ಸೌಜನ್ಯ ಪೋಷಕರು ಆರೋಪಿಸುವ ಬಲಾಡ್ಯ ವ್ಯಕ್ತಿಗಳ ಬ್ರೈನ್ ಮ್ಯಾಪಿಂಗ್ ನಡೆಯಬೇಕು

3 years ago

#brainmapping #persons #accused #soujanya #parents #done

ಸೌಜನ್ಯ ಕೊಲೆ – ಅತ್ಯಾಚಾರ ಆರೋಪಿಯಾಗಿದ್ದು, ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರ ಬ್ರೈನ್ ಮ್ಯಾಪಿಂಗ್ ನಡೆಸಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಇದು ಸೌಜನ್ಯ ಪರ  ಇರುವ ಜನರನ್ನು ದಾರಿ ತಪ್ಪಿಸಲು ನಡೆದಿರುವ ಕುತಂತ್ರವಷ್ಟೆ. 

ಸೌಜನ್ಯ ಪ್ರಕರಣದಿಂದ ಖುಲಾಸೆಗೊಂಡಿರುವ ಸಂತೋಷ್ ರಾವ್ ರವರು ಒಬ್ಬ ಮಾನಸಿಕ ಅಸ್ವಸ್ಥ. ಸಂತೋಷ್ ರಾವ್ ರವರನ್ನು ಅನುಮಾನಿತರು ನಾಟಕೀಯವಾಗಿ ಹಿಡಿದುಕೊಟ್ಟಾಗಲೇ “ನೀನೇ ಸೌಜನ್ಯಳನ್ನು ಕೊಲೆ ಮಾಡಿದ್ದು ಅಲ್ವಾ ? ನಿಜ ಹೇಳು” ಎಂದು ಜನ ಪ್ರಶ್ನಿಸಿದಾಗ ಹೌದು ಎಂದು ತಲೆ ಆಡಿಸಿದ್ದರು. ತಕ್ಷಣ ಪೊಲೀಸರು ಸಂತೋಷ್ ರಾವ್ ರವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು‌. ಠಾಣೆಯಲ್ಲಿ ಎಫ್ಐಆರ್ ಮಾಡುವಾಗ, ಹೇಳಿಕೆ ಪಡೆಯುವಾಗ ಮತ್ತೆ ಮತ್ತೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗಲೂ “ನಾನು ಕೊಲೆ ಮಾಡಿಲ್ಲ” ಎಂದು ಸಂತೋಷ್ ರಾವ್ ಹೇಳಿಕೆ ನೀಡಿಲ್ಲ. ಯಾಕೆಂದರೆ ಅವರು ತನ್ನನ್ನು ತಾನು ಮಾತಿನ ಮೂಲಕ ರಕ್ಷಿಸಿ ಕೊಳ್ಳುವ ಮಾನಸಿಕ ಸ್ಥಿಮಿತತೆಯನ್ನು ಹೊಂದಿಲ್ಲ.

