ಬೆಂಗಳೂರು: ರಾಜ್ಯದ ಹೆಮ್ಮೆಯ ಪ್ರತೀಕವಾದ ಕೆಎಂಎಫ್ ವಾರ್ಷಿಕವಾಗಿ ಸುಮಾರು 20 ಸಾವಿರ ಕೋಟಿ ರೂ.ಗಳ ವಹಿವಾಟು ಹೊಂದಿರುವ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ತಮ್ಮ ಆಡಳಿತ ಅವಧಿಯಲ್ಲಿ ಸಂಸ್ಥೆಯ ಉತ್ಕೃಷ್ಟತೆಯನ್ನು ಹೆಚ್ಚಿಸುವ ಹಾಗೂ ಪಾರದರ್ಶಕ ಆಡಳಿತ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ನೂತನ ಅಧ್ಯಕ್ಷ ಭೀಮಾ ನಾಯಕ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ಅವರು, ಈ ಮೂಲಕ ರಾಜ್ಯದ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಸಮಸ್ತ ಅಧಿಕಾರಿಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸರ್ಕಾರದ ಬೆಂಬಲ ಹಾಗೂ ನಿರ್ದೇಶಕರ ಸಹಕಾರದಿಂದ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಿದ್ದೇನೆ. ಮುಂಬರುವ ಹೊಸ ಅಧ್ಯಕ್ಷರು ಸಂಸ್ಥೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲಿ ಎಂದು ಅವರು ಶುಭ ಹಾರೈಸಿದರು.
ಕೆಎಂಎಫ್‍ನ ಬಲವರ್ಧನೆಗಾಗಿ ನನ್ನ ಆಡಳಿತಾವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಸಂಸ್ಥೆಗೆ ಎಲ್ಲಿಯೂ ಕಪ್ಪು ಚುಕ್ಕೆ ಬರದಂತೆ ಉತ್ತಮ ಆಡಳಿತ ನಡೆಸಿದ್ದೇನೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಕೆಎಂಎಫ್‍ನಿಂದ ಅಗತ್ಯ ಸಹಾಯ ನೀಡುವ ಮೂಲಕ ಸಂಸ್ಥೆಯ ಹಿರಿಮೆ ಹೆಚ್ಚಿಸುವ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದರು.



