ಕರ್ನಾಟಕದ ಬಿಜೆಪಿ ಸರಕಾರ ಲಿಂಗಾಯತರು, ಒಕ್ಕಲಿಗರಿಗೆ ಮಾಡಿದ್ದು ಮಹಾ ಮೋಸವಲ್ಲವೇ?

3 years ago

ಸರಕಾರವೊಂದು ತನ್ನದೇ ಆದೇಶಕ್ಕೆ ನ್ಯಾಯಾಲಯದಲ್ಲಿ ಪರೋಕ್ಷ ತಡೆಯಾಜ್ಞೆ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುವುದನ್ನು ನೀವು ಎಲ್ಲಾದರೂ ನೋಡಿದ್ದೀರಾ, ಕೇಳಿದ್ದೀರಾ? ಕರ್ನಾಟಕದ ಬೊಮ್ಮಾಯಿ ಸರಕಾರ ಇಂತಹದೊಂದು ‘ಐತಿಹಾಸಿಕ’ ಕೆಲಸವನ್ನು ಸುಪ್ರೀಂ ಕೋರ್ಟ್ ನಲ್ಲಿ ಮಾಡಿ ನಗೆಪಾಟಲಿಗೀಡಾಯಿತು.

ನಿಮಗೆಲ್ಲ ಗೊತ್ತಿರಬಹುದು, ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಸರಕಾರವು ತನ್ನ ಕೊನೆಯ ಸಂಪುಟ ಸಭೆಯಲ್ಲಿ ಮೀಸಲಾತಿಯನ್ನು ಕುರಿತು ಹೊಸದೊಂದು ನಿರ್ಧಾರ ಪ್ರಕಟಿಸಿತು. ಅದರ ಪ್ರಕಾರ ಮುಸ್ಲಿಮರನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರ ಹಾಕಿ ಅವರ ಪಾಲಿನ 4% ಮೀಸಲಾತಿಯನ್ನು ಲಿಂಗಾಯತರು ಮತ್ತು ಒಕ್ಕಲಿಗರ ನಡುವೆ ತಲಾ 2% ನಂತೆ ಹಂಚಿಕೆ ಮಾಡಿತು.

ಇದು ಮೇಲ್ನೋಟಕ್ಕೆ ಮುಸ್ಲಿಮರಿಗೆ ಮಾಡಿದ ಅನ್ಯಾಯದಂತೆ ಕಂಡರೂ, ಅದೇ ಹೊತ್ತಿನಲ್ಲಿ ಇದು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಕೂಡಾ ಮಾಡಿದ ಮಹಾ ಮೋಸವೇ ಆಗಿತ್ತು ಎಂಬುದನ್ನು ತಿಳಿಯಲು ವಿಶೇಷ ಜ್ಞಾನವೇನೂ ಅಗತ್ಯವಿರಲಿಲ್ಲ. ಮುಸಲ್ಮಾನರು, ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮಾತ್ರವಲ್ಲ, ತನ್ನ ವಿವೇಚನಾಹೀನ ಮತ್ತು ರಾಜಕೀಯ ದುರುದ್ದೇಶದ ಮೀಸಲಾತಿ ನೀತಿಯಿಂದ ಅದು ಏಕಕಾಲದಲ್ಲಿ ತಳಸಮುದಾಯ ಸಹಿತ ಎಲ್ಲ ವರ್ಗಗಳಿಗೂ ಮೋಸ ಮಾಡಿತು.
ರಾಜಕೀಯ ದುರುದ್ದೇಶ ಮುಸ್ಲಿಮರಿಗೆ ಕರ್ನಾಟಕದಲ್ಲಿ ಒಬಿಸಿ ವರ್ಗದಲ್ಲಿ 4% ಮೀಸಲಾತಿ ನೀಡಿದ್ದು ಬಿಜೆಪಿ ಹೇಳುವಂತೆ ಮತಧರ್ಮಾಧಾರಿತವಾಗಿಯಲ್ಲ. ಬದಲಿಗೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಯ ಬಗ್ಗೆ ಆಳ ಅಧ್ಯಯನ ನಡೆಸಿದ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸಿನ ಮೇಲೆ. ಈ ಮೀಸಲಾತಿಯನ್ನು ಕಿತ್ತು ಹಾಕುವುದರ ಹಿಂದೆ ಬಿಜೆಪಿಗೆರಾಜಕೀಯ ದುರುದ್ದೇಶವಿತ್ತು.

