ಐದು ಗ್ಯಾರಂಟಿಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾರಿಯಾಗಲಿವೆ: ಸಿದ್ದರಾಮಯ್ಯ

3 years ago

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ನೀಡುವ ಯೋಜನೆಗೆ ಜುಲೈ 10 ರಂದು ಚಾಲನೆ ನೀಡಲಾಗುವುದು. ಅದೇ ರೀತಿಯಲ್ಲಿ ಐದು ಗ್ಯಾರಂಟಿಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾರಿಯಾಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ವಿಚಾರದಲ್ಲಿ ಜನತೆಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಂಡಿಸಿದ್ದ ನಿಲುವಳಿ ಸೂಚನೆ ಕುರಿತು ಚರ್ಚೆಯ ಸಮಯದಲ್ಲಿ ಮಧ್ಯಪ್ರವೇಶಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದರು.

ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲದ ಬಿಜೆಪಿ ರಾಜ್ಯ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾರದೆ ಸುಳ್ಳು ಆರೋಪ ಮಾಡುವುದರಲ್ಲಿ ನಿರತವಾಗಿದೆ ಎಂದು ದೂರಿದರು.

ಇದಕ್ಕೂ ಮುನ್ನ 5 ಗ್ಯಾರಂಟಿಗಳ ಅನುಷ್ಠಾನ ವಿಷಯ ಸದನದಲ್ಲಿ ಪ್ರತಿಧ್ವನಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ಏರಿದ ದನಿಯಲ್ಲಿ ಮಾತಿನ ಚಕಮಕಿ ನಡೆದ ಪ್ರಸಂಗ  ಜರುಗಿತು.

ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಂಡಿಸಿದ  ಬಿಜೆಪಿ ಹಿರಿಯ ಸದಸ್ಯ ಆರ್.ಅಶೋಕ್  ವಿಷಯ ಪ್ರಸ್ತಾಪಿಸುತ್ತಿದ್ದಂತೆ ಎದ್ದು ನಿಂತ ಇಂಧನ ಸಚಿವ ಕೆ.ಜೆ.ಜಾರ್ಜ್, ವಿರೋಧ ಪಕ್ಷದ ನಾಯಕರು ಇದ್ದಿದ್ದರೆ ಮಾರ್ಗದರ್ಶನ ಮಾಡುತ್ತಿದ್ದರು. ನಿಮಗೆ ವಿರೋಧ ಪಕ್ಷದ ನಾಯಕನೇ ಇಲ್ಲ. ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದರು.

ಆಗ ಅಶೋಕ್ ಅವರು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳುವುದು ನಮಗೆ ಸೇರಿದ್ದು, ನೀವು ಮುಖ್ಯಮಂತ್ರಿ ಆಯ್ಕೆ ಮಾಡಿಕೊಳ್ಳಲು ನಾಲ್ಕೈದು ದಿನ ತೆಗೆದುಕೊಂಡಿರಿ ಎಂದರು.

ಆಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯ ಸದಸ್ಯ ವಿ.ಸುನೀಲ್‍ಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಈಗ ಷರತ್ತು ಹಾಕಿ ಆದೇಶ ಹೊರಡಿಸಿದ್ದೀರಿ ಎಂದರು. ಆಗ ಮಧ್ಯಪ್ರವೇಶಿಸಿದ ಬಸವನಗೌಡ ಪಾಟೀಲ್, ಅವರ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೇನು, ಮಾಡುತ್ತಿರುವುದೇನು ಎಂದು ಪತ್ರಿಕೆಯೊಂದನ್ನು ಪ್ರದರ್ಶಿಸಿದರು.

