NEP ಜಾರಿಗೆ ತರುವುದಿಲ್ಲ: ಮಧು ಬಂಗಾರಪ್ಪ

3 years ago

#NEP #will #not #be #implemented #MadhuBangarappa

ಬೆಂಗಳೂರು: ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ  ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ನಿರ್ಧರಿಸಲಾಗಿದೆ. ಈ ಕುರಿತು ತಜ್ಞರ ಸಮಿತಿ ರಚನೆ ಮಾಡಿ ಸಮಿತಿಗಳ ವರದಿಯನ್ನು ಆಧರಿಸಿ ಬದಲಾವಣೆ ತರಲಾಗುವುದು ಎಂದು ಹೇಳಿದರು.

ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವೀಕರಿಸುವುದಿಲ್ಲ. ನಾವು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಬದಲಾವಣೆಯನ್ನು ತರುತ್ತೇವೆ. ಏನೇ ಬದಲಾವಣೆ ತಂದರೂ ವಿದ್ಯಾರ್ಥಿಗಳ ಹಿತಾಸಕ್ತಿ ಮುಖ್ಯವೇ ಹೊರತು ಬೇರೇನೂ ಅಲ್ಲ ಎಂದರು.

ನೂತನ ಶಿಕ್ಷಣ ನೀತಿಯ ಅನುಸಾರ ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಪಠ್ಯ ಪರಿಷ್ಕರಣೆಯನ್ನು ಸಮಗ್ರವಾಗಿ ಮಾಡುತ್ತೇವೆ. ಏಕರೂಪ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಿತಿ ಅಧ್ಯಯನ ಮಾಡಿ ಅದು ನೀಡುವ ವರದಿ ಆಧರಿಸಿ ಪರಿಷ್ಕರಣೆ ಮಾಡಲಾಗುವುದು. ಈ ವಿಚಾರದಲ್ಲಿ ಯಾವುದೇ ಪಕ್ಷದ ವಿರುದ್ಧ ಅಥವಾ ಪರ ಅಲ್ಲ. ಪಠ್ಯಪುಸ್ತಕದಲ್ಲಿ ಹೊಸದಾಗಿ ಸೇರಿಸಿದ್ದನ್ನು ಕೈಬಿಟ್ಟು ಹಳೆಯ ಪಠ್ಯವನ್ನೇ ಮರಳಿ ತಂದಿದ್ದೇವೆ. ಈಗಾಗಲೇ ಶಾಲೆಗಳು ಆರಂಭವಾಗಿರುವುದರಿಂದ ಎಲ್ಲ ವಿಚಾರಗಳನ್ನು ಪರಿಷ್ಕರಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬ್ಯಾಗ್ ಹೊರೆ ಕಡಿಮೆ ಮಾಡುವುದು, ವಿವೇಕ ಶಾಲೆಗಳಲ್ಲಿ ಬಣ್ಣ ಬದಲಿಸುವ ವಿಚಾರಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಪಾಸು-ಫೇಲು ಅಷ್ಟೇ ಮುಖ್ಯವಲ್ಲ ಎಂದರು.

ಶಿಕ್ಷಕರ ವರ್ಗಾವಣೆಯ ಸಮಸ್ಯೆಗಳ ನಿವಾರಣೆಗೂ ಕ್ರಮ ಕೈಗೊಳ್ಳಲಾಗುವುದು. ವರ್ಗಾವಣೆ ಕೋರಿ 87 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಕೌನ್ಸಿಲಿಂಗ್ ಮೂಲಕ ಈ ತಿಂಗಳ ಅಂತ್ಯದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹೆಚ್ಚುವರಿ ಶಿಕ್ಷಕರ ವಿಚಾರದಲ್ಲಿ ಕೈಗೊಂಡ ಕ್ರಮದಿಂದ ಕೆಲವರಿಗೆ ತೊಂದರೆಯಾಗಿರಬಹುದು. ತಮ್ಮ ಸ್ವಕ್ಷೇತ್ರ ಸೊರಬದಲ್ಲಿ 52 ಶಾಲೆಗಳಲ್ಲಿ ಶಿಕ್ಷಕರೇ ಇರಲಿಲ್ಲ. ಹೆಚ್ಚುವರಿ ಶಿಕ್ಷಕರನ್ನು ಅಗತ್ಯ ಇರುವ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಮಕ್ಕಳಿಗೆ ಈ ಮೊದಲು ವಾರಕ್ಕೆ ಒಂದು ಮೊಟ್ಟೆ ನೀಡಲಾಗುತಿತ್ತು. ನಮ್ಮ ಸರ್ಕಾರ ಇದನ್ನು ಎರಡು ಮೊಟ್ಟೆಗೆ ಹೆಚ್ಚಿಸಿದೆ. ಮೊಟ್ಟೆ ಬದಲಿಗೆ ಬಾಳೆಹಣ್ಣು, ಚಿಕ್ಕಿಯನ್ನು ಪಡೆಯಲು ಅವಕಾಶವಿದೆ. ಇದಕ್ಕೆ 280 ಕೋಟಿ ಅನುದಾನ ಒದಗಿಸಲಾಗಿದೆ ಎಂದರು

