ಬೆಂಗಳೂರು: ಶ್ರೀಯುತ Basavaraj Bommai ಅವರೇ, ನಿನ್ನೆ ಸಾರಿಗೆ ಸಿಬ್ಬಂದಿಗಳಿಗೆ ಅರ್ಧ ವೇತನ ಪಾವತಿ – ಇಂದು ಅರ್ಧದಷ್ಟು ಅನುದಾನ ಎಂದು ಹೇಳುತ್ತಿರುವಿರಿ. ಸಾರಿಗೆ ಇಲಾಖೆ ಆದೇಶದಲ್ಲಿ Ad-hoc ಆಧಾರದಲ್ಲಿ ಎಂದು ನಮೂದಿಸಲಾಗಿದ್ದು, ಎಲ್ಲಿಯೂ ಕೂಡ ಅರ್ಧದಷ್ಟು ಅನುದಾನ ಮಂಜೂರು ಎಂದು ನಮೂದಾಗಿಲ್ಲ. ತಾವು ಆದೇಶದ ಪ್ರತಿಯನ್ನು ಮತ್ತೊಮ್ಮೆ ಅವಗಾಹಿಸುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದಾರೆ.
ಸಾರಿಗೆ ಇಲಾಖೆ ನೌಕರರಿಗೆ ವೇತನ ನೀಡಲು ಸರ್ಕಾರ ಅಸಮರ್ಥವಾಗಿದೆ ಎಂಬ ಬೊಮ್ಮಾಯಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ತಮ್ಮ ಆಡಳಿತದ ಅವಧಿಯಲ್ಲಿ, ಸಾರಿಗೆ ಸಿಬ್ಬಂದಿಗಳಿಗೆ ತಿಂಗಳ ವೇತನವನ್ನು 25 ನೇ ದಿನಾಂಕದವರೆಗೂ ಹಾಗೂ ಈ ತಿಂಗಳ ವೇತನವನ್ನು ಮುಂದಿನ ತಿಂಗಳು ನೀಡಿರುವಂತಹ ಉದಾಹರಣೆಗಳು ಸಹ ಇವೆ. ತಾವು ಸಾರಿಗೆ ಸಿಬ್ಬಂದಿಗಳೆಡೆಗೆ ತೋರಿದ ಕಾಳಜಿಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ ಎಂದು ಬೊಮ್ಮಾಯಿಯವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ 5 ವರುಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗದೇ, ನಮ್ಮ ಅವಧಿಯಲ್ಲಿ ಸೇರ್ಪಡೆಗೊಂಡ ಬಸ್ಸುಗಳನ್ನೇ ಕಾರ್ಯಾಚರಣೆ ಮಾಡಿದ್ದೀರಿ, ತಮ್ಮ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಆಗಿಲ್ಲ, 16,000 ಸಿಬ್ಬಂದಿಗಳ ಕೊರತೆಯನ್ನು ಸಾರಿಗೆ ಸಂಸ್ಥೆಗಳು ಅನುಭವಿಸುತ್ತಿದ್ದು, ನಾವು 13,000 ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ ಎಂದಿದ್ದಾರೆ.
ತಮ್ಮ ಅವಧಿಯಲ್ಲಿ ಬಿಎಂಟಿಸಿ ಹೊರತುಪಡಿಸಿ, ಇತರೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ, 2022-2023 ರ ಆರ್ಥಿಕ ವರ್ಷದ ಅವಧಿಗೆ ನಾಲ್ಕೂ ಸಾರಿಗೆ ಸಂಸ್ಥೆಗಳ ಸಾರಿಗೆ ಆದಾಯದ ಮೇಲಿನ ನಷ್ಟ ರೂ. 4330.41 ಕೋಟಿ. ಇದು ತಮ್ಮ ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಕುಟುಕಿದ್ದಾರೆ.




