ಡಾ.ದಸೂಡಿ ನಾಗೇಶ್ ಅವರಿಗೆ ಪ್ರೊ.ಕಿರಂ ಪ್ರಶಸ್ತಿ ನೀಡಿರುವುದು ಪಶುಪಾಲನಾ ಸಮುದಾಯಗಳಿಗೆ ನೀಡಿದ ಗೌರವ

3 years ago

#Kiram #award #Dasudi #Nagesh #tribute #pastoral #communities

ಡಾಕ್ಟರ್ ದಸೂಡಿ ನಾಗೇಶ್ ಅವರಿಗೆ ಪ್ರೊಫೆಸರ್ ಕಿ. ರಂ. ನಾಗರಾಜ್ ಅವರ ನೆನಪಿನ ಪ್ರಶಸ್ತಿ ನೀಡಿರುವುದು ನಮ್ಮ ಪಾಸಲೆಯ ಪಶುಪಾಲನಾ ಸಮುದಾಯಗಳಿಗೆ ನೀಡಿದ ಗೌರವ ಹಾಗು ಆಯ್ಕೆ ಸಮಿತಿಯು ತೋರಿದ ಅಭಿಮಾನವಾಗಿದೆ.

ಡಾಕ್ಟರ್ ದಸೂಡಿ ನಾಗೇಶ್ ಅವರು ನಮ್ಮ ಕಳ್ಳುಬಳ್ಳಿ. ಅವರೊಂದು ನಮ್ಮದೇ ಉದಿ ಹಾದಿಯ ಪೌಳಿಕಲ್ಲು. ಜಾತಿ ಗಡಿಗಳ ದಾಟಿ ಸಾಲು ಸಂಬಂಧಗಳ ರಸ ಬಳ್ಳಿಯಾಗಿ ನಮ್ಮೊಳಗೆ ಹಬ್ಬಿಕೊಂಡು ಹೂವು ಕಾಯಾದವರು ದಸೂಡಿಯವರು. ಆಡು ಕುರಿ ದನಿನೋರ ಪಾಡುಪಲಗಳ ಅರಿತ ನಮ್ಮೊಂದಿಗಿನ ಸಂಸ್ಕೃತಿ ಚಿಂತಕ. ನಾಡು ಕಂಡ ಅಪರೂಪದ ಚಿಂತಕರು ವಿಮರ್ಶಕರು ಪ್ರೊಫೆಸರ್ ಕಿ. ರಂ. ನಾಗರಾಜ್ ರ ಪ್ರಶಸ್ತಿ ದಸೂಡಿಯವರಿಗೆ ದೊರೆತಿರುವುದು ಅಪರೂಪವಾದ ಹೆಮ್ಮೆಯ ಸಂಗತಿ.ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ದಸೂಡಿ ನಾಗೇಶ್ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು.

ದಸೂಡಿ ನಮಗೇನು ದೂರವೇನಲ್ಲ. ಇಲ್ಲೇ ನಮ್ಮ ಹಟ್ಟಿಗಳಿಗೂ ದಸೂಡಿಗೂ ನಡದೇ ಹೋಗಬಹುದಾದ ಗಾವುದಗಳ ದೂರ ಪಾಸಲೆ. ಹಟ್ಟಿ ದೇವರುಗಳ ಪೌಳಿಗಳಿಗೆ ದಿನೊಪ್ಪತ್ತು ನಡೆದು ತಲುಪೊ ಹೊತ್ತಿನ ಹಾದಿ. ದಸೂಡಿಯ ಕಾಲ್ದಾರಿಗಳ ಸರಪಳಿಯಲ್ಲಿಯೇ ನಡೆದು ನಾವು ಹೋಗೋದು ನಮ್ಮ ಆಡುಕುರಿಗಳ ಮೇವು ನೀರಿನ ಪಾಡಿಗೆ. ನಮ್ಮ ಸುತ್ತಿನ ಕತನ ಕಾವ್ಯಗಳ ಈಶಾನ್ಯ ತಲೆಮಾರಿನ ಹೊಳೆಬಾಗಿಲು ದಸೂಡಿ. ಡಾಕ್ಟರ್ ದಸೂಡಿ ನಾಗೇಶ್ ಅವರ ಓದು ಮತ್ತು ಗ್ರಹಿಕೆಯಲ್ಲಿ ನಮ್ಮ ಹಟ್ಟಿಗಳ ಬದುಕು ಭಾಷೆಯ ರಸವತ್ತಾದ ಬನಿ ಮತ್ತು ಬಾವುಣಿಕೆ ಇದೆ.