ಚಾರ್ಜ್ ಶೀಟ್ ಮಾಡುವಾಗ ಪೊಲೀಸರೇ ಮಹಜರು ಮಾಡಿ, ಕೊಲೆ- ಅತ್ಯಾಚಾರ ಮಾಡಿರುವ ಬಗ್ಗೆ ಸಂತೋಷ್ ರಾವ್ ಹೇಳಿಕೆಯನ್ನು ಬರೆದುಕೊಂಡು ಸಂತೋಷ್ ರಾವ್ ಅವರ ಸಹಿಯನ್ನು ಹಾಕಿಸುತ್ತಾರೆ. ನಾನು ಕೊಲೆ ಮಾಡಿಲ್ಲ, ನಾನು ನಿರಪರಾಧಿ ಎಂದು ಸಂತೋಷ್ ಕುಮಾರ್ ರವರು ಯಾವುದೇ ನ್ಯಾಯಾಲಯಗಳಲ್ಲಿ, ಪ್ರಾಧಿಕಾರ, ಆಯೋಗಗಳಲ್ಲಿ ಮನವಿ ಮಾಡಿಕೊಂಡಿಲ್ಲ. ಯಾಕೆಂದರೆ ಅಂತಹ ಮಾನಸಿಕ ಸಾಮರ್ಥ್ಯ ಸಂತೋಷ್ ರಾವ್ ಗಾಗಲೀ, ಆರ್ಥಿಕ ಸಾಮರ್ಥ್ಯ ಅವರ ಮನೆಯವರಿಗಾಗಲೀ ಇರಲಿಲ್ಲ. ಹೀಗೆ ಪೊಲೀಸರ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿರುವ ವ್ಯಕ್ತಿಯನ್ನು ಇನ್ನೂ ಯಾವ ಕಾರಣಕ್ಕಾಗಿ ಬ್ರೈನ್ ಮ್ಯಾಪಿಂಗ್ ಮಾಡಬೇಕು? ಯಾವುದನ್ನು ಒಪ್ಪಿಸುವ ಸಲುವಾಗಿ ಬ್ರೈನ್ ಮ್ಯಾಪಿಂಗ್ ಮಾಡಬೇಕು? ಕೃತ್ಯವನ್ನು ಒಪ್ಪಿಕೊಳ್ಳದ ವ್ಯಕ್ತಿಗಳ ಬ್ರೈನ್ ಮ್ಯಾಪಿಂಗ್ ಗೆ ಮಾತ್ರ ಕಾನೂನಿನಲ್ಲಿ ಅವಕಾಶ ಇದೆ. ಹೀಗಾಗಿ ಸೌಜನ್ಯ ಪೋಷಕರು ಆರೋಪಿಸುವ ಬಲಾಡ್ಯ ವ್ಯಕ್ತಿಗಳ ಬ್ರೈನ್ ಮ್ಯಾಪಿಂಗ್ ನಡೆಯಬೇಕೇ ಹೊರತು ಎಲ್ಲವನ್ನೂ ಒಪ್ಪಿಯೂ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರದ್ದಲ್ಲ.

ಸಂತೋಷ್ ರಾವ್ ಅವರು ಎಲ್ಲಾ ಒಪ್ಪಿಕೊಂಡರೂ, ಕೇಸ್ ನಿಂದ ತಪ್ಪಿಸಿಕೊಳ್ಳುವ ಚಾಕಚಾಕ್ಯತೆಯಾಗಲೀ, ಮಾನಸಿಕ ಸಾಮರ್ಥ್ಯವಾಗಲೀ ಇಲ್ಲದೇ ಇದ್ದರೂ ನ್ಯಾಯಾಲಯ ಅವರನ್ನು ಆರೋಪದಿಂದ ಖುಲಾಸೆಗೊಳಿಸುತ್ತದೆ ಎಂದರೆ ಅಂದೆಂತಹ ಅಮಾಯಕನಿರಬೇಕು ! ಇಂತಹ ಬಡ, ಅಸ್ವಸ್ಥ ಅಮಾಯಕನನ್ನು ಅನಾವಶ್ಯಕವಾಗಿ, ಅನ್ಯಾಯವಾಗಿ ಹನ್ನೊಂದು ವರ್ಷ ಈ ಸಮಾಜ ಜೈಲಿನಲ್ಲಿ ಇಟ್ಟಿದ್ದಕ್ಕೆ ತಲೆ ತಗ್ಗಿಸುವ ಬದಲು ಮತ್ತೆ ಅದೇ ವ್ಯಕ್ತಿಯ ಬ್ರೈನ್ ಮ್ಯಾಪಿಂಗ್ ಗೆ ಆಗ್ರಹಿಸುತ್ತಾರೆ ಎಂದರೆ ಅವರೇನು ಮನುಷ್ಯರೇ ?

– ನವೀನ್ ಸೂರಿಂಜೆ, ಪತ್ರಕರ್ತರು

Leave a Reply