ರಾಮ ರಾಜ್ಯ ಆಳಿದ್ರೂ ರಾಗಿ ಬೀಸೋದು ಏನೂ ತಪ್ಪೋದಿಲ್ಲ

3 years ago

BESCOM ಬಿಲ್ ಬಂದಿದೆ. ಪ್ರತಿ ತಿಂಗಳು ಸರಿಯಾಗಿ 15ನೇ ತಾರೀಕು ಮೀಟರ್ ಓದಲು ಬರುತ್ತಿದ್ದ ಸಿಬ್ಬಂದಿ ಈ ತಿಂಗಳು 22ಕ್ಕೆ ಬಂದರು. ನನ್ನೆದುರೆ ಬರೆದುಕೊಂಡರು . ಬಿಲ್ ನಲ್ಲಿ ಮೀಟರ್ ತೋರಿಸುತ್ತಿದ್ದ ಮಾಪನವನ್ನು ಸರಿಯಾಗಿ ನಮೂದಿಸಿದ್ದಾರೆ. ಆದರೆ ಬಿಲ್ ಮಾಡಿದ ದಿನಾಂಕ 15.6.2023 ಎಂದೇ ಬರೆದಿದ್ದಾರೆ. ಬಿಲ್ ನೋಡಿದ ನಂತರ ಗೊತ್ತಾಯ್ತು. ಪ್ರತಿ ತಿಂಗಳು 200 ಯೂನಿಟ್ ಒಳಗೇ ಬರುತ್ತಿತ್ತು. ಈಗ 286 ಯೂನಿಟ್ ತೋರಿಸಿದೆ. 30 ದಿನಗಳ ಬದಲು 38 ದಿನಗಳ reading. 2873 ರೂಪಾಯಿ ಹಾಕಿದ್ದಾರೆ.

ಹೊಸ ದರಗಳ ಜಾರಿಯ ನಂತರ ಎರಡೇ slab tariff ಇದೆ ಎಂದು ಪ್ರಚಾರ ಮಾಡಲಾಗಿತ್ತು. ಮೊದಲ 100 ಯೂನಿಟ್ ಗೆ 4.75 ನಂತರದ ಎಲ್ಲ ಯೂನಿಟ್ ಗೆ ರೂ 7 ಎಂದು ನೀವು ಭಾವಿಸಿದ್ದರೆ ತಪ್ಪು. ನೂರು ಯೂನಿಟ್ ಮೀರಿದ ನಂತರ ಎಲ್ಲದಕ್ಕೂ ರೂ. 7/- ಅಂದರೆ 100 ಯೂನಿಟ್ ಆದರೆ 475/- ಆದರೆ ನಿಮ್ಮ ಬಳಕೆ 101ಯೂನಿಟ್ ಆದರೆ 707 ರೂ. ಒಂದು ಯೂನಿಟ್ ಹೆಚ್ಚು ಬಳಕೆ ಮಾಡಿದ ತಪ್ಪಿಗೆ 225 ರೂ ತೆರಬೇಕು. ಇದನ್ನು ಅಧಿಕಾರಿಗಳಿಂದಲೇ ಸ್ಪಷ್ಟಪಡಿಸಿಕೊಂಡಿದ್ದೇನೆ.

ಮತ್ತೊಂದು, ನಿಮ್ಮ ಬಳಕೆ ಸರಾಸರಿ ತಿಂಗಳಿಗೆ 183 ಯೂನಿಟ್ ಮೀರಿದರೆ ನಿಮಗೆ 200 ಯೂನಿಟ್ ಉಚಿತ ವಿದ್ಯುತ್ ಸಿಗದು. ಹಿಂದಿನ ಏಪ್ರಿಲ್ 2022 ರಿಂದ ಮಾರ್ಚ್ 2023 ರವರೆಗೆ ಬಳಸಿದ ಒಟ್ಟು ಯೂನಿಟ್ಗಳ ಮಾಸಿಕ ಸರಾಸಾರಿ + ಅದರ ಶೇ 10 ಕೂಡಿಸಿದಾಗ 200 ಒಳಗೆ ಇದ್ದರೆ ಗೃಹಜ್ಯೋತಿಗೆ ಅಂದ್ರೆ 200 ಯೂನಿಟ್ ವಿದ್ಯುತ್ ಪಡೆಯಲು ಅರ್ಹರು. ಇಲ್ಲದಿದ್ದರೆ ಪೂರ್ಣ ಹಣ ಪಾವತಿಸಬೇಕು. ಇದು ಆಗಸ್ಟ್ ತಿಂಗಳಿಂದ ಜಾರಿಗೆ ಬರುತ್ತದೆ.

