ಅನೇಕ ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿದ್ದ ಅಧಿಕಾರಿಗಳು ಲೋಕಸೇವಾ ಆಯೋಗದ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ ಉದಾಹರಣೆಗಳುಂಟು.

ಡಾ.ಹೆಚ್.ಎಲ್. ನಾಗೇಗೌಡ, ಮಾಜಿ ಪೊಲೀಸ್ ಕಮೀಷನರ್ ಎಂ.ಎಲ್.ಚಂದ್ರಶೇಖರ್ ಅವರಂತಹ ಮಹನೀಯರು 70 ರ ದಶಕದಲ್ಲಿ ಲೋಕಸೇವಾ ಆಯೋಗದಲ್ಲಿ ಇದ್ದ ಕಾರಣ ಅನೇಕ ಪ್ರತಿಭಾವಂತರು ಯಾವುದೇ ಹಣ, ಜಾತಿ ಮುಂತಾದ ಪ್ರಭಾವ ಬಳಸದೇ ಆಯ್ಕೆಯಾಗಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ. ಅಂತಹ ಪರಂಪರೆಯನ್ನು ನಾವೀಗ ಮತ್ತೆ ಕಾಣಲು ಸಾಧ್ಯವೆ?

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply