ಬಿಜೆಪಿಗೆ ವಿರೋಧ ಪಕ್ಷದ ನಾಯಕನ ‘ಗ್ಯಾರಂಟಿ’ಯೂ ಇಲ್ಲ!

3 years ago

#hkpatil #BJP #guarantee #opposition #leader #kpcc #congress

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೆ ಮೊದಲ ಅಧಿವೇಶನ ನಡೆಯುತ್ತಿರುವುದು ದುರ್ದೈವ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸದನದಲ್ಲಿ ಯಾವಾಗಲೂ ವಿಪಕ್ಷ ನಾಯಕರು ಇದ್ದೇ ಇರುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೇ ರಾಜ್ಯಪಾಲರ ಭಾಷಣ ಮಾಡಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದರು.

ವಿಪಕ್ಷ ನಾಯಕನ ಆಯ್ಕೆ ಬಿಜೆಪಿಯ ವಿಚಾರ ಇರಬಹುದು. ಆದರೆ ಸದನದ ಘನತೆ ಮತ್ತು ಸಂಸ್ಕೃತಿ, ಪರಂಪರೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.

ಕಪ್ಪು ಚುಕ್ಕೆ: ಇದೇ ವೇಳೆ ಬಿಜೆಪಿಯಿಂದ ವಿಧಾನಸಭೆ ವಿಪಕ್ಷ ನಾಯಕರ ಆಯ್ಕೆಯಾಗಿಲ್ಲದಿರುವುದರ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌, ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು ಎಂದಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದು, ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ ಗೌರವಿಸುತ್ತಿಲ್ಲ. ಬಿಜೆಪಿಗೆ ವಿರೋಧ ಪಕ್ಷದ ನಾಯಕನ ‘ಗ್ಯಾರಂಟಿ’ಯೂ ಇಲ್ಲ! ವಿರೋಧ ಪಕ್ಷದ ನಾಯಕನಿಲ್ಲದೆ ಸದನ ಕಲಾಪ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಈ ಕಪ್ಪು ಚುಕ್ಕೆಯನ್ನಿಟ್ಟಿದ್ದು ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ವಿರೋಧ ಪಕ್ಷದ ನಾಯಕನ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಎಂದು ಬಿಜೆಪಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ಫಿಕ್ಸ್ ಮಾಡಲಾಗಿತ್ತು, ವಿರೋಧ ಪಕ್ಷದ ನಾಯಕನ ಹುದ್ದೆ ಎಷ್ಟಕ್ಕೆ ಬಿಕರಿಯಾಗುತ್ತಿದೆ? ಆ ಚೌಕಾಶಿ ವ್ಯವಹಾರಕ್ಕಾಗಿಯೇ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆಯೇ? ಈ ಬಗ್ಗೆ ಕರ್ನಾಟಕ ಬಿಜೆಪಿ ಉತ್ತರಿಸಬೇಕು ಎಂದು ಆಗ್ರಹಿಸಿದೆ.

ಸದನ ಪ್ರಾರಂಭವಾಗುವ ಮೊದಲೇ ವಿರೋಧ ಪಕ್ಷದ ನಾಯಕನನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದು ಗ್ಯಾರಂಟಿ ನೀಡಿದ್ರಿ. ನಿಮ್ಮ ಹೈಕಮಾಂಡ್ ಕನಿಷ್ಠ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲೂ ನಿಮಗೆ ಗ್ಯಾರಂಟಿ ನೀಡದಿರುವುದು ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ಶೋಚನಿಯ ಸಂಗತಿ. ಪಾಪ ಎಂದು ಬಿಜೆಪಿಯ ಹಳೇ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ಅನ್ನು ಶೇರ್‌ ಮಾಡಿರುವ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

Leave a Reply