ಪುರಿಯ ಜಗನ್ನಾಥನ ರಥಯಾತ್ರೆ

3 years ago

ನಮ್ಮ ದಕ್ಷಿಣ ಭಾರತದಲ್ಲಿ ತಿರುಪತಿಯ ತಿಮ್ಮಪ್ಪ ಎಷ್ಟು ಪ್ರಸಿದ್ಧನೋ, ಅಷ್ಟೇ ಪ್ರಮಾಣದಲ್ಲಿ ಓಡಿಸ್ಸಾದ ಕಡಲ ತೀರದ ನಗರದ ಪುರಿ ಪಟ್ಟಣದ ಜಗನ್ನಾಥನೂ ಸಹ ಪ್ರಸಿದ್ಧ. ತಿರುಪತಿ ತಿಮ್ಮಪ್ಪ, ಶಬರಿಮಲೆ ಅಯ್ಯಪ್ಪ, ಶಿರಡಿ ಸಾಯಿಬಾಬ, ಇವರೆಲ್ಲರೂ ಒಂದು ರೀತಿಯಲ್ಲಿ ನಮ್ಮ ಭಾರತೀಯ ಚಿತ್ರರಂಗದ ಆಯಾ ಭಾಷೆಯ ಸೂಪರ್ ಸ್ಟಾರ್ ಗಳು ಇದ್ದಂತೆ.

ಪ್ರತಿ ವರ್ಷ ಪುರಿಯಲ್ಲಿ ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯುವ ಜಗನ್ನಾಥ ರಥಯಾತ್ರೆ ಅತ್ಯಂತ ಪ್ರಸಿದ್ಧವಾದುದು. ಹನ್ನೆರೆಡನೇ ಶತಮಾನದ  ಈ ದೇವಾಲಯದ ಮುಂದೆ ಸುಮಾರು ಐನೂರು ಅಡಿ ಅಗಲದ ಹಾಗೂ ದೇವಾಲಯದಿಂದ ಕಡಲ ತೀರದವರೆಗೆ ಒಂದೂವರೆ ಕಿಲೊಮೀಟರ್ ಉದ್ದದ ರಸ್ತೆ ಇರುವುದು ವೈಶಿಷ್ಟ. ( ರಸ್ತೆಗೆ ರಂಗೋಲಿ ಹಾಕಿರುವ ಚಿತ್ರ ಗಮನಿಸಿ)

ಪುರಿಯ ಜಗನ್ನಾಥನ ಮತ್ತೊಂದು ವಿಶೇಷವೆಂದರೆ, ಈತನು ಓಡಿಸ್ಸಾದ ಬುಡಕಟ್ಟು ಜನಾಂಗಗಳ ಆರಾಧ್ಯ ದೈವ. ಹಾಗಾಗಿ ವರ್ಷ ಪೂರ್ತಿ ಮಧ್ಯ ಭಾರತದ ವಿವಿಧ ಪ್ರದೇಶಗಳಿಂದ ಸಾವಿರಾರು ಬುಡಕಟ್ಟು ಜನಾಂಗ ಜಗನ್ನಾಥನ ದೇವಾಲಯಕ್ಕೆ ಬಂದು ಹೋಗುತ್ತಾರೆ. ಇಲ್ಲಿನ ದೇವಾಲಯದ ರಸ್ತೆಯಲ್ಲಿ ಸಮುದ್ರ ತೀರದಲ್ಲಿ ಹಾಗೂ ಪುರಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಭಕ್ತರು ಒಂದು ದಿನ ಇದ್ದು ಹೋಗುತ್ತಾರೆ. ಹಾಗಾಗಿ ಪುರಿ ನಗರದಲ್ಲಿ ಉತ್ತಮ ವಸತಿ ವ್ಯವಸ್ಥೆಯ ಹೋಟೆಲ್ ಗಳಿಲ್ಲ. ಪುರಿ ಮತ್ತು ಕೋನಾರ್ಕ್ ಗೆ ಭೇಟಿ ನೀಡುವ ಬಹುತೇಕ ಮಂದಿ ಓಡಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ತಂಗುತ್ತಾರೆ.