ಮೊದಲನೆಯದಾಗಿ ಮೀಸಲಾತಿ ತೆಗೆದುಹಾಕಿದಾಕ್ಷಣ ಮುಸ್ಲಿಮ್ ಸಮುದಾಯದವರು ಬೀದಿಗಿಳಿಯುತ್ತಾರೆ. ಗಲಾಟೆ ನಡೆಯುತ್ತದೆ. ಇದರಿಂದ ಮತೀಯ ಧ್ರುವೀಕರಣ ನಡೆದು ತನಗೆ ಚುನಾವಣೆಯಲ್ಲಿ ಲಾಭವಾಗುತ್ತದೆ ಎಂದು ಅದು ಲೆಕ್ಕ ಹಾಕಿತ್ತು.
ಆದರೆ, ಮುಸ್ಲಿಮರು ಬೀದಿಗಿಳಿಯಲ್ಲಿಲ್ಲ. ಸಂವಿಧಾನದಲ್ಲಿ ನಂಬಿಕೆ ಇರಿಸಿ, ತಣ್ಣಗೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಇದರಿಂದ ಬಿಜೆಪಿಯ ಒಂದು ಲೆಕ್ಕಾಚಾರ ತಲೆಕೆಳಗಾಯಿತು. ಅಲ್ಲದೆ, ಒಕ್ಕಲಿಗರು ಮತ್ತು ಲಿಂಗಾಯತರು ತಮ್ಮ ವಿಶಾಲ ಹೃದಯವನ್ನು ಪ್ರದರ್ಶಿಸಿ, ‘ಬೇರೆಯವರಿಂದ ಕಿತ್ತು, ಅವರನ್ನು ನೋಯಿಸಿ ಕೊಡುವ ಮೀಸಲಾತಿ ನಮಗೆ ಬೇಕಾಗಿಲ್ಲ, ನಮ್ಮದು ಅಂತಹ ದುಷ್ಟ ಸಂಸ್ಕೃತಿಯಲ್ಲ’ ಎಂದು ಬಹಿರಂಗವಾಗಿಯೇ ಹೇಳಿಬಿಟ್ಟರು. ಇದರಿಂದ ಬಿಜೆಪಿಯ ಎರಡನೆ ಲೆಕ್ಕಾಚಾರವೂ ತಲೆಕೆಳಗಾಯಿತು.

ಮೊದಲೇ ಹೇಳಿದಂತೆ, ಈ ಮೀಸಲಾತಿ ನಿರ್ಧಾರದ ಹಿಂದೆ ಇದ್ದ ಉದ್ದೇಶ ಚುನಾವಣೆ ಗೆಲ್ಲುವುದೇ ಹೊರತು, ಅವಕಾಶವಂಚಿತರಿಗೆ ನೆರವಾಗುವ ಅಂತಃಕರಣ ಅಲ್ಲವೇ ಅಲ್ಲ. ಸಂವಿಧಾನದ ತತ್ತ್ವಗಳಿಗೆ ವಿರುದ್ಧವಿರುವುದರಿಂದ, ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎನ್ನುವುದು ಬೊಮ್ಮಾಯಿ ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿತ್ತು (ರಾಜ್ಯಸರಕಾರದ ನಿರ್ಧಾರವು ‘ಮೇಲ್ನೋಟಕ್ಕೆ ತಪ್ಪಿನಿಂದ ಕೂಡಿದೆ’ ಎಂದು ಸುಪ್ರೀಂ ಕೋರ್ಟ್’ನ ನ್ಯಾ. ಜೋಸೆಫ್ ಮತ್ತು ನ್ಯಾ. ನಾಗರತ್ನ ಪೀಠ ಆರಂಭದಲ್ಲಿಯೇ ಹೇಳಿತ್ತು). ಯಾಕೆಂದರೆ ಯಾವುದೇ ಮೀಸಲಾತಿ ನೀಡಬೇಕಾದರೂ ಅದಕ್ಕೆ, ಸಂಬಂಧಪಟ್ಟ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಯನ್ನು ಕುರಿತ ಆಳ ಅಧ್ಯಯನದ ಬಲ ಬೇಕಾಗುತ್ತದೆ. ಸಂಬಂಧ ಪಟ್ಟ ಆಯೋಗ ಆ ಬಗ್ಗೆ ಅಂಕಿ ಅಂಶ ಸಹಿತ ಶಿಫಾರಸು ಮಾಡಬೇಕಾಗುತ್ತದೆ. ಬೊಮ್ಮಾಯಿ ಸರಕಾರ ಇಂತಹ ಯಾವುದೂ ಇಲ್ಲದೆ, ತರಾತುರಿಯಿಂದ ಮೀಸಲಾತಿ ನಿರ್ಧಾರ ಪ್ರಕಟ ಮಾಡಿತು.

