ಸಾಮಾಜಿಕ ನ್ಯಾಯ ಉಳಿಸಿಕೊಳ್ಳುವುದೇ ಆದ್ಯತೆ

3 years ago

ನನ್ನ ಕಾಲೇಜು ದಿನಗಳಲ್ಲಿ ಚುನಾವಣೆ ಸಮಯದಲ್ಲಿ ಶಿವಮೊಗ್ಗದ ಕೇರಿ ಕೇರಿಗಳಲ್ಲಿ “ಚುನಾವಣೆ ದಾರಿ ಕಳ್ಳರ ದಾರಿ, ಚುನಾವಣೆ ಬಹಿಷ್ಕರಿಸಿ” ಎಂದು ಕೂಗಿಕೊಂಡು ಸೈಕಲ್ ಜಾತಾ ನಡೆಸುತ್ತಿದ್ದೆವು. ಎಲ್ಲಾ ರಾಜಕೀಯ ಪಕ್ಷಗಳನ್ನು ಅದರಲ್ಲೂ 40 ವರ್ಶ ಆಳಿದ ಕಾಂಗ್ರೆಸ್ ಪಕ್ಷವನ್ನು ಜಾಡಿಸಿ ಹಾಡು ಹೇಳುತ್ತಿದ್ದೆವು. ಬಾರತ ದೇಶ ಬಾಗ್ಯ ಸೀಮೆಯು ಸಿರಿಸಂಪತ್ತಿಗೆ ಕೊರತೆಯಿಲ್ಲವೊ… ಎಂದು ಶುರುವಾಗುವ ಆ ಅರ್ದ ಗಂಟೆಯ ಹಾಡಿನ ಪ್ಯಾರಾಪ್ಯಾರಾಗಳು ಕಂಟಪಾಟವಾಗಿದ್ದವು… ಅದನ್ನು ಕೇಳಿ ಹೌದು ಹೌದು ಎಂದು ಗೋಣು ಆಡಿಸದ ಜನರೇ ಇರಲಿಲ್ಲ… ಸ್ವತಃ ನನ್ನ ಅಪ್ಪ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಅಬ್ಯರ್ತಿಯಾಗಿದ್ದಾಗಲೂ ಚುನಾವಣೆ ದಿನ ಊರಿಗೆ ಹೋಗಿದ್ದರೂ ಸಹ ಓಟು ಹಾಕದೇ ನನ್ನ ನಿಲುವು ಬಿಟ್ಟುಕೊಟ್ಟಿರಲಿಲ್ಲ. ನನ್ನ ದೊಡ್ಡಪ್ಪನೊಂದಿಗೆ ದೊಡ್ಡ ವಾಗ್ವಾದವನ್ನೇ ನಡೆಸಿದ್ದೆ… ಬಹುಶ ಆ ಚುನಾವಣೆಯಲ್ಲಿ ಅಪ್ಪನಿಗಾಗಿ ನಾನು ಕೆಲಸ ಮಾಡಿದ್ದರೆ ಅವರು ಕೇವಲ 500 ಮತಗಳಿಂದ ಸೋಲದೇ ಗೆಲುವು ಸಾದಿಸುತ್ತಿದ್ದರೇನೋ…‌

ದೇಶದಲ್ಲಿ ಕ್ರಾಂತಿ ಆಗಬೇಕು, ಚುನಾವಣೆ ಎಂಬುದೇ ಶೋಷಕರ ಅಸ್ತ್ರ…. ಹೀಗೆ ನಮ್ಮ ವಾದಸರಣಿ ಇರುತ್ತಿತ್ತು…
ಆದರೆ, NOTA ಮೊದಲ ಸಲ ಒಂದು ಆಯ್ಕೆಯಾಗಿ ಸೇರ್ಪಡೆ ಆದಾಗ ಅದೊಂದು ಅತ್ಯಂತ ಪ್ರಜಾತಾಂತ್ರಿಕ ಸೇರ್ಪಡೆ ಎನಿಸಿ ನನ್ನ ಮೊದಲ ವೋಟನ್ನು ನೋಟಾಕ್ಕೆ ಹಾಕಿದ್ದೆ…