ಸರ್ಕಾರದ ಯೋಜನೆಗಳೇನೋ ಸರಿ. ಆದರೆ ಸರ್ಕಾರದ ಭಾಷೆ, ವಿವರಣೆ ಮತ್ತು ರಾಜಕಾರಣಿ, ಅಧಿಕಾರಿಗಳ ನುಡಿಗಳಲ್ಲಿ ಯಾಕೆ ಸ್ಪಷ್ಟತೆ ಇರುವುದಿಲ್ಲ? ಯಾಕೆ ಗೊಂದಲ ಸೃಷ್ಟಿಸುತ್ತಾರೆ? ಇದು ಅಸಲಿ ಪ್ರಶ್ನೆ.

ಸರ್ಕಾರದಲ್ಲಿ ನಾನು ಕೆಲಸ ಮಾಡಿ ಪಡೆದ ಅನುಭವದ ಕೆಲವನ್ನು ಹೇಳಲು ಈ ಬೆಸ್ಕಾಂ ಬಿಲ್ ಒಂದು ನೆಪ. (ಪೆನ್ಷನ್ ಪಡೆಯುತ್ತಿರುವ ನಾನು ಗೃಹಯೋಜನೆಗೆ ನೋಂದಾಯಿಸುವುದಿಲ್ಲ.) ಸರ್ಕಾರದ ಮತ್ತು ಸರ್ಕಾರ ನಡೆಸಲು ಇಚಿಸುವವರ ಭಾಷೆ ಒಂದು ವಂಚನೆಯ ಭಾಷೆ. ಅದು ಆದಷ್ಟೂ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಯತ್ನಿಸುತ್ತದೆ. ಪ್ರಜೆಗಳು ದಿಕ್ಕುತಪ್ಪಿದಷ್ಟು ಆಳ್ವಿಕೆ ಸುಲಭ ಎಂದು ನಂಬುತ್ತದೆ. ಒಮ್ಮೊಮ್ಮೆ ಅದು ಸೊಕ್ಕಿನ ಭಾಷೆ. ಬಹಳಷ್ಟು ಬಾರಿ ಟಕ್ಕಿನ ಭಾಷೆ. ಪ್ರಜೆಗಳೇ ಪ್ರಭುವಾದರೂ ಭಾಷೆಯಲ್ಲಿ ನಯವಿರದು. ಪ್ರಜೆಯನ್ನು ಬೆದರಿಸುವ ದನಿಯಿರುತ್ತದೆ. (ಅಧಿಸೂಚನೆ, ಆದೇಶಗಳನ್ನು nodi).ಆಸ್ಪಷ್ಟತೆಯೇ ಅದರ ಲಕ್ಷಣ. ಹಲವು ವ್ಯಾಖ್ಯೆಗಳು ಸಾಧ್ಯವಾಗುವ ನ್ಯಾಯಾಂಗದ ಪರಿಭಾಷೆ ಮುಕ್ಕಾಲು ಪಾಲು ಆಡಳಿತ ಭಾಷೆಗಿರುತ್ತದೆ. ಅದು ಕನ್ನಡ ಆದರೂ ಅಷ್ಟೇ. ಇಂಗ್ಲಿಷ್, ಹಿಂದಿ ಆದರೂ ಅಷ್ಟೇ. ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಭಾಷೆ ಆಡಳಿತದಲ್ಲಿ ಅಡಕವಾದಾಗ ಗೊಂದಲ ನಿವಾರಣೆಯಗಬಹುದೇನೋ. ಆದರೆ ಯಾರಿಗೂ ಅದು ಬೇಕಿಲ್ಲ. ಮುಖ್ಯವಾಗಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ.

