ಮೈಸೂರು – ಬೆಂಗಳೂರು ಹೆದ್ದಾರಿ ಎಂಬ ನರಕದ ದಾರಿ

3 years ago

#MysoreBangaloreHighway #road #hell #jagadishkoppa

ಇಡೀ ಕರ್ನಾಟಕದಲ್ಲಿ ಮೈಸೂರು – ಬೆಂಗಳೂರು ನಡುವಿನ ರಸ್ತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಸುಂದರ ರಸ್ತೆಯಾಗಿ ಮಾರ್ಪಟ್ಟಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಹುಣಸೆ, ನೇರಳೆ, ಆಲದ ಮರಗಳು ಬೃಹತ್ತಾಗಿ ಬೆಳೆದು ರಸ್ತೆಗೆ ಚಾಮರ ಹಿಡಿದಿವೆ ಎಂಬಂತೆ ಕಾಣುತ್ತಿತ್ತು.

ರಸ್ತೆಯ ಮಧ್ಯೆ ಪ್ರಯಾಣಿಕರು ಮರದ ಕೆಳಗೆ ನಿಂತು ಸುಧಾರಿಸಿಕೊಳ್ಳುವ ವಾಡಿಕೆಯಿತ್ತು. ಮರಗಳು ಲಕ್ಷಾಂತರ ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದವು. ಜೊತೆಗೆ ನಮ್ಮ ರೈತರ ಹೊಲದ ಬೆಳೆಗಳಿಗೆ ಹಬ್ಬುತ್ತಿದ್ದ ಕ್ರಿಮಿಕೀಟಗಳನ್ನು ತಿಂದು ರೋಗ ಹರಡದಂತೆ ಪರೋಕ್ಷವಾಗಿ ಕಾರಣವಾಗಿದ್ದವು.

ಈಗಿನ ರಸ್ತೆ ನೋಡಿ.  ಬಿರು ಬೇಸಿಗೆ ಅಥವಾ ಮಳೆಗಾಲದಲ್ಲಿ ಯಾವುದೇ ಪ್ರಯಾಣಿಕರು ಕಾರು, ಬೈಕ್ ನಿಲ್ಲಿಸಿ ಆಶ್ರಯ ಪಡೆಯಲು ತಾಣವುಂಟೆ? ಆಧುನಿಕ ಅಭಿವೃದ್ಧಿಯ ವಿಕೃತಿಗೆ ಈ ರಸ್ತೆ ಸಾಕ್ಷಿ ಎಂಬಂತಿದೆ. 118 ಕಿ.ಮಿ. ಉದ್ದದ ಈ  ರಸ್ತೆಗೆ  830 ಕೋಟಿ ವಿನಿಯೋಗಿಸಲಾಗಿದೆ. ಇನ್ನಷ್ಟು ಬಂಡವಾಳ ಅಗತ್ಯವಿದೆ.

ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸಿದ 158 ಮಂದಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವರದಿ ಪ್ರಕಟವಾದ ದಿನವೇ ಮತ್ತಿಬ್ಬರು ಅಸುನೀಗಿದರು. ಈ ನರಕದ ರಸ್ತೆ ಹಾಯ್ದು ಹೋಗಿರುವ ಹಳ್ಳಿಗಳಲ್ಲಿ ಜನರ ಬದುಕು ಸಹ  ನರಕವಾಗಿದೆ.

ರಸ್ತೆಯ ಎಡಬದಿಯಲ್ಲಿ ಮನೆ ಇದ್ದು ಬಲಬದಿಯ ತನ್ನ ಜಮೀನಿಗೆ ರೈತರು ತಮ್ಮ ಸಾಕುಪ್ರಾಣಿಗಳು ಅಥವಾ ಎತ್ತಿನ ಗಾಡಿಯಲ್ಲಿ ಹೋಗಬೇಕಾದರೆ ಕನಿಷ್ಠ ಐದಾರು ಕಿಲೊಮೀಟರ್ ಬಳಸಿ ಬರಬೇಕು.

ಈಗ ಹಳ್ಳಿಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುತ್ತೀವಿ ಎಂದು ಹೇಳುತ್ತಿದ್ದಾರೆ. ಈ ಅಯೋಗ್ಯರಿಗೆ ಗ್ರಾಮೀಣ ಬದುಕು ಹೇಗಿರುತ್ತದೆ ಎಂಬ ಕನಿಷ್ಠ ಪ್ರಜ್ಞೆ ಇಲ್ಲ. ನಮ್ಮಗಳ ಕುರಿ, ಮೇಕೆಗಳು, ಹಸು, ಎಮ್ಮೆಗಳನ್ನು ಮೇಲು ಸೇತುವೆಯಲ್ಲಿ ದಾಟಿಸಲು ಸಾಧ್ಯವೆ?

