ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೋಲಿಸಲು ಹೈಕಮಾಂಡ್ ಪಣ

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಭಿನ್ನಮತ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬಿಕ್ಕಟ್ಟು ಬಗೆಹರಿಸಲು ‌ನಾಯಕತ್ವ ನಡೆಸಿದ ‌ಪ್ರಯತ್ನ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕತ್ವ ಮಧ್ಯಪ್ರವೇಶಿಸಿದೆ. ಅದರಲ್ಲೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಧಾರವಾಡ-ಹುಬ್ಬಳ್ಳಿ ಕೇಂದ್ರ ಕ್ಷೇತ್ರಕ್ಕೆ ನಡ್ಡಾ ಆಗಮಿಸುತ್ತಿದ್ದು, ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ.

ಬುಧವಾರ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಭೇಟಿ ಕೊಟ್ಟು ಸಿದ್ಧಾರೂಢರ ಆಶೀರ್ವಾದ ಪಡೆಯಲಿದ್ದಾರೆ. ಮೂರು ದಿನಗಳ ಕಾಲ ರಾಜ್ಯದಲ್ಲೇ ವಾಸ್ತವ್ಯ ಹೂಡಲಿರುವ ನಡ್ಡಾ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಟಿಕೆಟ್ ಸಿಗದ ಅಸಮಾಧಾನಿತರು, ಪ್ರಭಾರಿಗಳು, ಕಾರ್ಯಕರ್ತರು, ಪದಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.

ಮೂಲಗಳ ಪ್ರಕಾರ, ನಡ್ಡಾ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಶತಾಯ-ಗತಾಯ ಧಾರವಾಡ-ಹುಬ್ಬಳ್ಳಿ ಸೆಂಟ್ರಲ್ ಮತ್ತು ಅಥಣಿ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ವರಿಷ್ಠರು ಇಲ್ಲಿ ಪಕ್ಷ ಬಿಟ್ಟಿರುವ ಇಬ್ಬರನ್ನು ಸೋಲಿಸಿ ಪಾಠ ಕಲಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ನಾಮಪತ್ರ ಸಲ್ಲಿಕೆಯಾದ ನಂತರ ಇದೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಸೇರಿದಂತೆ ಮತ್ತಿತರ ಕಡೆ ಬಹಿರಂಗ ಪ್ರಚಾರ ನಡೆಸಲಿದ್ದಾರೆ.

Leave a Reply