10 ಮಂದಿ ವಿರುದ್ಧ ನಗರ ಪೊಲೀಸರು ಎಫ್‍ಐಆರ್

3 years ago

#City #police #FIR

ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದ ಕೋಮು ವೈಷಮ್ಯದ ಘಟನೆಗಳಲ್ಲಿ ಶಾಮೀಲಾದ ಆರೋಪದಲ್ಲಿ ಬಂಧಿತರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಗೃಹ ಸಚಿವ ಜಿ.ಪರಮೇಶ್ವರ್ ಅವರ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರಶಾಂತ್ ಸೇರಿ 10 ಮಂದಿ ವಿರುದ್ಧ ನಗರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಪ್ರತಿಭಟನಾಕಾರರ ವಿರುದ್ಧ ಐಪಿಸಿ ಸೆಕ್ಷನ್ 143 ಹಾಗೂ 149 ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಉಡುಪಿ  ಕಾಲೇಜಿನ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದು, ಅಲ್ಲದೇ ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆಗಳಲ್ಲಿ ಭಾಗಿಯಾಗಿದ್ದವರನ್ನು ಅಮಾಯಕರಾ ಎಂಬುದನ್ನು ಪರಿಶೀಲಿಸಿ ಎಂದು ಸೂಚಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಿನ್ನೆ ಪ್ರತಿಭಟನೆ ನಡೆಸಿದ್ದರು.

ಸದಾಶಿವನಗರದ ಗೃಹ ಸಚಿವ ಪರಮೇಶ್ವರ್‌ ಮನೆಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಯತ್ನಿಸಿದ್ದರು. ಬಳಿಕ ಸಚಿವರು ಪ್ರತಿಕ್ರಿಯಿಸಿ, ಗಲಭೆ ಕೇಸ್ ವಾಪಾಸ್ ಪಡೆಯಲು ಸೂಚಿಸಿಲ್ಲ. ಶಾಸಕರು ಒಂದು ಪತ್ರ ಬರೆದ್ದಿದ್ದಾರೆ. ಅದನ್ನು ಪರಿಶೀಲಿಸಿ ಎಂದು ಹೇಳಿದ್ದೇನೆ. ಬಸವರಾಜ್ ಬೊಮ್ಮಾಯಿ ಮತ್ತು ಆರಗ ಜ್ಞಾನೇಂದ್ರ ರಾಜಕೀಯ ಮಾಡುತ್ತಿದ್ದಾರೆ. ಅವರಿಬ್ಬರೂ ಸಹ ಗೃಹ ಮಂತ್ರಿಯಾಗಿದ್ದವರು. ಅವರಿಗೆ ಅರಿವಿಲ್ಲವೇ ಎಂದು ಹೇಳಿದ್ದರು.

ಉಡುಪಿ ಕಾಲೇಜಿನ ಪ್ರಕರಣವನ್ನು ಕಾಲೇಜಿನ ಆಡಳಿತ ಮಂಡಳಿ ನೋಡಿಕೊಳ್ಳಲಿದೆ. ಆದರೆ ಅದು ಮಕ್ಕಳಾಟ ಎಂದು ಹೇಳಿಲ್ಲ. ಪ್ರಾಂಶುಪಾಲರು ಆ ವಿದ್ಯಾರ್ಥಿಗಳನ್ನು ಈಗಾಗಲೇ ಸಸ್ಪೆಂಡ್ ಮಾಡಿದ್ದಾರೆ, ಪೊಲೀಸರು ತನಿಖೆ ನಡೆಸುತ್ತಿದ್ದು, ವರದಿ ಬಂದ ಮೇಲೆ ವಿಚಾರ ತಿಳಿಯಲಿದೆ ಎಂದಿದ್ದರು.

Leave a Reply