ನಾನಾಗಿದ್ದರೆ ನಿಮ್ಮನ್ನು 24 ತಾಸಿನಲ್ಲಿ ಪಕ್ಷದಿಂದ ವಜಾ ಮಾಡುತ್ತಿದ್ದೆ: ಯತ್ನಾಳ್ ವಿರುದ್ಧ ಡಿಕೆಶಿ ಗುಡುಗು

3 years ago

#I #would #have #sacked #you #party #DKShivakumar #thunder #against #Yatnal

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ವಿಚಾರ ವಿಧಾನಸಭೆಯಲ್ಲಿ  ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆದು ಸದನದಲ್ಲಿ ಕೆಲಕಾಲ‌ ಕೋಲಾಹಲದ ವಾತಾವರಣ ಉಂಟಾಯಿತು.

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆ ವಿಚಾರ ಪ್ರಸ್ತಾಪಗೊಂಡು, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಕುಪಿತ ಬಿಜೆಪಿ ಸದಸ್ಯರು ಧರಣಿ ನಡೆಸಿ ಸದನದ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಹೊಸ ಸರ್ಕಾರ ಬಂದಾಗ ವರ್ಗಾವಣೆಗಳಾಗುವುದು ಸಹಜ. ಐಎಎಸ್, ಕೆಎಎಸ್ ಕೇಡರ್ ಹುದ್ದೆಗೆ ಅದೇ ಕೇಡರ್‍ ನ ಅಧಿಕಾರಿ ನೇಮಕ ಮಾಡಬೇಕು. ಆದರೆ, ವಿಜಯಪುರ ಮಹಾನಗರ ಪಾಲಿಕೆಗೆ ಆಯುಕ್ತರನ್ನಾಗಿ ಹುದ್ದೆಗೆ ಅರ್ಹತೆ ಇಲ್ಲದವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆಪಾದಿಸಿದರು.

ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಕೆಎಎಂಎಸ್ ಕೇಡರ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಯ ಜಾತಿ ಯಾವುದು ಎಂದು ನೋಡಿಲ್ಲ. ಸರ್ಕಾರಿ ಅಧಿಕಾರಿ ಎಂಬದನ್ನಷ್ಟೆ ನೋಡಲಾಗಿದೆ ಎಂದರು.

ಇದನ್ನು ವಿರೋಧಿಸಿದ ಯತ್ನಾಳ್ ಈ ಹಿಂದೆ ನನ್ನನ್ನು ತುಳಿಯಲು ಹಾಕಿದ್ದ ಅಧಿಕಾರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂದಿದ್ದೆ. ವ್ಯಾಪಾರ ಮಾಡಿಕೊಂಡಿರಲಿಲ್ಲ, ಈಗ ಅರ್ಹತೆ ಇರದ ಅಧಿಕಾರಿಯನ್ನು ಹಾಕಿ ವರ್ಗಾವಣೆ ವಿಚಾರದಲ್ಲಿ ವ್ಯಾಪಾರ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವ್ಯಾಪಾರವೆಂದು ಏಕೆ ಹೇಳುತ್ತೀರಿ? ನಾವು ವ್ಯಾಪಾರ ಮಾಡಿಕೊಂಡಿಲ್ಲ ಎಂದು ಹೇಳಲು ನೀವು ಮಾತ್ರ ಹರಿಶ್ಚಂದ್ರರೇ? ವಿನಾಕಾರಣ ಏನೇನೋ ಹೇಳಬೇಡಿ ಎಂದರು.

ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ನ ಬಸವರಾಜ ರಾಯರೆಡ್ಡಿ, ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ವ್ಯಾಪಾರ ಮಾಡಿದ್ದಾರೆ ಎಂಬುದನ್ನು ಕಡತದಿಂದ ತೆಗೆಯಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಈ ವೇಳೆ ಎದ್ದು‌ ನಿಂತ ಬಸವರಾಜ ಬೊಮ್ಮಾಯಿ , ಅರ್ಹತೆ ಇಲ್ಲದ ಅಧಿಕಾರಿ ಹಾಕಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಯಾವ ಆಧಾರದ ಮೇಲೆ ಆ ಅಧಿಕಾರಿ ವರ್ಗಾವಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆದು ಸದನ ಗದ್ದಲ, ಗೊಂದಲದ ಗೂಡಾಯಿತು. ವಾಗ್ವಾದ ನಡುವೆ ಮಾತನಾಡಿದ ಬೈರತಿ ಸುರೇಶ್, ವ್ಯಾಪಾರ ವಹಿವಾಟು ಮಾಡುವುದು ಯತ್ನಾಳ್‍ಗೆ ಅಗತ್ಯವಿರಬಹುದು. ನನಗೆ ಅದರ ಅಗತ್ಯವಿಲ್ಲ. ಸೌಜನ್ಯಕ್ಕಾದರೂ ಅಧಿಕಾರಿ ಭೇಟಿಯಾಗಿಲ್ಲ ಎಂದರೆ ಏನರ್ಥ? ನಿಮ್ಮ ಬಳಿ ವ್ಯಾಪಾರ ಮಾಡಲು ಆ ಅಧಿಕಾರಿ ಕಳುಹಿಸಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು.

ಹೊರ ಹಾಕುತ್ತಿದ್ದೆ: ಈ ವೇಳೆ ಮಧ್ಯ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರಿಗೆ ಮೊದಲಿನಿಂದಲೂ ಈ ರೀತಿ ವ್ಯವಹಾರ ಮಾಡಿಕೊಂಡು ಬಂದಿರುವ ಅಭ್ಯಾಸ ಇದೆ. ಮುಖ್ಯಮಂತ್ರಿ ಹುದ್ದೆಯನ್ನು ₹2500 ಕೋಟಿ, ಮಂತ್ರಿ ಹುದ್ದೆಯನ್ನು ₹100 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ಯತ್ನಾಳ್ ಅವರೇ ಆರೋಪಿಸಿದ್ದಾರೆ” ಎಂದರು.

ಆಗ ಯತ್ನಾಳ್ ಅವರು ಮಧ್ಯ ಪ್ರವೇಶ ಮಾಡಲು ಮುಂದಾದಾಗ, “ಕೂತುಕೊಳ್ಳಯ್ಯ ನೀವೇನು ಹೇಳಿದ್ದೀರಿ, ಮಾತನಾಡಿದ್ದೀರಿ ಎಂಬ ಇತಿಹಾಸ ನಮ್ಮ ಬಳಿ ಇದೆ. ನೀವು ನೀಡಿದ ಹೇಳಿಕೆಯನ್ನು ನಿಮ್ಮ ಮುಖ್ಯಮಂತ್ರಿಗಳು  ಕೇಳಿಸಿಕೊಂಡು ಸುಮ್ಮನೆ ಕೂತಿರಬಹುದು. ಆದರೆ ನಾವು ಹಾಗೆ ಕೇಳಿಸಿಕೊಂಡಿರಲು ಸಾಧ್ಯವಿಲ್ಲ.  ನೀನು ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು. ನಿಮ್ಮ ನಾಯಕರಾಗಿದ್ದಕ್ಕೆ ನಿಮ್ಮ ಮಾತನ್ನು ಕೇಳಿಸಿಕೊಂಡು ಅವರು ಸುಮ್ಮನೆ ಇದ್ದಾರೆ. ನನ್ನಂತಹವನಾಗಿದ್ದರೆ ನಿಮ್ಮನ್ನು 24 ತಾಸಿನಲ್ಲಿ ಪಕ್ಷದಿಂದ ವಜಾ ಮಾಡುತ್ತಿದ್ದೆ. ನಿಮ್ಮಂತಹವರಿಂದ ಇಂದು ನೀವು (ಬಿಜೆಪಿ) ಆ ಕಡೆ ಸ್ಥಾನದಲ್ಲಿ ಕೂತಿದ್ದೀರಿ” ಎಂದು ಹರಿಹಾಯ್ದರು.

ಇದರಿಂದ ಕೆರಳಿದ ಯತ್ನಾಳ್ ಸೇರಿದಂತೆ ಬಿಜೆಪಿ ಸದಸ್ಯರು ಸಚಿವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿ ಘೋಷಣೇ ಕೂಗಲಾರಂಭಿಸಿದರು. ಇದರಿಂದ ಗದ್ದಲದ ವಾತಾವರಣ ಸೃಷ್ಟಿಯಾಗಿ ಸಭಾಧ್ಯಕ್ಷರು‌ ಕಲಾಪವನ್ನು ಅಲ್ಪಕಾಲಾವಧಿಗೆ ಮುಂದೂಡಿದರು.

Leave a Reply