ಅನಧಿಕೃತ ಶಾಲೆಗಳು ಮರುಕಳಿಸದಂತೆ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೂ ತೊಂದರೆಯಾಗಬಾರದು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು  ತಿಳಿಸಿದರು.

ಆಂತರಿಕ ಮೌಲ್ಯ ಮಾಪನ: ಪ್ರಥಮ ಹಾಗೂ ದ್ವೀತೀಯ ಪಿಯುಸಿಯಲ್ಲಿ 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ ಹೊಂದಿರುವ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳಿಗೆ ಆಂತರಿಕ ಮೌಲ್ಯಮಾಪನ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ವಾರ್ಷಿಕ ಪರೀಕ್ಷೆ ಮೂಲಕ ಕಲಿಕೆ ಮೌಲ್ಯಮಾಪನ ಮಾಡುವುದಕ್ಕಿಂತ ವರ್ಷಪೂರ್ತಿ ನಡೆಸುವ ಆಂತರಿಕ ಮೌಲ್ಯಮಾಪನ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಆಂತರಿಕ ಮೌಲ್ಯಮಾಪನ ಅಂಕಗಳನ್ನು ಆಯಾ ಉಪನ್ಯಾಸಕರು ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿ ದಾಖಲಿಸುತ್ತಾರೆ ಎಂದು ತಿಳಿಸಿದರು.

ಭಾಷಾ ಹಾಗೂ ಕೋರ್ ವಿಷಯಗಳಲ್ಲಿ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಐಟಿ, ಆಟೋಮೊಬೈಲ್, ರಿಟೈಲ್, ಬ್ಯೂಟಿ ಅಂಡ್ ವೆಲ್‍ನೆಸ್ ವಿಷಯಗಳಿಗೆ ಆಂತರಿಕ ಮೌಲ್ಯಮಾಪನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದನೇ ಕಿರುಪರೀಕ್ಷೆ, 2ನೇ ಕಿರುಪರೀಕ್ಷೆ ಹಾಗು ವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳಲ್ಲಿ ಉತ್ತಮವಾದ ಎರಡನ್ನೂ 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡುವುದು, ತರಗತಿ ಅಥವಾ ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಹಾಗೂ ಅಸೈನ್‍ಮೆಂಟ್‍ಗಳಿಗೆ 10 ಅಂಕಗಳು. ಇದರಲ್ಲಿ ಪ್ರಾಜೆಕ್ಟ್ , ಅಸೈನ್‍ಮೆಂಟ್‍ಗಳ ಬರವಣಿಗೆ 5 ಅಂಕ, ಪ್ರಸ್ತುತಪಡಿಸುವಿಕೆ 3, ಸಂದರ್ಶನಕ್ಕೆ 2 ಅಂಕಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು

