ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿ ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್ ಗೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು ತೀರ್ಮಾನ ಕೈಗೊಳ್ಳುವ ಜವಾಬ್ದಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲೇರಿದೆ.
ಒಮ್ಮತದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತಂತೆ ಕಳೆದರಾತ್ರಿ ನಡೆದ ಶಾಸಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಹೈಕಮಾಂಡ್ ಗೆ ಬಿಡುವ ಒಂದು ಸಾಲಿನ ನಿರ್ಣಯ ಅಂಗೀಕರಿಸಲಾಯಿತು. ಆದರೆ ಇದಾದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತಂತೆ ಎಲ್ಲಾ ಶಾಸಕರ ಅಭಿಪ್ರಾಯ ಆಲಿಸಲು ವೀಕ್ಷರಿಗೆ ಸೂಚಿಸಿದರು.
ಅದರಂತೆ ದೆಹಲಿಯಿಂದ ಬಂದಿರುವ ವೀಕ್ಷಕರಾದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಾಬಾರಿಯಾ ಪ್ರತ್ಯೇಕವಾಗಿ ಎಲ್ಲಾ ಶಾಸಕರಿಂದ ಅಭಿಪ್ರಾಯ ಪಡೆದರು. ಪ್ರತಿಯೊಬ್ಬ ಶಾಸಕರಿಗೆ ಒಂದು ಚೀಟಿಯನ್ನು ನೀಡಲಾಗಿದ್ದು, ಅದರಲ್ಲಿ ನಿಮ್ಮ ಆಯ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಹೈಕಮಾಂಡ್ ಎಂದು ಉಲ್ಲೇಖಿಸಿದ್ದು ಅದರಲ್ಲಿ ಅವರ ಆಯ್ಕೆ ಯಾವುದು ಎಂಬುದನ್ನು ನಮೂದಿಸಬೇಕಾಗಿತ್ತು.
ಈ ರೀತಿಯಾಗಿ ಎಲ್ಲ ಶಾಸಕರಿಂದ ಪ್ರತ್ಯೇಕ ಚೀಟಿಗಳಲ್ಲಿ ಅಭಿಪ್ರಾಯ ಪಡೆದ ವೀಕ್ಷಕರು ಅದನ್ನು ಕ್ರೋಢಿಕರಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ನೀಡಿದರು. ನಂತರ ಇದನ್ನು ವರದಿ ರೂಪದಲ್ಲಿ ಸಿದ್ಧಪಡಿಸಿದ ತಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದೆ.
ವರದಿಯನ್ನು ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಮುಖಂಡರಾದ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಆದಿರಂಜನ್ ಚೌದರಿ ಸೇರಿದಂತೆ ಕೆಲವು ಪ್ರಮುಖರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಿದ್ದಾರೆ.
ದೆಹಲಿಗೆ ಬುಲಾವ್: ಈ ನಿರ್ಧಾರ ಪ್ರಕರಣೆಗೂ ಮುನ್ನ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೊಂದಿಗೆ ಹೈಕಮಾಂಡ್ ನಾಯಕರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಬಯಸಿದ್ದು, ಇದಕ್ಕಾಗಿ ದೆಹಲಿಗೆ ಬರುವಂತೆ ಸೂಚಿಸಿದರು.
ದೆಹಲಿಗೆ ಬರುವಂತೆ ಹೈಕಮಾಂಡ್ ನಿಂದ ಸೂಚನೆ ಬರುತ್ತಿದ್ದಂತೆ ತಮ್ಮ ಬೆಂಬಲಿಗರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ ಸಿದ್ದರಾಮಯ್ಯ ಆನಂತರ ಕೆಲವು ಆಪ್ತರೊಂದಿಗೆ ದೆಹಲಿಗೆ ತೆರಳಿದರು.
ಆದರೆ ಡಿಕೆ ಶಿವಕುಮಾರ್ ಮಾತ್ರ ಬೆಂಗಳೂರಿನಲ್ಲೇ ಉಳಿದು ತಮ್ಮ ಬೆಂಬಲಿಗರು ಹಾಗೂ ಆಪ್ತದೊಂದಿಗೆ ನಿರಂತರ ಸಮಾಲೋಚನೆಯಲ್ಲಿ ತೊಡಗಿದರು. ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಹೀಗಾಗಿ ತಾವು ದೆಹಲಿಗೆ ಬರಲು ಸಾಧ್ಯವಿಲ್ಲ. ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರು ಅದಕ್ಕೆ ತಾವು ಬದ್ದ ಎಂದು ತಿಳಿಸಿದರು. ಕಡೆಯ ಕ್ಷಣದಲ್ಲಿ ಅವರು ದೆಹಲಿಗೆ ಹೋಗಲು ನಿರ್ಧರಿಸಿದರು.