ನಂತರ ತುಂಗೆಯಲ್ಲಿ ಬಹಳ ನೀರು ಹರಿದಿದೆ…

ಬಿಜೆಪಿ ಯಾವಾಗ ಅದಿಕಾರಕ್ಕೆ ಬಂದು ತನ್ನ ಕಬಂದಬಾಹುಗಳನ್ನು ಆರೆಸ್ಸೆಸ್ ತೀವ್ರಗತಿಯಲ್ಲಿ ಚಾಚಲು ಶುರುವಾಯಿತೋ ಯಾವ ಪ್ರಜಾಪ್ರಬುತ್ವದ ಬಗ್ಗೆ ಯಾವ ಚುನಾವಣೆಗಳ ಬಗ್ಗೆ ನಮ್ಮ ಅಸಮದಾನ, ವಿರೋದ ವ್ಯಕ್ತಪಡಿಸುತ್ತಿದ್ದೆವೋ ಅವೋ ದೊಡ್ಡ ಅಸ್ತ್ರಗಳು ಅನಿಸತೊಡಗಿದವು. ಕ್ರಾಂತಿಯ ಮಾತು ಇರಲಿ ಕನಿಷ್ಟ ಈಗ ಇರುವ ಅಲ್ಪ ಸ್ವಲ್ಪ ಸ್ವಾತಂತ್ರ್ಯ, ಪ್ರಜಾಪ್ರಬುತ್ವ ಮತ್ತು ಸಾಮಾಜಿಕ ನ್ಯಾಯಗಳನ್ನು ಉಳಿಸಿಕೊಳ್ಳುವುದೇ ಆದ್ಯತೆ ಎನಿಸಿತೊಡಗಿತು. ಅಂದಿನಿಂದ ಬಿಜೆಪಿ ಹೊರತುಪಡಿಸಿದ ಪಕ್ಷಗಳ ಕುರಿತು ಟೀಕೆ ಕಡಿಮೆಯಾಯಿತು.

ನಿರ್ದಿಷ್ಟವಾಗಿ ನನ್ನ ಬರೆಹ, activism ನ ಮುಕ್ಯ ಗುರಿ ಬಿಜೆಪಿಯಾಗಿದೆ. ಆದರೆ ಅಗತ್ಯ ಎನಿಸಿದ ಸಂದರ್ಬದಲ್ಲಿ ಕಾಂಗ್ರೆಸ್ ಮತ್ತಿತರರ ನೀತಿ ನಡೆಗಳನ್ನು ಟೀಕಿಸದೇ ವಿಮರ್ಶಿಸದೇ ಬಿಟ್ಟಿಲ್ಲ. ಉದಾಹರಣೆಗೆ ಈ ದೇಶದಲ್ಲಿ EWS ಜಾರಿಯಾಗುವಾಗ ಕಾಂಗ್ರೆಸ್, ಬಿಎಸ್ ಪಿ, ಆದಿಯಾಗಿ ಎಲ್ಲಾ ಪಕ್ಷಗಳ ವಿದ್ರೋಹವನ್ನೆಂದೂ ಕ್ಷಮಿಸಲು ಸಾದ್ಯವಿಲ್ಲ.‌

ನೆನ್ನೆ ಬಿಜೆಪಿ ವಿರುದ್ದವಾಗಿ ನನ್ನ ಮೂರನೇ ಮತವನ್ನು ಯಾವುದೇ ಆಶೆ, ಆಮಿಶವಿಲ್ಲದೆ ನಾನೇ ಕೈಯಿಂದ ಕರ್ಚು ಮಾಡಿಕೊಂಡು ಹೋಗಿ ಚಲಾಯಿಸಿದೆ ಎನ್ನಲು ಹೆಮ್ಮೆಯಿದೆ.

ಈ ಬಿಜೆಪಿ ಮತ್ತು ಆರೆಸ್ಸೆಸ್ ಗಳು, ಅವುಗಳ ಬ್ಲಡಿ ಐಡಿಯಾಲಜಿ ಸಂಪೂರ್ಣ ಮಣ್ಣು ಮುಕ್ಕದ ಹೊರತು ಈ ನೆಲದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ಬುದ್ದ, ಬಸವ, ಕುವೆಂಪು ವಿಚಾರಗಳು ಜಯಗಳಿಸಲು ಸಾದ್ಯವಿಲ್ಲ. ಸಂವಿದಾನವಾದ (constitutionalism) ಗೆಲ್ಲಲು ಸಾದ್ಯವಿಲ್ಲ. ಬಾರತೀಯರು ನೆಮ್ಮದಿಯ ನಿಟ್ಟುಸಿರು ಬಿಡಲು ಸಾದ್ಯವಿಲ್ಲ. ಸಮತೆಯ ಹೂ ಅರಳಲು ಸಾದ್ಯವಿಲ್ಲ, ಮಮತೆಯ ಕುಡಿಯೊಡೆಯಲು ಸಾದ್ಯವಿಲ್ಲ.

ಇದಕ್ಕಾಗಿ ಸಾದ್ಯವಿರುವುದೆಲ್ಲವನ್ನೂ ಮಾಡುತ್ತಲೇ ಹೋಗೋಣ… ನಮ್ಮ ಪೂರ್ವಿಕರ ಅಪಾರ ತ್ಯಾಗ ಮತ್ತು ರಕ್ತತರ್ಪಣಗಳಿಂದ ಗಳಿಸಿಕೊಂಡಿತುವ ಈ ದೇಶ ನಮ್ಮದು… ಇದರ ಸೌಂದರ್ಯವನ್ನು ಕಾಪಾಡುತ್ತಲೇ ಜಾತಿ-ದರ್ಮಗಳಲ್ಲಿ ಸಾವಿರ ಹೋಳುಗಳಾಗಿರುವ ಇದನ್ನು ಒಂದು ನಿಜವಾದ ಒಕ್ಕೂಟವಾಗಿ ಕಟ್ಟಿ ಬೆಳೆಸುವ ಹೊಣೆಯೂ ನಮ್ಮದೇ.‌

– ಹರ್ಶಕುಮಾರ್ ಕುಗ್ವೆ, ಪತ್ರಕರ್ತರು

Leave a Reply