ಬಹುತೇಕ ಮಾಜಿ ಮುಖ್ಯಮಂತ್ರಿಗಳು ಕೊನೆಯ ದಿನಗಳಲ್ಲಿ ಮೂಲ ಪಕ್ಷದಲ್ಲಿ ಇರುವುದಿಲ್ಲ

3 years ago

Most of the former chief ministers are not in the original party in the last days

ಕರ್ನಾಟಕ ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳು ತಮ್ಮ ರಾಜಕಾರಣದ ಕೊನೆಯ ದಿನಗಳಲ್ಲಿ ತಮಗೆ ಆಶ್ರಯವನ್ನು ನೀಡಿದ ಹಲವಾರು ದಶಕಗಳ ಕಾಲ ರಾಜಕಾರಣವನ್ನು ಮಾಡಿದ ಪಕ್ಷದಲ್ಲಿ ಇರುವುದಿಲ್ಲ. ಜಗದೀಶ್ ಶೆಟ್ಟ‌ರವರು ಬಿ.ಜೆ.ಪಿ.ಯನ್ನು ಬಿಟ್ಟು ಕಾಂಗ್ರೆಸ್ ಸೇರಿರುವುದಕ್ಕೆ ಒಂದು ಉದಾಹರಣೆಯಾಗಿದೆ. 1952ರಿಂದ 1956ರವರೆಗೆ ನಾಡಿನ ಮುಖ್ಯಮಂತಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ತಮ್ಮ ರಾಜಕೀಯ ಬದುಕಿನ ಅಂತ್ಯದ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಇರಲಿಲ್ಲ. ಸ್ವರಾಜ್ಯ ಪಕ್ಷ ಎಂಬ ಒಂದು ಪಕ್ಷವನ್ನು ಕಟ್ಟಿಕೊಂಡು ಕೆಲವು ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಪರೀಕ್ಷೆಯನ್ನು ಮಾಡಿದರು.

ನಿಜಲಿಂಗಪ್ಪನವರು ಹಲವಾರು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು. ಅವರು ಸಹ 1969ರಲ್ಲಿ ಮೂಲ ಕಾಂಗ್ರೆಸ್‌ನಿಂದ ಹೊರಬಂದು ತದನಂತರ 1977ರ ಅವಧಿಯಲ್ಲಿ ಜನತಾ ಪಕ್ಷದಲ್ಲಿದ್ದು, ತಮ್ಮ ಅಂತ್ಯದ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಿದ್ದರು.

ವೀರೇಂದ್ರ ಪಾಟೀಲ್‌ ರವರು ಸಹ 1969 ಮತ್ತು 1989ರಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದರು. ಅವರು ಸಹ ಅವರ ಅಂತ್ಯದ ದಿನಗಳಲ್ಲಿ ಅಸಮಾಧಾನಿತರಾಗಿದ್ದರು. ದೇವರಾಜು ಅರಸುರವರು 1972 ರಿಂದ 1980ರ ತನಕ ನಾಡಿನ ಮುಖ್ಯಮಂತ್ರಿಗಳಾಗಿದ್ದರು. 1979ರಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಅರಸು ಕಾಂಗ್ರೆಸ್ ಸ್ಥಾಪಿಸಿದರು. 1980ರಲ್ಲಿ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಅರಸು ಕಾಂಗ್ರೆಸ್ ಪರಾಭವಗೊಂಡಿತು. ತದನಂತರ ಅಧಿಕಾರವನ್ನು ಕಳೆದುಕೊಂಡರು. ಮುಂದಿನ ದಿನಗಳಲ್ಲಿ ಕ್ರಾಂತಿರಂಗದ ಸ್ಥಾಪನೆಗೆ ಕಾರಣಕರ್ತರಾದರು.