ಇದರ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಇಂದು ತಮ್ಮ ಹುಟ್ಟು ಹಬ್ಬದ ದಿನ ಹೀಗಾಗಿ ಮನೆಯಲ್ಲಿ ವಿಶೇಷ ಪೂಜೆ ಹೋಮ ಹವನಗಳನ್ನು ನಡೆಸುತ್ತಿದ್ದು ನಾನು ಅದರಲ್ಲಿ ಭಾಗಿಯಾಗಿದ್ದೇನೆ. ಹೀಗಾಗಿ ದೆಹಲಿಗೆ ತೆರಳಲು ಸಾಧ್ಯವಿಲ್ಲ ಇದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂಬ ವಿಶ್ವಾಸವಿದೆ ಹೈಕಮಾಂಡ್ ಎಲ್ಲಾ ಆಯಾಮಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತವೆನಿಸುವ ನಿರ್ಧಾರ ಕೈಗೊಳ್ಳಲಿದೆ ಅದಕ್ಕೆ ನಾವೆಲ್ಲರೂ ಬದ್ಧ ರಾಗ ಬೇಕು ಎಂದು ತಿಳಿಸಿದರು.
50:50 ಅಧಿಕಾರ ಸೂತ್ರ: ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಶಾಸಕರು ವಿಭಿನ್ನ ಅಭಿಪ್ರಾಯ ನೀಡಿದ್ದಾರೆ. ಸುಮಾರು 60 ಶಾಸಕರು ಸಿದ್ದರಾಮಯ್ಯ ಪರ ಮತ ಚಲಾಯಿಸಿದರೆ 50ಕ್ಕೂ ಹೆಚ್ಚು ಶಾಸಕರು ಶಿವಕುಮಾರ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಮಾರು 30 ಜನ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಸುಶೀಲ್ ಕುಮಾರ್ ಶಿಂಧೆ ಮತ್ತು ವೇಣುಗೋಪಾಲ್ ತಮ್ಮ ವರದಿಯಲ್ಲಿ ಇದೆ ಅಂಶವನ್ನು ತಿಳಿಸಿದ್ದಾರೆ. ಹೀಗಾಗಿ ಹೈಕಮಾಂಡ್ 50:50 ರ ಆಧಾರದಲ್ಲಿ ಅಧಿಕಾರ ಸೂತ್ರ ಸಿದ್ಧಪಡಿಸಿದ್ದು, ಅದನ್ನು ನಾಳೆ ಪ್ರಕಟಿಸಲಿದೆ ಎಂದು ಗೊತ್ತಾಗಿದೆ.
ಇದರ ಪ್ರಕಾರ ಮೊದಲ ಎರಡು ವರ್ಷ ಬಳಿಕ ಬಳಿಕದ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ. ಅಲ್ಲಿಯವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಮುಂದುವರೆಯಲಿದ್ದು, ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಗುವುದು. ಇದರ ನಂತರ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗ ಮಾಡಲಿದ್ದು, ನಂತರ ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಇದಾದ ಬಳಿಕ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂಬುದಾಗಿ ಹೈಕಮಾಂಡ್ ನಿರ್ಧಾರ ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂತ್ರಿ ಸ್ಥಾನಕ್ಕಾಗಿ ಲಾಬಿ: ಮತ್ತೊಂದೆಡೆ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿ ಶಾಸಕರು ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರ ಮನೆಗೆ ಆಪ್ತರಾದ ಎಚ್.ಸಿ.ಮಹದೇವಪ್ಪ, ವಿನಯ್ ಕುಲಕರ್ಣಿ, ಕೆ.ಎನ್.ರಾಜಣ್ಣ, ಜಮ್ಮೀರ್ ಅಹಮ್ಮದ್‍ಖಾನ್ ಸೇರಿದಂತೆ ಅನೇಕ ಶಾಸಕರು ಭೇಟಿ ನೀಡಿದರು.
ಮತ್ತೊಂದೆಡೆಯಲ್ಲಿ ಶಿವಕುಮಾರ್ ಅವರ ನಿವಾಸಕ್ಕೆ ಟಿ.ಬಿ. ಜಯಚಂದ್ರ, ಜಿ ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ರಂಗನಾಥ್, ಯು.ಟಿ. ಖಾದರ್, ಸೇರಿದಂತೆ ಹಲವರು ಭೇಟಿ ನೀಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಮೂಡಿಸಿದರು.




