ವಾಲ್ಮೀಕಿ ರಾಮಾಯಣದ ಕಿಷ್ಕಿಂದಾ ಕಾಂಡದ ಆರಂಭದ ಭಾಗದಲ್ಲಿ ರಾಮ ಲಕ್ಷ್ಮಣರನ್ನು ಹನುಮಂತ ಮೊದಲ ಬಾರಿಗೆ ಭೇಟಿಯಾಗುತ್ತಾನೆ. ಹನುಮಂತನು ಅತ್ಯಂತ ವಿನಯದಿಂದ ತನ್ನನ್ನು ಎಷ್ಟು ಬೇಕೋ ಅಷ್ಟೇ ಮಾತುಗಳಿಂದ ಪರಿಚಯಿಸಿಕೊಂಡು ಸುಮ್ಮನಾದಾಗ ರಾಮನು ಲಕ್ಷ್ಮಣನೊಡನೆ ಈ ಮುಂದಿನಂತೆ ಹೇಳುತ್ತಾನೆ.
‘ವತ್ಸಾ, ಸುಗ್ರೀವನ ಮಂತ್ರಿಯಾದ ಇವನು ಮಾತಿನಲ್ಲಿ ಬಹಳ ನಿಪುಣ. ಈತನು ಭಾವಜ್ಞನಾದುದರಿಂದ ನೀನು ಇವನೊಡನೆ ಸ್ನೇಹಯುಕ್ತವಾದ ಮೃದು ವಾಕ್ಯಗಳನ್ನು ಆಡಿ ಸಂತೋಷ ಪಡಿಸು. ಋಗ್ವೇದದಲ್ಲಿ ಶಿಕ್ಷಿತನಲ್ಲದೇ ಹೋದರೆ, ಯಜುರ್ವೇದಗಳನ್ನು ಓದಿಲ್ಲವಾದರೆ, ಸಾಮವೇದವನ್ನು ತಿಳಿಯಲಿಲ್ಲವಾದರೆ ಹೀಗೆ ಮಾತಾಡುವುದು ಎಂದಿಗೂ ಸಾಧ್ಯವಿಲ್ಲ. ಈತನು ವ್ಯಾಕರಣ ಶಾಸ್ತ್ರವನ್ನು ಅನೇಕ ಸಲ ಅಭ್ಯಾಸ ಮಾಡಿದಂತೆ ತೋರುತ್ತದೆ. ಇವನು ವೇದ ವೇದಾಂಗಗಳೆಲ್ಲವನ್ನೂ ಸಂಪೂರ್ಣವಾಗಿ ತಿಳಿದವನೆಂಬುದರಲ್ಲಿ ಸಂದೇಹವೇ ಇಲ್ಲ. ಇವನು ಈವರೆಗೆ ನಮ್ಮೊಡನೆ ಇಷ್ಟು ಮಾತುಗಳನ್ನು ಆಡಿದರೂ ಅವುಗಳಲ್ಲಿ ಸ್ವಲ್ಪವಾದರೂ ಅಪಶಬ್ದವು ಕಾಣಲಿಲ್ಲ. ಇವನು ಮಾತಾಡುವಾಗ ಇವನ ಮುಖದಲ್ಲಾಗಲೀ, ಹಣೆಯಲ್ಲಾಗಲೀ, ಕಣ್ಣುಗಳಲ್ಲಾಗಲೀ ಅಥವಾ ಬೇರೆ ಯಾವ ಅವಯವಗಳಲ್ಲಾಗಲೀ ಯಾವುದೇ ವಿಕಾರ ಮತ್ತು ಚೇಷ್ಟೆಗಳು ಕಾಣಲಿಲ್ಲ. ಈತನ ಮಾತುಗಳು ವಿಶೇಷ ಶಬ್ದಾಡಂಬರಗಳಿಲ್ಲದೆ ಪದವರ್ಣಗಳಿಲ್ಲದೆ, ಸ್ವಲ್ಪವೂ ಸಂದೇಹವೂ ತೋರಲಿಲ್ಲ. ಇವನು ಆಡಿದ ಮಾತುಗಳು ಅತಿ ನಿಧಾನವೂ ಆಗಿರಲಿಲ್ಲ, ವೇಗವಾಗಿಯೂ ಇರಲಿಲ್ಲ. ಬದಲು ಗಂಭೀರವಾಗಿದ್ದುವು. ಈತನ ಮಾತುಗಳು ಎದೆಯಿಂದ ಹೊರಟು ಬರುವಾಗಲೂ, ಕಂಠದಲ್ಲಿ ಇರುವಾಗಲೂ ಮಧ್ಯಮ ಸ್ಥಾಯಿಯಿಂದ ಬರುತ್ತದೆ. ಇವನ ವಾಕ್ಯಗಳಲ್ಲಿ ಪದಗಳು ವ್ಯಕ್ತವಾಗಿಯೂ ವರ್ಣಗಳು ಸ್ಫುಟವಾಗಿಯೂ ಇವೆ. ಇವನ ಮಾತುಗಳು ಕೇಳುವವರ ಮನಸ್ಸನ್ನು ಆಕರ್ಷಿಸುವಂತೆ ಅತಿ ಮಧುರʼ
ಈ ಮಾತುಗಳ ಮೂಲಕ ವಾಲ್ಮೀಕಿಯು ಸುಸಂಸ್ಕೃತ ವ್ಯಕ್ತಿತ್ವ ಮತ್ತು ಭಾಷೆಯನ್ನು ಓದುಗರಿಗೆ ಪರಿಚಯಿಸುತ್ತಾನೆ. ಆದರೆ ಇವತ್ತು ಹನುಮಂತನ ಹೆಸರು ಹೊತ್ತವರ ಭಾಷೆ ಮತ್ತು ನಡತೆಗಳು ಹೇಗಿವೆ ಎಂಬದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಪ್ರಧಾನಿಗಳೂ ಇದಕ್ಕೆ ತಮ್ಮ ಸಮರ್ಥನೆಯ ಮುದ್ರೆ ಒತ್ತಿದ್ದಾರೆ. ನಾಗರಿಕತೆ ಆಳವಾಗಿ ಘಾಸಿಗೊಂಡಿದೆ.
-ಪುರುಷೋತ್ತಮ ಬಿಳಿಮಲೆ, ವಿಮರ್ಶಕರು