ಭುವನೇಶ್ವರದಿಂದ ಕೋನಾರ್ಕ್ ಗೆ 35 ಕಿಲೋಮೀಟರ್, ಪುರಿ ಮತ್ತು ಭುವನೇಶ್ವರ ನಡುವೆ 40 ಕಿಲೊಮೀಟರ್ ದೂರವಿದೆ. ಜೊತೆಗೆ ಕೋನಾರ್ಕ್ ನಿಂದ ಪುರಿಗೆ ಮುವತ್ತು ಕಿಲೊಮೀಟರ್ ಅಂತರವಿದೆ. ಪ್ರತಿ ಐದು ನಿಮಿಷಕ್ಕೆ ಮಿನಿ ಬಸ್ ಗಳು ಸಂಚರಿಸುತ್ತವೆ.

ಜಗನ್ನಾಥನ ರಥಬೀದಿಯ ವಿಶೇಷವೆಂದರೆ, ರಸ್ತೆಯ ಇಕ್ಕೆಲಗಳಲ್ಲಿ ಶ್ರೀಮಂತ ಗ್ರಾಹಕರಿಗಾಗಿ ಅಂಗಡಿಗಳಿಲ್ಲ. ಅಲ್ಲಿ ಇರುವುದು ಕಡ್ಲೆಪುರಿ ( ಚುರುಮರಿ) ಬತಾಸು, ಬೆಲ್ಲದ ಮಿಠಾಯಿ, ಬೋಂಡಾ, ವಡೆ, ಚಹಾ ಅಂಗಡಿಗಳು ಮತ್ತು ಹೆಣ್ಣು ಮಕ್ಕಳಿಗೆ ಗಾಜಿ ನಬಳೆ, ಮಕ್ಕಳ ಆಟಿಕೆ ಸಾಮಾನು, ಬೆಲೂನು ಮತ್ತು ರಸ್ತೆಯಲ್ಲಿ ಗುಡ್ಡೆ ಹಾಕಿಕೊಂಡು ಮಾರುವ ಮಕ್ಕಳ ಉಡುಪುಗಳು ಮಾತ್ರ.

ಭುವನೇಶ್ವರ ಮತ್ತು ಪುರಿಯಲ್ಲಿ ನಮ್ಮ ಪಾಲಿಗೆ ಉಗ್ರಗಾಮಿಗಳಂತೆ ಕಾಡುವವರು ಅಲ್ಲಿನ ದೇವಾಲಯದ ಪಾಂಡ ಹೆಸರಿನ ಪೂಜಾರಿಗಳು. ದೇವಾಲಯ ಪ್ರವೇಶ ಮಾಡುತ್ತಿದ್ದಂತೆ ಮುಖ ನೋಡಿ ವಕ್ಕರಿಸುತ್ತಾರೆ. ಭವಿಷ್ಯ ಹೇಳುವುದರಿಂದ ಹಿಡಿದು ಸಂಕಷ್ಟ ಪರಿಹಾರಕ್ಕೆ ಪೂಜೆಯನ್ನು ಸೂಚಿಸಬಲ್ಲ ಮಹಾನ್ ಪ್ರವೀಣರು ಇವರು. ಇವರಿಂದ ತಪ್ಪಿಸಿಕೊಂಡು ದೇವರ ದರ್ಶನ ಮಾಡಿದರೆ ಭಕ್ತರಿಗೆ ಪರಮಾನಂದ.

ಇಂತಹ ಬೇಸರದ ಸಂಗತಿಯ ನಡುವೆ ಪುರಿ ಹಾಗೂ ಭುವನೇಶ್ವರದಲ್ಲಿ ಸಿಗುವ ಮೀನಿನ ಊಟ ಇಂದಿಗೂ ನನ್ನ ಪಾಲಿಗೆ ಅಮೃತ ಭೋಜನ. ಪುರಿಯ ರೈಲ್ವೆ ನಿಲ್ದಾಣದ ಬಳಿ ಪುಟ್ಟ ಪುಟ್ಟ ಗುಡಿಸಲು ಹೋಟೆಲ್ ಗಳಲ್ಲಿ ಹಾಗೂ ಭುವನೇಶ್ವರ ಮ್ಯೂಸಿಯಂ ಎದುರು ಇರುವ ಬೃಹತ್ತಾದ ಎರಡು ತಗಡಿನ ಶೀಟ್ ನ ಹೋಟೆಲ್ ಗಳು ಹಾಗೂ ಜನನಪಥ್ ರಸ್ತೆಯಲ್ಲಿ ಸದಾ ನಾನು ಉಳಿದುಕೊಳ್ಳುವ ಹೋಟೆಲ್ ಜನಪಥ್ ನಲ್ಲಿ ಸ್ಥಳೀಯ ದೇಶಿ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಮೀನು ಸಾರಿನ ಜೊತೆ  ಹಾಗೂ ಅಲ್ಲಿನ ಗಿಡ್ಡ ತಳಿ ಹಸುಗಳ ಹಾಲಿನಿಂದ ತಯಾರಿಸಿದ ಮೊಸರಿನ ಜೊತೆ ಊಟ ಮಾಡುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ನಾನು ಕೊಲ್ಕತ್ತ, ಡಾರ್ಜಿಲಿಂಗ್ ಹಾಗೂ ಅಸ್ಸಾಂ ಕಡೆ ಪ್ರಯಾಣಿಸುವಾಗ ಸಾಮಾನ್ಯವಾಗಿ ರೈಲಿನಲ್ಲಿ ಹೋಗುತ್ತೇನೆ. ಮಾರ್ಗ ಮಧ್ಯೆ ಒಂದು ದಿನ ಬ್ರೇಕ್ ತೆಗೆದುಕೊಂಡು ಭುವನೇಶ್ವರದಲ್ಲಿ ಉಳಿದುಕೊಂಡು   ಮೀನಿನ ಊಟಕ್ಕಾಗಿ ಒಂದು ದಿನ ಕಳೆಯುವುದು ನನ್ನ ಹವ್ಯಾಸ.

ಜಗನ್ನಾಥನ ರಥಯಾತ್ರೆಯಲ್ಲಿ ಮೂರು ರಥಗಳಿರುತ್ತವೆ. ಜಗನ್ನಾಥ, ಬಲಭದ್ರದೇವ ಮತ್ತು ಸುಭದ್ರದೇವಿ ಈ ಮೂರು ರಥಗಳಲ್ಲಿ ಜಗನ್ನಾಥನ ರಥ ದೊಡ್ಡದು. ಪ್ರತಿವರ್ಷ ಎರಡು ತಿಂಗಳು ಮುಂಚಿತವಾಗಿ ಹೊಸದಾಗಿ ಮರಗಳನ್ನು ಕಡಿದು ತಂದು ರಥಗಳನ್ನು ನಿರ್ಮಿಸುತ್ತಾರೆ. ಇದಕ್ಕಾಗಿ ಒಂದು ಬುಡಕಟ್ಟು ಸಮುದಾಯ ಶ್ರಮಿಸುತ್ತದೆ. ಪ್ರತಿ ವರ್ಷ ನೂರಾರು ಟನ್ ಮರಗಳನ್ನು ರಥಯಾತ್ರೆ ನೆಪದಲ್ಲಿ ಕಡಿಯುವುದು ದುರದೃಷ್ಟಕರ ಸಂಗತಿ. ಈ ಕುರಿತು ಪರಿಸರವಾದಿಗಳು ಪ್ರಶ್ನೆ ಎತ್ತಬೇಕಿದೆ.

ಈ ದಿನ ಮಧ್ಯಾಹ್ನ ಒಂದು ಗಂಟೆಯಲ್ಲಿ ನಡೆಯುತ್ತಿದ್ದ ರಥಯಾತ್ರೆಯ ದೃಶ್ಯವನ್ನು ದ್ರೋಣ್ ಮೂಲಕ ಸೆರೆಹಿಡಿಯಲಾದ ಚಿತ್ರ ಇಲ್ಲಿದೆ. ನಿನ್ನೆ ಮೊನ್ನೆ ರಥಬೀದಿಯನ್ನು ರಂಗೋಲಿ ಚಿತ್ರದ ಮೂಲಕ ಶೃಂಗರಿಸಲಾಯಿತು. ರಸ್ತೆ ತುದಿಯ ಬಲಭಾಗದಲ್ಲಿ ಇರುವ ಶ್ವೇತವರ್ಣದ ಕಟ್ಟಡ ಜಗನ್ನಾಥನ ದೇವಾಲಯವಾಗಿದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply