‘ ಸಿ. ಎಂ. ಸ್ಥಾನದ ಅಕಾಂಕ್ಷಿ ಮಾನ್ಯ ಶಿವಕುಮಾರರವರು ತಮಗೆ ಮುಖ್ಯಮಂತ್ರಿ ಸ್ಥಾನ ಸಿಗಲೇಬೇಕು ಎನ್ನುತ್ತ ತಾವು ಲಿಂಗಾಯತ ಸಮಾಜವನ್ನು ಒಗ್ಗೂಡಿಸಿ, ಅವರ ಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾಗಿ ಹೇಳಿಕೆ ನೀಡಿದ್ದಾರಂತೆ. ಅಲ್ಲದೆ ಧರ್ಮವಡೆದ ಕಾರಣಕ್ಕಾಗಿ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಾಯಿತು ಅದಕ್ಕೆ ಕಾರಣಿಭೂತರು ಮಾನ್ಯ ಸಿದ್ಧರಾಮಯ್ಯನವರು ಎಂದು ಆರೋಪಮಾಡುತ್ತಿದ್ದಾರಂತೆ.
“ಒಂದು ಸುಳ್ಳನ್ನು ಪದೆ ಪದೆ ಹೇಳಿದರೆ ಅದು ಸತ್ಯವಾಗಿ ಪರಿವರ್ತಿತವಾಗುತ್ತದೆಯಂತೆ”. ಇಂತಹ ಪ್ರಹಸನಗಳು ರಾಜಕೀಯದಲ್ಲಿ ಹೊಸದೇನಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ನೂರಾರು ಕಾರಣಗಳಿವೆ. ಅಲ್ಲದೆ ಕಳೆದ ನಾಲ್ವತ್ತು ವರ್ಷಗಳಿಂದ ಕರ್ನಾಟಕದಲ್ಲಿ ಆಡಳಿತ ಪಕ್ಷ ಮರಳಿ ಅಧಿಕಾರಕ್ಕೆ ಬಂದಿಲ್ಲ. ಈ ಎಲ್ಲ ಕಾರಣಗಳನ್ನು ಮುಚ್ಚಿಟ್ಟು ‘ಧರ್ಮ ಒಡೆದ” ಕಾರಣಕ್ಕಾಗಿ ಕಾಂಗ್ರೆಸ್ಗೆ ಸೋಲಾಯಿತು ಎನ್ನುವುದು ಹಸಿ ಸುಳ್ಳು. ಅದು ಮಾನ್ಯ ಶಿವಕುಮಾರರವರ ಪೂರ್ವಾಗ್ರಹ ಪೀಡಿತ ಹೇಳಿಕೆ ಎಂದು ಖಂಡಿತವಾಗಿಯೂ ಹೇಳಬಹುದು. ಇನ್ನೊಂದು ಬದಿಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶೇಕಡ ೨ ಮತಗಳು ಹೆಚ್ಚಾಗಿ ಲಭಿಸಿದ್ದವು, ಹಾಗಿದ್ದಲ್ಲಿ ಅವು ಯಾರ ಮತಗಳು?
ಸೋಲು ಗೆಲುವುಗಳಿಗೆ ಒಂದು ಕಾರಣ (issue) ಅಥವಾ ಒಬ್ಬ ವ್ಯಕ್ತಿ ಬಾಧ್ಯಸ್ತನಾಗುವುದಿಲ್ಲ. ಅನೇಕ ವಿಷಯಗಳು ಅನೇಕ ನಾಯಕರು ಕಾರಣಿಭೂತವಾಗಿರುತ್ತಾರೆ.
ಧರ್ಮದ ವಿಷಯಕ್ಕೆ ಬರುವುದಾದಲ್ಲಿ ಲಿಂಗಾಯತ ಧರ್ಮ ಮಾನ್ಯತೆಯ ಬೇಡಿಕೆ ಶತಮಾನಗಳಷ್ಟು ಹಳೆಯದು. ಇತ್ತೀಚೆಗೆ ಅದನ್ನು (೨೦೧೭) ಪೂನರುಚ್ಚಿಸಿದವರು ವೀರಶೈವ ಮಹಾಸಭಾದವರು. ಅದಕ್ಕೆ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ನಾಯಕರು ಅನುಮೊದಿಸಿದ್ದರು.ಹಿಂದೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಮಾನ್ಯ ಯಡಿಯೂರಪ್ಪನವರು ಸಹ ಅದನ್ನು ಅನುಮೋದಿಸಿ ಹಸ್ತಾಕ್ಷರ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿ ಬಸವ ಅನುಯಾಯಿಯಾದ ಮಾನ್ಯ ಸಿದ್ಧರಾಮಯ್ಯನವರಿಗೆ ಅದೊಂದು ತಮಗೆ ಬಸವಣ್ಣನವರು ಕರುಣಿಸಿದ ಅವಕಾಶವೆಂದು ತಿಳಿದು ಸಾಮಾಜಿಕ ನ್ಯಾಯ ಕೊಡಲು ಕ್ರಮ ಕೈಗೊಂಡರು.