ಮೋಸ ಮಾಡುತ್ತಿದೆ: ಪೂರ್ವಭಾವಿ ಚರ್ಚೆ ಮುಂದುವರಿಸಿ ಮಾತನಾಡಿದ ಆರ್ ಅಶೋಕ್, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಗೊಂದಲದ ಗ್ಯಾರಂಟಿಯಾಗಿದೆ. ಜನರಿಗೆ ಗ್ಯಾರಂಟಿ ಪ್ರಯೋಜನ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತುಗಳಿಲ್ಲದೆ 5 ಗ್ಯಾರಂಟಿಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಈಡೇರಿಸುವುದಾಗಿ ಹೇಳಿದ್ದರು. ಈಗ ಷರತ್ತು ಹಾಕುತ್ತಿದ್ದಾರೆ. 60 ದಿನವಾದರೂ ಗ್ಯಾರಂಟಿ ಅನುಷ್ಠಾನವಾಗಿಲ್ಲ. ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. 5 ಗ್ಯಾರಂಟಿಯನ್ನು ಜನರಿಗೆ ಕೊಟ್ಟ ಮೇಲೆ ಇಲ್ಲಿ ಕೂರಬೇಕು. ಅಲ್ಲಿಯವರೆಗೂ ಕೂರುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳು ರಾಜ್ಯದ ಪಾಲಿಗೆ ದೌರ್ಭಾಗ್ಯವಾಗಿದೆ. 5 ಗ್ಯಾರಂಟಿ ಕೊಟ್ಟು ಮೋಸ ಮಾಡುತ್ತಿದೆ. ಎಲ್ಲ ಕಡೆ ಚೆಕ್‍ಪೋಸ್ಟ್ ಹಾಕಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದೇನು? ಅನುಷ್ಠಾನ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದರು. ಜನರಿಗೆ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿ ಕೊಡುತ್ತೇವೆ ಎಂದು ಆಮಿಷವೊಡ್ಡಿ ಮರಳು ಮಾಡುವ ರೀತಿಯಲ್ಲಿ ಭರವಸೆ ನೀಡಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನೆಬಾಗಿಲಿಗೆ ಗ್ಯಾರಂಟಿ ನೀಡುವುದಾಗಿ ಭರವಸೆ ನೀಡಿತ್ತು. ಈಗ ಸರ್ಕಾರಿ ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಷರತ್ತು ಹಾಕಿದೆ. ಬಸ್ಸಿನ ಕಿಟಕಿ ಬಾಗಿಲುಗಳು ಕಿತ್ತು ಬರುತ್ತಿದೆ. ಹವಾನಿಯಂತ್ರಿತ ಬಸ್‍ನಲ್ಲಿ ಅವಕಾಶವಿಲ್ಲ. ಆದರೆ ಎಲ್ಲ ಬಸ್‍ನಲ್ಲಿ ಉಚಿತ ಎಂದು ಹೇಳಿದ್ದರು. ಆಟೋದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು. 

ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದರು. ಈಗ ಷರತ್ತು ಹಾಕುತ್ತಿದ್ದಾರೆ. ಗ್ಯಾರಂಟಿಗೆ ವಾರಂಟಿ ಇಲ್ಲದಂತಾಗಿದೆ. ಈಗ ಒಂದು ವರ್ಷದ ಸರಾಸರಿ ನೆಪ ಹೇಳುತ್ತಿದ್ದಾರೆ. ಉಚಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಜನರಿಗೆ ಮಾಡುತ್ತಿರುವುದು ಮೋಸವಲ್ಲವೇ ಎಂದು ಪ್ರಶ್ನಿಸಿದರು.

ನಿರುದ್ಯೋಗಿ ಪದವೀಧರ ಮತ್ತು ಡಿಫ್ಲೋಮೋದಾರರಿಗೆ ಯುವನಿಧಿಯಡಿ ಭತ್ಯೆ ಕೊಡುವುದು ಪ್ರಾರಂಭವೇ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಈಗ ಅತ್ತೆಗಾ, ಸೊಸೆಗಾ ಎನ್ನುತ್ತಿದ್ದಾರೆ? ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಹೊರತುಪಡಿಸಿ ನೀವು ಭರವಸೆ ನೀಡಿದಂತೆ 10 ಕೆಜಿ ನೀಡಬೇಕೆಂದು ಆಗ್ರಹಿಸಿದರು. 

ನಂತರ ಈ ಕುರಿತಂತೆ  ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕಾನೂನು ಸಚಿವರು ಮಾಡಿದ ಸಲಹೆಗೆ ಸಭಾಧ್ಯಕ್ಷರು ಸಮ್ಮತಿಸುವುದರೊಂದಿಗೆ ವಿವಾದಕ್ಕೆ ತೆರೆ ಬಿತ್ತು.

Leave a Reply