ಎರಡು ಕಿರುಪರೀಕ್ಷೆಗಳನ್ನು ಪ್ರತಿ ಪರೀಕ್ಷೆಯ 40 ಅಂಕಗಳಿಗೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಯನ್ನು 80 ಅಂಕಗಳಿಗೆ ನಿಗದಿಪಡಿಸಲಾಗುವುದು. 80 ಅಂಕಗಳ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಕನಿಷ್ಠ 24 ಅಂಕಗಳನ್ನು ಗಳಿಸುವುದು ಕಡ್ಡಾಯ. ಒಂದು ವೇಳೆ ವಿದ್ಯಾರ್ಥಿಯು ಕಿರುಪರೀಕ್ಷೆ ಒಂದು ಮತ್ತು ಎರಡು ಹಾಗೂ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಯಾವುದಾದರೂ ಒಂದು ಪರೀಕ್ಷೆಯಲ್ಲಿ ಗೈರು ಹಾಜರಾದರೆ ಉಳಿದ ಎರಡು ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು 10 ಅಂಕಗಳಿಗೆ ಪರಿವರ್ತಿಸಿ ಸರಾಸರಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿ ಕೇವಲ ಒಂದೇ ಒಂದು ಕಿರುಪರೀಕ್ಷೆ ಅಥವಾ ಮಧ್ಯವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದರೆ ಆ ಅಂಕಗಳನ್ನು 10ಕ್ಕೆ ಪರಿವರ್ತಿಸಿ ಅರ್ಧದಷ್ಟು ಅಂಕಗಳನ್ನು ನೀಡಲಾಗುವುದು. ವಿದ್ಯಾರ್ಥಿ ಯಾವುದೇ ಕಿರುಪರೀಕ್ಷೆ ಅಥವಾ ಮಧ್ಯವಾರ್ಷಿಕ ಪರೀಕ್ಷೆಗೆ ಹಾಜರಾಗದೆ ಯಾವುದೇ, ಪ್ರಾಜೆಕ್ಟ್, ಅಸೈನ್‍ಮೆಂಟ್ ಸಲ್ಲಿಸದೆ ಇದ್ದರೆ ಅವರು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 80 ಅಂಕಗಳಲ್ಲಿ 35 ಅಂಕಗಳನ್ನು ಪಡೆಯಬೇಕು. ಪ್ರಸಕ್ತ 2023-24ನೇ ಸಾಲಿನ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹಳೆಯ ವಿದ್ಯಾರ್ಥಿಗಳು, ಪುನಾವರ್ತಿತ ವಿದ್ಯಾರ್ಥಿಗಳು, ಖಾಸಗಿಯಾಗಿ ದ್ವಿತೀಯ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಹೊಸ ಪದ್ದತಿ ಅನ್ವಯಿಸುವುದಿಲ್ಲ. ಅವರು 100 ಅಂಕದ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಯು ಅನಿವಾರ್ಯ ಕಾರ್ಯದಿಂದ ಕಾಲೇಜು ಬದಲಾವಣೆ ಮಾಡಿಕೊಂಡ ಸಂದರ್ಭದಲ್ಲಿ ಖಾಸಗಿಯಾಗಿ ಅಭ್ಯಾಸ ಮಾಡುವ ಭಾಷೆ ಹಾಗೂ ವಿಷಯವನ್ನು ಆಂತರಿಕ ಮೌಲ್ಯಮಾಪನ ಪದ್ದತಿಗೆ ಒಳಪಡಿಸಲಾಗುವುದು. ಇದರ ಬಗ್ಗೆ ಆಯಾ ಕಾಲೇಜುಗಳ ಪ್ರಾಂಶುಪಾಲರು ಮೌಲ್ಯಮಾಪನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಆಂತರಿಕೆ ಮೌಲ್ಯಮಾಪನದಿಂದ ನೀಡುವ 20 ಅಂಕಗಳನ್ನು ಎಸ್‍ಎಟಿಎಸ್‍ನಿಂದ ನೇರವಾಗಿ ಫಲಿತಾಂಶ ಪ್ರಕಟಣೆಗೆ ಪರಿಗಣಿಸುವುದರಿಂದ ನಿಗದಿತ ಸಮಯದೊಳಗೆ ಅಂಕಗಳನ್ನು ದಾಖಲಿಸಬಹುದು. ಈ ನಿರ್ಧಾರದಿಂದ ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಮುಕ್ತರಾಗಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ಸರ್ಕಾರದ ಆಶಯವಾಗಿದೆ ಎಂದು ವಿವರಿಸಿದರು.

Leave a Reply