ಅಲ್ಲದೆ, ಮೀಸಲಾತಿಯ ಪ್ರಮಾಣವು ನಿಗದಿತ 50% ದ ಮಿತಿಯನ್ನು ದಾಟಬೇಕಾದರೆ ಅದಕ್ಕೆ ಭಾರತದ ಸಂವಿಧಾನದಲ್ಲಿಯೇ ತಿದ್ದುಪಡಿಯಾಗಬೇಕು. ಇದು ನಡೆಯಬೇಕಾದುದು ಸಂಸತ್ ನಲ್ಲಿ. ಈ ಕೆಲಸ ಮಾಡದೆ ಮೀಸಲಾತಿ ಘೋಷಣೆ ಮಾಡಿದರೆ ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಎಸೆಯುತ್ತದೆ.

ನ್ಯಾಯಾಲಯದಲ್ಲಿ ಇರಿಸುಮುರಿಸು
ಸದರಿ ಮೀಸಲಾತಿ ಸಂಬಂಧ ತಾನು ಮಾಡಿರುವ ನಿರ್ಧಾರ ತಪ್ಪು ಎಂಬುದು ಬೊಮ್ಮಾಯಿ ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿಯೇ, ಅದು ಕುಂಟು ನೆಪವೊಡ್ಡಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯನ್ನು ಮತ್ತೆ ಮತ್ತೆ ಮುಂದೆ ಹಾಕಲು ಯತ್ನಿಸಿತು. ಹೀಗೆ ನಾಲ್ಕು ಬಾರಿ ಮುಂದೂಡಿಕೆಯಾಯಿತು. ‘ಹೊಸ ಆದೇಶವನ್ನು ತಾನು ಜಾರಿ ಮಾಡುವುದಿಲ್ಲ, ಆ ಸಂಬಂಧ ಅಧಿಸೂಚನೆಯನ್ನು ತಾನು ಹೊರಡಿಸಿಯೇ ಇಲ್ಲ, ಮಾಡಿರುವುದು ಕೇವಲ ಆದೇಶ ಅಷ್ಟೇ’, ಎಂದು ಅದು ನ್ಯಾಯಾಲಯದಲ್ಲಿ ಮತ್ತೆ ಮತ್ತೆ ಹೇಳುತ್ತಬಂತು.

ಈಗ ನೋಡಿ, ಮುಂದಿನ ವಿಚಾರಣೆ ನಡೆಯುವುದು ಮೇ 9 ರಂದು. ಮೇ 10 ರಂದು ಕರ್ನಾಟಕದಲ್ಲಿ ಮತದಾನ ಇದೆ, ಮೇ 13 ರಂದು ಫಲಿತಾಂಶ ಇದೆ. ಅಷ್ಟಾಗುವಾಗ ಕೋರ್ಟ್ ಗೆ ಬೇಸಿಗೆ ರಜೆ ಶುರುವಾಗುತ್ತದೆ, ಕರ್ನಾಟಕದಲ್ಲಿ ಹೊಸ ಸರಕಾರವೂ ಬಂದಿರುತ್ತದೆ. ಅಲ್ಲಿಗೆ ಬಸವರಾಜ ಬೊಮ್ಮಾಯಿ ಸರಕಾರದ್ದು ಎಂದೆಂದೂ ಜಾರಿಯಾಗದ ಮೀಸಲಾತಿ ನಿರ್ಧಾರವಾಗಿರುತ್ತದೆ. ಅಂದರೆ, ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಮೀಸಲಾತಿ ಕೊಡುವ ನಾಟಕವಾಡಿ, ಅವರ ಮೂಗಿಗೆ ತುಪ್ಪ ಸವರಿ, ಒಟ್ಟಾರೆಯಾಗಿ ಕರ್ನಾಟಕದ ಬಿಜೆಪಿ ಸರಕಾರ ಅವರಿಗೆ ಮಾಡಿದ್ದು ಮಹಾ ಮೋಸವಲ್ಲವೇ?

  • ಶ್ರೀನಿವಾಸ ಕಾರ್ಕಳ

Leave a Reply