ಧರ್ಮ ಮಾನ್ಯತೆ ನೀಡಿಲು ಮುಂದಾದ ಸಿದ್ಧರಾಮಯ್ಯನವರ ಜನಪ್ರಿಯತೆ ಉತ್ತುಂಗಕ್ಕೆ ಏರುವುದು ಖಂಡಿತ ಎಂದರಿತ ಅವರ ನಿಂದಕರು ಇನ್ನಿಲ್ಲದ ಕಸರತ್ತುಗಳನ್ನು ಮಾಡಲು ಮುಂದಾದರು. ವೈದಿಕ ಮಾಧ್ಯಮಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೇಂದ್ರ ಸರಕಾರದ ಎಂಜಲದ ಸಹಾಯದೊಂದಿಗೆ ಶ್ರೀ ಸಿದ್ಧರಾಮಯ್ಯನವರನ್ನು ಹಣಿಯಲು ಮುಂದಾದವು. ಸುಳ್ಳನ್ನು ಪದೆ ಪದೆ ಸತ್ಯವೆಂದು ಪ್ರತಿಪಾದಿಸುವ ಕೆಲಸ ಪ್ರಾರಂಭವಾಯಿತು. ಜನಪ್ರಿಯವಾಗಬೇಕಾಗಿದ್ದ ವಿಷಯವನ್ನು ತಿರುಚಿ ವಿರೂಪಗೊಳಿಸಿ ಅಪಪ್ರಚಾರ ಪ್ರಾರಂಭಿಸಿದರು. ಸೋಲಿಗೆ ಅನೇಕ ಅನ್ಯ ಕಾರಣಗಳಿದ್ದರೂ ಇದೆ ಪ್ರಮುಖ
ಕಾರಣವೆಂದು ಇಂದಿಗೂ ಬಿಂಬಿಸುತ್ತಿವೆ.
ಧರ್ಮ ಒಡೆದವರು ಎಂಬ ಹಣೆಪಟ್ಟಿಯನ್ನು ಸಿದ್ಧರಾಮಯ್ಯನವರಿಗೆ ನೀಡಿದರು. ಕಾಂಗ್ರೆಸ್ ಪಕ್ಷದಲ್ಲಿ ಇವರಿಗಾಗದವರು ಇದನ್ನು ಅಮಾಯಕ ಹೈ ಕಮಾಂಡಿಗೆ ತಪ್ಪು ಸಂದೇಶ ರವಾನಿಸಿದರು. ಅವರ ವೈಫಲ್ಯಕ್ಕೆ ಧರ್ಮದ ರಾಜಕಾರಣ ಕಾರಣವೆಂದು ಬಿಂಬಿಸಿದವರಲ್ಲಿ ಅದೆ ಕಾಂಗ್ರೆಸ್ ಪಕ್ಷದ ಸ್ವಾರ್ಥ ರಾಜಕಾರಣಿಗಳು. ಅವರಿಗೆ ಅಂದು ಸಿದ್ದರಾಮಯ್ಯನವರನ್ನು ಹಾಗೂ ಪ್ರಭುದ್ಧಮಾನಕ್ಕೆ ಬರುತ್ತಿದ್ದ ಎಂ. ಬಿ. ಪಾಟೀಲರನ್ನು ಕಟ್ಟಿಹಾಕಲು ಒಂದು ಅಸ್ತ್ರ ಬೇಕಾಗಿತ್ತು. ಭಾವನಾತ್ಮಕ ವಿಷಯಗಳು ಭಾರತದ ಚುನಾವಣೆಯಲ್ಲಿ ಬಹಳ ಮಹತ್ವ ಪಡೆಯುತ್ತವೆ. ದಕ್ಷಿಣ ಕರ್ನಾಟಕದ ಒಂದು ಸಮುದಾಯ ಸತತವಾಗಿ ಸಿದ್ಧರಾಮಯ್ಯನವರ ವಿರುದ್ಧ ಕತ್ತಿ ಮಸೆಯುತ್ತಿರುವುದು ಗೌಪ್ಯವಿಷಯವಲ್ಲ.
ಸಿದ್ದರಾಮಯ್ಯನವರು ನಾಡಿನ ನಾಡಿ ಮೀಡಿತ ಅರಿತ ಜನನಾಯಕ. ಇಂದು ಅವರು ಕೇವಲ ಅಹಿಂದ ವರ್ಗದ ನಾಯಕರಲ್ಲ. ಅವರು ಸರ್ವ ಜನಾಂಗದ ನಾಯಕರಲ್ಲದೆ ಲಿಂಗಾಯತ ನಾಯಕರು ಹೌದು. ಇಂದು ಮತ್ತೆ ಇವೆ ಶಕ್ತಿಗಳು ಒಂದುಗೂಡಿವೆ.
– ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