ಈ ರಸ್ತೆಯುದ್ದಕ್ಕೂ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸುವ ಒಬ್ಬ ಸಂಸದ ಅಥವಾ ಶಾಸಕ ಈವರೆಗೆ ಈ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿಲ್ಲ. ಅವರ ಆಸಕ್ತಿ ಮತ್ತು ಗಮನ ರಸ್ತೆಯ ಗುತ್ತಿಗೆದಾರ ನೀಡುವ ಎಂಜಲು ಅಥವಾ ಭಿಕ್ಷೆಯ ಹಣದ ಮೇಲೆ ಕೇಂದ್ರೀಕೃತವಾಗಿದೆ.

ರಸ್ತೆಯಲ್ಲಿ ದಿನ ನಿತ್ಯ ನೂರಾರು ಪ್ರಾಣಿಗಳು, ನಾಯಿ, ಮಂಗ, ನರಿಗಳು, ಪಕ್ಷಿಗಳು ನೂರು ಕಿ.ಮಿ. ವೇಗದಲ್ಲಿ ಚಲಿಸುವ ವಾಹನಕ್ಕೆ ಸಿಲುಕಿ ಸಾಯುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿದ ಪ್ರತಿಫಲವಾಗಿ ಆಹಾರ ಅರಸಿ ಅತ್ತ ಇತ್ತ ಓಡಾಡುತ್ತಿದ್ದ ಪ್ರಾಣಿಗಳು, ಹಾವುಗಳು ಸೇರಿದಂತೆ ಎಲ್ಲವೂ  ಈಗ ಅತಂತ್ರವಾಗಿವೆ.

ರಸ್ತೆಯ ಬದಿ ಸುಂಕವಿಲ್ಲದೆ ಚಲಿಸಬಹುದಾದ ಪೂರ್ಣ ಪ್ರಮಾಣದ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ. ಇದರಿಂದಾಗಿ ಹತ್ತಿಪ್ಪತ್ತು ಕಿಲೊಮೀಟರ್ ಚಲಿಸುವ ಹಳ್ಳಿಗರೂ ಸಹ ದುಬಾರಿ ಶುಲ್ಕ ಪಾವತಿಸಬೇಕಾಗಿದೆ.

ಈಗಿನ ಸರ್ಕಾರಗಳು ಮತ್ತು ರಾಜಕಾರಣಿಗಳಿಗೆ ರಸ್ತೆ ಮತ್ತು ಸೇತುವೆಗಳು ಹೇರಳ ಹಣ ತಂದುಕೊಡುವ ಅಕ್ಷಯ ಪಾತ್ರೆಗಳಾಗಿವೆ.

ಈ ಕುರಿತಾಗಿ ಮೊನ್ನೆ ಮಂಡ್ಯದಲ್ಲಿ ಸಮಾನ ಮನಸ್ಕ ಮಿತ್ರರ ಜೊತೆ ಮಾತನಾಡಿದೆ. ಜುಲೈ ಮೊದಲವಾರ ಸಭೆ ಕರೆದು ಇಡೀ ರಸ್ತೆಯುದ್ದಕ್ಕೂ ಇರುವ ಊರುಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ವೀಸ್ ರಸ್ತೆಗೆ ಒತ್ತಾಯಿಸಲು ತೀರ್ಮಾನಿಸಬೇಕಾಗಿದೆ.

ಉಳ್ಳವರು ಕುಡಿದ ನೀರು ಹೊಟ್ಟೆಯಲ್ಲಿ ಅಲುಗಾಡದಂತೆ ಚಲಿಸಲು ರಸ್ತೆ ನಿರ್ಮಾಣ ಮಾಡಿ, ಇಲ್ಲದವರ ಹೊಟ್ಟೆಯ ಅನ್ನ ಕಸಿಯುವ ಈ ದುಷ್ಕೃತ್ಯಕ್ಕೆ ಈಗ ಪಾಠ ಕಲಿಸಬೇಕಾಗಿದೆ. ಇಂಡಿಯಾದಲ್ಲಿ ಇದಕ್ಕೆ ಮಂಡಿಯಾ ಜನರೇ ಸೂಕ್ತ ಎಂದು ನನ್ನ ಬಲವಾದ ನಂಬಿಕೆ. ಅದಕ್ಕಾಗಿ  ಯೋಜನೆ ರೂಪಿಸುತ್ತಿದ್ದೀನಿ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply