ಬೆಂಗಳೂರು: ರಾತ್ರಿ ಮಲಗಲು ಬಿಡಲಿಲ್ಲ ಹಾಗೂ ಚಂದಾ ಕೊಡಲಿಲ್ಲ ಎಂದು ಕೋಪಗೊಂಡ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಮಸೀದಿಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.
ಮಹಾರಾಷ್ಟ್ರ ಮೂಲದ ಸೈಯದ್ ಮಹಮ್ಮದ್ ಅನ್ವರ್(37) ಬಿಎಸ್‍ಸಿ ಪದವಿ ಮುಗಿಸಿದ್ದು ಕೆಲಸ ಇರಲಿಲ್ಲ. ಹೀಗಾಗಿ ಊರೂರು ಸುತ್ತಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದ. ಮದರಸಾ ಹೆಸರಿನಲ್ಲಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದ ಈತ ಮಸೀದಿಗಳಲ್ಲೇ ಮಲಗುತ್ತಿದ್ದ. ಅಲ್ಲದೇ ಚಂದಾ ಹಣದಲ್ಲೇ ಜೀವನ ಸಾಗಿಸುತ್ತಿದ್ದ ಈತ ಜುಲೈ 4ರಂದು ಬೆಂಗಳೂರಿಗೆ ಬಂದಿದ್ದ ನಂತರ ಶಿವಾಜಿನಗರದ ರಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿ ಬಳಿ ಚಂದಾ ಪಡೆದಿದ್ದ ನಂತರ ನಾಳೆಯೂ ಚಂದಾ ಸಂಗ್ರಹಿಸಬೇಕಿದೆ. ಇದಕ್ಕಾಗಿ ಇಲ್ಲಿಯೇ ಇರುತ್ತೇನೆ ಎಂದು ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದಾನೆ. ಇದಕ್ಕೆ ಸಿಬ್ಬಂದಿ ಮಸೀದಿಯಲ್ಲಿ ಮಲಗಲು ಅವಕಾಶವಿಲ್ಲ ಎಂದಿದ್ದಾರೆ. ಅಲ್ಲದೆ ಈಗಾಗಲೇ ಸಾಕಷ್ಟು ಚಂದಾ ಸಂಗ್ರಹ ಮಾಡಿದ್ದೀಯಾ ಮತ್ತೆ ಚಂದಾ ಎತ್ತಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ
.
ಇದರಿಂದ ಬೇಸರಗೊಂಡು ಆತ ಮೆಜೆಸ್ಟಿಕ್‍ಗೆ ತೆರಳಿ ಅಲ್ಲಿಂದ ಆಂಧ್ರಪ್ರದೇಶದ ಕರ್ನೂಲ್ ಗೆ ತೆರಳಲು ಬಸ್‍ಹತ್ತಿದ್ದಾನೆ. ಈ ಬಸ್ ದೇವನಹಳ್ಳಿ ದಾಟುತ್ತಿದ್ದಂತೆ ಪೊಲೀಸ್ ಕಂಟ್ರೋಲ್ 112ಗೆ ಕರೆ ಮಾಡಿ, ಶಿವಾಜಿನಗರ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಕರೆ ಮಾಡಿದ್ದಾನೆ.
ಮಾಹಿತಿ ಪಡೆದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಅಗತ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಇದೊಂದು ಹುಸಿ ಬಾಂಬ್ ಕರೆಯ ಪ್ರಕರಣ ಎನ್ನುವುದು ಪತ್ತೆಯಾಗಿದೆ ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಕಿಡಿಗೇಡಿಯ ಪತ್ತೆಗೆ ಬಲೆ ಬೀಸಿದ್ದರು.
ತನಿಖೆಯ ವೇಳೆ ಬಾಂಬ್ ಕರೆ ಮಾಡಿದ ವ್ಯಕ್ತಿ ಆಂಧ್ರದಲ್ಲಿರುವುದು ಗೊತ್ತಾಗಿ ಅಲ್ಲಿಗೆ ತೆರಳಿ, ಆರೋಪಿ ಸೈಯದ್ ನನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.
ವಿಚಾರಣೆ ವೇಳೆ ಆತ, ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಆದ ಅಪಮಾನದ ಬಗ್ಗೆ ಹೇಳಿ ಸೇಡು ತೀರಿಸಿಕೊಳ್ಳಲು ಬಾಂಬ್ ಕರೆ ಮಾಡಿದ್ದಾಗಿ ತಿಳಿಸಿದ್ದಾನೆ.