ಡಾ. ನಾಗೇಶ್ ಅವರು ನಮಗೆಲ್ಲಾ ಬಯಲು ಸೀಮೆಯ ಕೆಂಗಾಡು ಕೆಬ್ಬೆ ಕೆಂಗುದುರು ಕೆಂಬಾರೆ ಕಾಡುಗಲ್ಲು ಕಮರ ಸೀಮೆಯ ಬಿಳಿಚಯವಾದ ನೆಲದ ಬನಿಯೊಳಗೆ ಬೆಳೆದ ಬಿಳಿಜೋಳದ ದಂಟಿನ ಸವಿಯಾದ ಮದರು. ಜಾವ ಕಾಯುವ ಅವಧಿಗೆ ಮಳೆ ಹನಿತರೆ, ಚಳಿಯಾದರೆ ಬಿಸಿಲಿಗೆ ಆಸರೆಯಾಗಿ ನಿಲ್ಲುವ ಒತ್ತೋಳಗಲದ ಒಬ್ಬೆಯ ಎದೆಗಾತು ಅನುಗಾಲವೂ ನಿಲ್ಲುವ ಅವುಣ್ಕೆ.

ಕಳುರಳ್ಳಿ ಹಾಗಲವಾಡಿ ಗುಡ್ಡೇನಹಳ್ಳಿ ಬೆಂಚೆ ದಸೂಡಿ ದಪ್ಪಗುಂಟೆ ಬೆಳ್ಳಾರ ಬೆಳುವಾಡಿ ಹೇಶಪ್ಪನಹಳ್ಳಿ ಕರಿಯಾಲ ಬೋರನಕಣಿವೆ ಕಂಬೇಹಟ್ಟಿ ಕಾನೆ ಹಡ್ಲು, ನಂದಿಕಲ್ಲು, ಬಕ್ಕಪ್ಪನ ಕಣಿವೆ, ಕುದುರೆ ಕಣುವೆ, ಬುಕ್ಕಾಪಟ್ಟಣ ಇವೇ ಮೊದಲಾದ ಭೌಗೋಳಿಕ ವಿನ್ಯಾಸಗಳೊಳಗೆ ಬಾಳಿ ಮೆರೆದ ನಾಡ ಜನರ ಕತನ ಕಾವ್ಯಗಳ ಸಂಪಲೊಳಗೆ ಡಾಕ್ಟರ್ ದಸೂಡಿ ನಾಗೇಶ್ ಅವರ ಭಾಷೆಯ ಗ್ರಹಿಕೆಗಳು ಓದು ಅನುರಣಿಸ ಕಾಣತೊಡಗುವವು ನಾವು ನೆನೆದು ಅಂಗಲಾಪಿಸಿಕೊಂಡಂತೆಲ್ಲಾ. ಅವರ ಇಂಬಾದ ಓದಿನ ನಡೆಯೊಳಗೆ, ಪಶುಪಾಲಕ ಸಮುದಾಯಗಳು ದಿಟ್ಟಿಸಿ ಒಲ್ಡೊಯ್ದ ತಳವೊಂದಿಗ ತನವೊಂದು ತಾವುಮಾಡಿಕೊಂಡು ಊರುಕಟ್ಟುವ ಕಾವ್ಯಕಟ್ಟುವ ಕಸುಬುದಾರಿಕೆಯ ನಡೆ ಬೆಳೆಯುತ್ತಾ ಹೋಗುವುದನ್ನು ಗಮನಿಸಬಹುದು. ಪ್ರಭುತ್ವ ಬೇಲಿ ಹಾಕಿಕೊಂಡ ಸರಹದ್ದಿನೊಳಗಿನ ಮೇವು ನೀರಿಗೆ ಸಾವಾಲೊಡ್ಡಿ ಹೋರಾಟಕ್ಕೆ ನಿಂತ ಎದೆಯಾದ ಮನುಷ್ಯನೊಬ್ಬ ದ್ಯಾನಿಸಹುದಾದ್ದನ್ನು ದಸೂಡಿಯವರ ಗ್ರಹಿಕೆಗಳು ವಿಸ್ತಾರ ಪಡೆದು ನಮ್ಮ ಚರ್ಚೆಗಳಿಗೆ ಒದಗಿಬರಬಲ್ಲವು. ನಮ್ಮೋರು ಡಾಕ್ಟರ್ ದಸೂಡಿ ನಾಗೇಶ್ ಅವರು ಕಿ. ರಂ. ನಾಗರಾಜ್ ಪ್ರಶಸ್ತಿ ತಮ್ಮಂತ ನಾಡು ನೆಡೆಗೆ ದೊರೆತದ್ದು ಕುಷಿ ತಂದಿದೆ ಮತ್ತೊಮ್ಮೆ ಅಭಿನಂದನೆಗಳು ಸಾರ್.

ನಮಸ್ಕಾರ
– ಉಜ್ಜಜ್ಜಿ ರಾಜಣ್ಣ, ಕವಿ

Leave a Reply