ಇನ್ನು ಸರ್ಕಾರದ ಪ್ರಚಾರದ ಭಾಷೆ ಸುಳ್ಳುಗಳ ಗೋದಾಮು. ನಾನೇ ಎಂತೆಥದೋ ಗುಣವಾಚಗಳನ್ನು ಬಳಸಿ ಸಾಕಷ್ಟು ಬರೆದಿದ್ದೇನೆ. ಸುಳ್ಳು ಬರೆದೆ ಸಂಬಳ ಪಡೆದ ದಾಖಲೆ. ಸಾರ್ವಜನಿಕ ಸಂಸ್ಥೆಗಳ ಇಲ್ಲದ image ಅನ್ನು ಬೂಸ್ಟ್ ಮಾಡುವ ಕೆಲಸ. ಪರ್ಫಾರ್ಮೆನ್ಸ್ ಶುಡ್ ಬಿ ದಿ ಪಬ್ಲಿಸಿಟಿ ಅಂತ ಒಬ್ಬ ಹಿರಿಯ ಅಧಿಕಾರಿಗೆ ಹೇಳಿದಾಗ ಅವರು ನಕ್ಕು Dont live in Utopia ಅಂದ್ರು.

ಮೂರು ದಶಕಕ್ಕೂ ಹೆಚ್ಚು ಸರ್ಕಾರದಲ್ಲಿ ಕೆಲಸದಲ್ಲಿದ್ದ ನನಗೆ ಸರ್ಕಾರಿ ಕೆಲಸ ಎಂದರೆ ಏನು ಅಂತ ಸಂಕ್ಷಿಪ್ತವಾಗಿ ಹೇಳಿ ಅಂದ್ರೆ – ಒಂದು ವರ್ಷದ ಅವಧಿಯಲ್ಲಿ ಆರು ತಿಂಗಳು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ಹೆಣಗುವುದು. ಇನ್ನು ಆರು ತಿಂಗಳು ಮುಂದಿನ ಆರು ತಿಂಗಳಿಗೆ ಸರಿಪಡಿಸಲು ಬೇಕಾದ ತಪ್ಪುಗಳನ್ನು ಮಾಡುವುದು.

ಈಗ ಮತ್ತೆ ಹಿಂದಕ್ಕೆ ಬರುವುದಾದರೆ ಪ್ರಭುತ್ವದ ನುಡಿಯನ್ನು ತುಂಬಾ ಸೀರಿಯಸ್ ಆಗಿ ತಗೋಬಾರ್ದು. ನೋಡಿ ನಾವೆಲ್ಲ ಬಿಜೆಪಿ ಪಕ್ಷ ತನ್ನ ದುರಾಡಳಿತ, ಮಾಡ, ಸೊಕ್ಕಿನ ಭಾಷೆಯ ವಿರುದ್ಧ ಜನ ತೀರ್ಪು ಕೊಟ್ಟರು ಅಂದ್ರೆ ಬಿಜೆಪಿ ನಾಯಕರು, ಮಾಧ್ಯಮಗಳು ಗ್ಯಾರಂಟಿ ಭಾಗ್ಯದಿಂದ ಕಾಂಗ್ರೆಸ್ ಗೆಲ್ತು ಅಂತ narrative ಸೃಷ್ಟಿ ಮಾಡಿವೆ. ದುರಾದೃಷ್ಟ ಅಂದ್ರೆ ಕಾಂಗ್ರೆಸ್ ನಾಯಕರೂ ಅದನ್ನೇ ನಂಬಿರುವುದು. ರಾಮ ರಾಜ್ಯ್ ಆಳಿದ್ರೂ ರಾಗಿ ಬೀಸೋದು ಏನೂ ತಪ್ಪೋದಿಲ್ಲ. ಬೆಸ್ಕಾಂ ಬಿಲ್ ಕಟ್ಟಿ. 🙄

– ಕೆ.ಪುಟ್ಟಸ್ವಾಮಿ

Leave a Reply