ಮೋದಿ ಬರುವ ಎರಡು ಸಾವಿರ ವರ್ಷಗಳಿಗೂ ಮುನ್ನವೇ ಕರ್ನಾಟಕ ಇತ್ತು: ಪುರುಷೋತ್ತಮ ಬಿಳಿಮಲೆ

3 years ago

ʼಕರ್ನಾಟಕದ ಭವಿಷ್ಯ ಮೋದಿಯವರ ಕೈಯಲ್ಲಿದೆʼ ಎಂಬ ಅರ್ಥ ಬರುವ   ಮಾತನ್ನು ಜೆ ಪಿ ನಡ್ಡಾ ಮತ್ತು ಅಮಿತ್‌ ಶಾ ಹೇಳಿದ್ದಾರೆ. ನಡ್ಡಾ , ಅಮಿತ್‌ ಶಾ  ಮತ್ತು ಮೋದಿಯವರು ಬರುವ ಎರಡು ಸಾವಿರ ವರ್ಷಗಳಿಗೂ ಮುನ್ನವೇ ಕರ್ನಾಟಕ ಇತ್ತು. ಇವರೆಲ್ಲ ಹೋದ ಆನಂತರವೂ ಕರ್ನಾಟಕ ಇರುತ್ತದೆ.

ಪಂಪ, ಬಸವ, ಅಕ್ಕ, ಅಲ್ಲಮ,  ಕುಮಾರವ್ಯಾಸ, ಲಕ್ಷ್ಮೀಶ,  ಕನಕದಾಸ – ಪುರಂದರ ದಾಸ, ಪಾರ್ತಿ ಸುಬ್ಬ, ಕುವೆಂಪು, ಕಾರಂತ, ಬೇಂದ್ರೆ, ನಿರಂಜನ, ಲಂಕೇಶ್‌, ತೇಜಸ್ವಿ, ಅನಂತಮೂರ್ತಿ, ಕಾರ್ನಾಡ್‌, ದೇವನೂರು ಮೊದಲಾದವರು ಈ ನಾಡಿನ ಭವಿಷ್ಯ ಹೇಗಿರಬೇಕೆಂದು ಬರೆದಿದ್ದಾರೆ.  ಅವರ ಬರೆಹಗಳ ಬೆಳಕಲ್ಲಿ ನಾವು ಮುನ್ನಡೆಯುತ್ತೇವೆಯೇ ವಿನಾ ರಾಜಕಾರಣಿಗಳ ದ್ವೇಷ ಭಾಷಣ, ಹಾಗೂ ಕುತಂತ್ರಗಳ ಹಾದಿಯಲ್ಲಿ ಅಲ್ಲ.

ಕರ್ನಾಟಕವು ವೈವಿಧ್ಯಮಯ ಧರ್ಮ ಹಾಗೂ ಮತಗಳ ಆಗರವಾಗಿ ಎಲ್ಲರ ನಡುವೆ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದ ನಾಡು.  ವಿವಿಧ ಸಮುದಾಯಗಳಿಗೆ ಸೇರಿದವರು ಕರ್ನಾಟಕದಲ್ಲಿ ತಮ್ಮದೇ ಆದ ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿಕೊಂಡು ಅದಕ್ಕೆ ಬದ್ಧರಾಗಿ ಬದುಕಿದ್ದಾರೆ.

ಭಾರತ ಹೇಗೋ ಹಾಗೆ ಕರ್ನಾಟಕವೂ ವಿವಿಧ ಸಮುದಾಯಗಳಿರುವ, ವಿವಿಧ ಭಾಷೆಗಳಿರುವ ನಾಡು. ಅದನ್ನು ಬಣ್ಣ ಬಣ್ಣದ ರಂಗೋಲಿಗೆ ಹೋಲಿಸಬಹುದು. ರಂಗೋಲಿಯಲ್ಲಿ ಹೆಚ್ಚು ಬಣ್ಣವಿದ್ದಷ್ಟೂ ಅದರ ಸೌಂದರ್ಯ ಹೆಚ್ಚುತ್ತದೆ. ಕಡಿಮೆಯಾದಷ್ಟೂ ರಂಗೋಲಿ ಅಂದಗೆಡುತ್ತದೆ. ಇವತ್ತು ನಮ್ಮಲ್ಲಿ ತಾಳ್ಮೆಯಿಂದ ರಂಗೋಲಿ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ. ಅದನ್ನು ಕ್ಷಣಮಾತ್ರದಲ್ಲಿ ನಾಶ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

ನಮಗೆ ನಮ್ಮದೇ ಸಾಂಸ್ಕೃತಿಕ ಬದ್ಧತೆ ಇದೆ. ಅದು ಎಲ್ಲ ಅಡೆತಡೆಗಳ ನಡುವೆಯೂ ನಿರಾತಂಕವಾಗಿ ಮುಂದುವರೆಯಲಿದೆ.


-ಪುರುಷೋತ್ತಮ ಬಿಳಿಮಲೆ, ಸಂಶೋಧಕರು

Leave a Reply