ಬಂಗಾರಪ್ಪನವರು ಅನೇಕ ಬಾರಿ ಕಾಂಗ್ರೆಸ್‌ನಿಂದ ಹೊರಬಂದಿರುತ್ತಾರೆ. ಮತ್ತೆ ಸೇರಿರುತ್ತಾರೆ. ಇವರು ಸಹ 1990 ರಿಂದ 1992ರ ಅವಧಿಯಲ್ಲಿ ನಾಡಿನ ಮುಖ್ಯಮಂತ್ರಿಗಳಾಗಿದ್ದರು. ಇವರು ಸಹ ಎರಡೆರಡು ಬಾರಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಚುನಾವಣೆಗಳಿಗೆ ನಿಂತು ಕಾಂಗ್ರೆಸ್ ಪಕ್ಷಕ್ಕೆ ಪೆಟ್ಟುಕೊಟ್ಟಿರುತ್ತಾರೆ. ರಾಜಕೀಯದ ಅಂತ್ಯದ ದಿನಗಳಲ್ಲಿ ಸಮಾಜವಾದಿ ಪಕ್ಷ, ತದನಂತರ ಜನತಾದಳ ಹೀಗೆ ಅನೇಕ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರು.

ರಾಮಕೃಷ್ಣ ಹೆಗಡೆರವರು ಸಹ ಜನತಾ ಪಕ್ಷದಿಂದ ಮುಖ್ಯಮಂತ್ರಿಗಳಾಗಿ 1983 ರಿಂದ 1988ರ ತನಕ ಅಧಿಕಾರದಲ್ಲಿದ್ದರು. 1996ರಲ್ಲಿ ಜನತಾದಳದಿಂದ ಉಚ್ಚಾಟಿಸಲ್ಪಟ್ಟು ಲೋಕಶಕ್ತಿ ಪಕ್ಷವನ್ನು ಸ್ಥಾಪಿಸಿದರು. ತದನಂತರ ಪ್ರಗತಿಪರ ಜನತಾದಳ, ಸಂಯುಕ್ತ ಜನತಾದಳ ಹೀಗೆ ಅನೇಕ ರೂಪಗಳನ್ನು ಪಡೆದ ಪಕ್ಷದಲ್ಲಿ ಗುರುತಿಸಿಕೊಂಡು 2004ರಲ್ಲಿ ನಿಧನರಾದರು.

ಎಸ್.ಎಂ. ಕೃಷ್ಣರವರು ಕಾಂಗ್ರೆಸ್ ಪಕ್ಷದ ವತಿಯಿಂದ ನಾಡಿನ ಮುಖ್ಯಮಂತ್ರಿಯಾಗಿ 1999 ರಿಂದ 2004ರ ತನಕ ಅಧಿಕಾರದಲ್ಲಿದ್ದರು. ಕೇಂದ್ರದ ಸಚಿವರಾಗಿದ್ದರು, ರಾಜ್ಯಪಾಲರಾಗಿದ್ದರು. ಇವರು ಸಹ ಈಗ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿ.ಜೆ.ಪಿ.ಯನ್ನು ಸೇರಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.

ಬಿ.ಎಸ್. ಯಡಿಯೂರಪ್ಪನವರು ಸಹ ಬಿ.ಜೆ.ಪಿ.ಯಿಂದ 2008 ಮುಖ್ಯಮಂತ್ರಿಗಳಾಗಿದ್ದು, ತದನಂತರ ಪಕ್ಷದ ವಿರುದ್ಧ ಬಂಡಾವೆದ್ದು, ಕೆ.ಜೆ.ಪಿ. ಸ್ಥಾಪಿಸಿದ್ದರು. ನಂತರದ ದಿನಗಳಲ್ಲಿ ಮರಳಿ ಬಿ.ಜೆ.ಪಿ.ಗೆ ಬಂದು ಮತ್ತೆ 2019ರಿಂದ 2 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ಒಟ್ಟಾರೆ ನಾಡಿನ ಅನೇಕ ಮುಖ್ಯಮಂತ್ರಿಗಳು ತಮಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟ ಪಕ್ಷಗಳ ವಿರುದ್ಧ ಶಾಶ್ವತವಾಗಿ ಬಂಡಾಯವೆದಿದ್ದಾರೆ. ಇಲ್ಲವೆ ಕೆಲವು ಬಾರಿ ಬಂಡಾಯವೆದ್ದು ಮರಳಿ ತವರು ಮನೆಗೆ ಸೇರಿದ್ದಾರೆ. ಇದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಬದುಕಿನ ನಡವಳಿಕೆಗಳಾಗಿರುತ್ತದೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರ ರಾಜಕೀಯ ನಡವಳಿಕೆಯ ಬಗ್ಗೆ ಅಚ್ಚರಿ ಪಡುವಂತದ್ದೇನು ಇಲ್ಲ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply